ಬೆಂಗಳೂರು : ಪಂಚಾಯತ್ ನಿಂದ ಸಂಸತ್ತಿನವರೆಗಿನ ಎಲ್ಲ ಚುನಾಯಿತ ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗೆ ಪಾರ್ಲಿಮೆಂಟ್‌ನ “ಪ್ರಜಾ ಪ್ರಭುತ್ವಕ್ಕಾಗಿ ಸಂಸದೀಯ ಸಂಶೋ ಧನೆ ಮತ್ತು ತರಬೇತಿ ಸಂಸ್ಥೆ’ (ಪ್ರೈಡ್) ಮೂಲಕ ಕ್ರಿಯಾ ಯೋಜನೆ ರೂಪಿಸ ಲಾಗುತ್ತಿದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ವಿಧಾನಸೌಧದಲ್ಲಿ ಶನಿವಾರ ಮಾತನಾಡಿದ ಅವರು, ಚುನಾಯಿತ ಜನಪ್ರತಿನಿಧಿಗಳ ಕಾರ್ಯಕ್ಷಮತೆ ಹೆಚ್ಚಿಸಿದರೆ ಶಾಸನ ಸಭೆಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡು ಜನರ ಆಶೋತ್ತರಗಳಿಗೆ ಪರಿಣಾಮಕಾರಿ ಮತ್ತು ಉತ್ತರದಾಯಿಗಳಾಗಿ ಸ್ಪಂದಿ ಸಲು ಸಾಧ್ಯವಾಗಲಿದೆ ಎಂದರು.
ದೇಶದ ವಿಧಾನಮಂಡಲಗಳ ಪೀಠಾಸೀನಾಧಿಕಾರಿಗಳ ಸಮ್ಮೇಳನಕ್ಕೆ ನೂರು ವರ್ಷ ತುಂಬಿದೆ. ದೇಶ ಸ್ವಾತಂತ್ರ್ಯಪಡೆದು 75 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ದೇಶಾದ್ಯಂತ “ಆಜಾದಿ ಕಾ ಅಮೃತ್ ಮಹೋತ್ಸವ’ ಸಹ ಆಚರಿಸಲಾಗುತ್ತಿದೆ. ಇವೆರಡರ ಪ್ರಯುಕ್ತ ಪ್ರಜಾತಾಂತ್ರಿಕ ವ್ಯವಸ್ಥೆ ಮತ್ತು ಶಾಸನ ಸಭೆಗಳ ಗುಣಮಟ್ಟ ಹಾಗೂ ಘನತೆ ಹೆಚ್ಚಿಸುವ, ಪಂಚಾಯತ್‌ನಿಂದ ಸಂಸತ್ತಿನವರೆಗಿನ ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗೆ ದೇಶಾದ್ಯಂತ ವಿವಿಧ ಬಗೆಯ 75 ಕಾರ್ಯ ಕ್ರಮ ಗಳನ್ನು ಆಯೋಜಿಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರು ಮತ್ತು ಯುವಕರ ಸಕ್ರಿಯ ಭಾಗವಹಿಸುವಿಕೆಯನ್ನು ಖಾತರಿಪಡಿಸಲು ಯುವ ಸಂಸತ್ತು, ಯುವ ಜನಪ್ರತಿನಿಧಿಗಳಿಗೆ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ, ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಜನಪ್ರತಿನಿಧಿಗಳಿಗಾಗಿ ವಿವಿಧ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಅಕ್ಟೋಬರ್‌ನಲ್ಲಿ ಸಮ್ಮೇಳನ
ವಿಧಾನಮಂಡಲಗಳ ಪೀಠಾಸೀನಾಧಿಕಾರಿಗಳ ಪ್ರಥಮ ಸಮ್ಮೇಳನ 1921ರಲ್ಲಿ ಶಿಮ್ಲಾದಲ್ಲಿ ನಡೆದಿತ್ತು. ಶತಮಾನೋತ್ಸವ ಸಮ್ಮೇಳನವೂ ಶಿಮ್ಲಾದಲ್ಲಿ ನಡೆಯಲಿದ್ದು, ಅಕ್ಟೋಬರ್ 26, 27 ಮತ್ತು 28 ಪ್ರಸ್ತಾವಿತ ದಿನಾಂಕಗಳೆಂದು ನಿಗದಿಪಡಿಸಲಾಗಿದೆ. ಪೀಠಾಸೀನಾಧಿಕಾರಿಗಳ ಜತೆಗೆ ಮುಖ್ಯಮಂತ್ರಿಗಳು, ವಿಪಕ್ಷ ನಾಯಕರು, ರಾಜಕೀಯ ಪಕ್ಷಗಳ ಪ್ರಮುಖ ರನ್ನೂ ಆಹ್ವಾನಿಸಲಾಗುತ್ತಿದೆ. ಶಾಸನ ಸಭೆಗಳ ಚರ್ಚೆಯ ಗುಣಮಟ್ಟ, ಕಾರ್ಯವೈಖರಿ ಜತೆಗೆ ಅವುಗಳ ಘನತೆಯನ್ನು ಕಾಪಾಡುವುದರ ಬಗ್ಗೆ ಚರ್ಚೆಗಳನ್ನು ನಡೆಸಲಾಗುವುದು. ಸಂಸದೀಯ ವ್ಯವಸ್ಥೆಯ ಬಲವರ್ಧನೆಗೆ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ಬಗೆಯ 75 ಕಾರ್ಯಕ್ರಮಗಳ ಪ್ರಸ್ತಾವನೆ ಗಳಿಗೆ ಅನುಮೋದನೆ ನೀಡಲಾಗುವುದು ಎಂದು ಸ್ಪೀಕರ್ ಓಂ ಬಿರ್ಲಾ ಅವರು ತಿಳಿಸಿದರು.