ಬೆಂಗಳೂರು: ಗಿರಿನಗರ ಆಟದ ಮೈದಾನದಲ್ಲಿ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ವಿರೋಧಿಸಿ ಸ್ಥಳೀಯ ನಾಗರಿಕರು, ಮಕ್ಕಳು ಹಾಗೂ ಅವರ ಪೋಷಕರು ಶುಕ್ರವಾರ ಪ್ರತಿಭಟಿಸಿದ ಬೆನ್ನಲ್ಲೇ ಕಾಮಗಾರಿ ಸ್ಥಗಿತಗೊಂಡಿದೆ.
ಮೈದಾನದಲ್ಲಿ ಸೇರಿದ ಸ್ಥಳೀಯ ನಿವಾಸಿಗಳು ಹಾಗೂ ಮಕ್ಕಳು, ಹಲವು ವರ್ಷಗಳಿಂದ ಮಕ್ಕಳ ಆಟಕ್ಕೆ ಬಳಕೆಯಾಗುತ್ತಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಸ್ಥಳೀಯ ಕಾಂಗ್ರೆಸ್ ಮುಖಂಡ ಎಂ.ಬೋರೇಗೌಡ ಮತ್ತು ದಕ್ಷಿಣ ವಿಭಾಗದ ಕೆಲ ಪೊಲೀಸ್ ಅಧಿಕಾರಿಗಳು ಸೇರಿ ಗಿರಿನಗರ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಿರುವುದಕ್ಕೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ರವಿ ಸುಬ್ರಹ್ಮಣ್ಯ, ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಆಗಬೇಕಾದರೂ ಸ್ಥಳೀಯರ ಅಭಿಪ್ರಾಯ ಹಾಗೂ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಮಾಹಿತಿ ಪ್ರಕಾರ ಈ ಸ್ಥಳ ಅಧಿಕೃತವಾಗಿ ಯಾರಿಗೂ ಸ್ಥಳಾಂತರಗೊಂಡಿಲ್ಲ.
ಕಟ್ಟಡ ನಿರ್ಮಾಣ ಸಂಬಂಧ ನಗರ ಪೊಲೀಸ್ ಆಯುಕ್ತರು, ಡಿಸಿಪಿ ಜತೆ ಚರ್ಚಿಸಿದ್ದು, ಕಾಮಗಾರಿ ಸ್ಥಗಿತಗೊಳಿಸುವುದಾಗಿ ಅವರು ತಿಳಿಸಿದ್ದಾರೆ. ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆ ತಿರ್ಮಾನಿಸಲಾಗುವುದು ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, “ಸ್ಥಳದಲ್ಲಿ ಕೇವಲ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿತ್ತು. ಪೊಲೀಸ್ ಠಾಣೆ ನಿರ್ಮಾಣಕ್ಕೆ ಹಣ ಕೂಡ ಬಿಡುಗಡೆಯಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.