Advertisement
ಕಳೆದ ಲೋಕಸಭಾ ಚುನಾವಣೆಯಲ್ಲೇ ಪಕ್ಷವು ಹಳೇ ಮೈಸೂರು ಭಾಗದಲ್ಲಿ ಉತ್ತಮ ಮತ ಗಳಿಕೆ ಮೂಲಕ ಗಮನಾರ್ಹ ಸಾಧನೆ ತೋರಿದೆ. ಇದೀಗ ರಾಜೀನಾಮೆ ನೀಡಿದವರು ಹಾಗೂ ಸದ್ಯದಲ್ಲೇ ರಾಜೀನಾಮೆ ನೀಡಲಿದ್ದಾರೆ ಎನ್ನಲಾದ ಶಾಸಕರ ಪೈಕಿಯೂ ಹಲವರು ಹಳೇ ಮೈಸೂರು ಭಾಗದವರೇ ಎನ್ನಲಾಗಿದೆ. ಹಾಗಾಗಿ ಈ ಭಾಗದ ಶಾಸಕರನ್ನೇ ಟಾರ್ಗೆಟ್ ಮಾಡಿ ಸೆಳೆದು ಸರ್ಕಾರ ರಚನೆ ಜತೆಗೆ ಪಕ್ಷ ಸಂಘಟನೆಗೂ ಬಿಜೆಪಿ ಒತ್ತು ನೀಡಿದಂತಿರುವುದು ಮೇಲ್ನೋಟಕ್ಕೆ ಕಾಣುತ್ತದೆ.
Related Articles
Advertisement
ಹಳೇ ಮೈಸೂರಿನವರೇ ಟಾರ್ಗೆಟ್: ರಾಜೀನಾಮೆ ನೀಡಿದ 12 ಶಾಸಕರ ಪೈಕಿ ಏಳು ಮಂದಿ ಹಳೇ ಮೈಸೂರು ಭಾಗದವರಾಗಿದ್ದಾರೆ. ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ, ಜೆಡಿಎಸ್‌ನ ಎಚ್.ವಿಶ್ವನಾಥ್, ಕೆ.ಗೋಪಾಲಯ್ಯ, ನಾರಾಯಣಗೌಡ ಅವರು ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಯ ಶಾಸಕರಾಗಿದ್ದಾರೆ. ಎರಡನೇ ಸುತ್ತಿನಲ್ಲಿ 6- 8 ಶಾಸಕರು ರಾಜೀನಾಮೆ ನೀಡಲಿದ್ದಾರೆಂಬ ಮಾತಿದ್ದು, ಅದರಲ್ಲೂ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಭಾಗದ ಶಾಸಕರೇ ಪ್ರಮುಖರಾಗಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಹಳೇ ಮೈಸೂರು ಭಾಗದ ಶಾಸಕರೇ ಟಾರ್ಗೆಟ್ ಎಂಬಂತಿದ್ದು, ಸರ್ಕಾರ ರಚನೆ ಹಾಗೂ ಸಂಘಟನೆಗೆ ಬಿಜೆಪಿ ಯೋಜಿತ ಪ್ರಯತ್ನ ನಡೆಸಿದಂತೆ ಕಾಣುತ್ತಿದೆ.
ಇಷ್ಟು ಸಂಖ್ಯೆಯ ಶಾಸಕರು ರಾಜೀನಾಮೆ ನೀಡಿ ಅಂಗೀಕೃತವಾದರೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಸಂಘಟನಾ ಬಲವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುವುದು ಸುಳ್ಳಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲೇ ಹಳೇ ಮೈಸೂರು ಭಾಗದ ಬಹಳಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿಸಿದ್ದು, ಮತ ಗಳಿಕೆ ಪ್ರಮಾಣವೂ ವೃದ್ಧಿಸಿದೆ. ಇದೀಗ ಶಾಸಕರ ರಾಜೀನಾಮೆ ಬೆಳವಣಿಗೆಯೂ ಹಳೇ ಮೈಸೂರು ಭಾಗದಲ್ಲಿ ಪಕ್ಷ ಇನ್ನಷ್ಟು ಗಟ್ಟಿಯಾಗಿ ನೆಲೆಯೂರಲು ಪೂರಕ ವಾತಾವರಣ ಸೃಷ್ಟಿಸಿದಂತಾಗಿದೆ ಎಂಬುದು ಬಿಜೆಪಿ ಲೆಕ್ಕಾಚಾರ.
ಪಕ್ಷ ಸಂಘಟನೆಗೆ ಅನುಕೂಲ: ರಾಜ್ಯದ ಬಹುತೇಕ ಕಡೆ ಬಿಜೆಪಿಗೆ ಉತ್ತಮ ನೆಲೆಯಿದ್ದು, ಹಳೇ ಮೈಸೂರು ಭಾಗದಲ್ಲಿ ಮಾತ್ರ ಪಕ್ಷ ಸಂಘಟನೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಆದರೆ ಸಂಘಟನೆ ಬಲಪಡಿಸುವ ಕಾರ್ಯ ನಿರಂತರವಾಗಿ ನಡೆದಿದ್ದು, ಅದು ಫಲ ಕೂಡ ನೀಡುತ್ತಿದೆ. ಇದು ಕಳೆದ ಲೋಕಸಭಾ ಚುನಾವಣೆಯಲ್ಲೂ ಸಾಬೀತಾಗಿದೆ. ಹಳೇ ಮೈಸೂರು ಭಾಗದ ಕೆಲ ಶಾಸಕರ ರಾಜೀನಾಮೆ ಬೆಳವಣಿಗೆಯಿಂದ ಸಹಜವಾಗಿಯೇ ಸಂಘಟನೆಗೆ ಹೆಚ್ಚಿನ ಬಲ ಬರುವ ನಿರೀಕ್ಷೆಯಿದೆ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ತಿಳಿಸಿದರು.
* ಎಂ. ಕೀರ್ತಿಪ್ರಸಾದ್