ಎಸ್.ಎಂ.ಕೃಷ್ಣ ಅವರು ಮೈಸೂರು ರಾಮಕೃಷ್ಣ ಆಶ್ರಮದ ಬಗ್ಗೆ ಸಾಕಷ್ಟು ಒಲವು ಹೊಂದಿದ್ದರು. ರಾಮಕೃಷ್ಣ ಆಶ್ರಮದಲ್ಲಿನ ಅವರ ಕಲಿಕೆಯಿಂದ ಬದಕು ರೂಪಿಸಿತು. ಬಾಲ್ಯದಲ್ಲಿ ಆರೇಳು ವರ್ಷಗಳ ಕಾಲ ರಾಮಕೃಷ್ಣ ಆಶ್ರಮದಲ್ಲಿ ಕಳೆದ ಅವರು ಆ ಬಳಿಕವೂ ಆಶ್ರಮದೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು. ಆಶ್ರಮದಲ್ಲಿ ಕಲಿಯುವ ಸಮಯದಲ್ಲಿ ಅವರು ಸಂಗೀತ, ಯೋಗಾಭ್ಯಾಸಗಳನ್ನು ರೂಢಿಸಿಕೊಂಡಿದ್ದರು. ಆಶ್ರಮದ ಭಜನ ತಂಡಗಳೊಂದಿಗೆ ಸೇರಿ ತಬಲಾ ನುಡಿಸುತ್ತಾ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದರು. ಕೆಂಪೇಗೌಡ ಪ್ರಶಸ್ತಿ ದೊರೆತ ಸಮಯದಲ್ಲಿ ಸಿಕ್ಕ 5 ಲಕ್ಷ ರೂ. ಹಾಗೂ ವೈಯಕ್ತಿಕವಾಗಿ 2 ಲಕ್ಷ ರೂ. ಸೇರಿ 7 ಲಕ್ಷ ರೂ.ಗಳನ್ನು ಕೃಷ್ಣ ಅವರು ಆಶ್ರಮಕ್ಕೆ ದೇಣಿಗೆಯಾಗಿ ನೀಡಿದ್ದರು.
ಭಗವದ್ಗೀತೆಯ ಶ್ಲೋಕಗಳು ಬಾಯಿಪಾಠ: ರಾಮಕೃಷ್ಣ ಆಶ್ರಮದಲ್ಲಿದ್ದುಕೊಂಡೇ ವಿದ್ಯಾಭ್ಯಾಸ ನಡೆಸುತ್ತಿದ್ದ ಕೃಷ್ಣ ಅವರು ಎಸೆ ಸೆ ಲ್ಸಿ ಬರುವ ವೇಳೆಗೆ ಭಗವದ್ಗೀತೆಯ 757 ಶ್ಲೋಕಗಳನ್ನು ಪಠಿಸುತ್ತಿದ್ದರು. ಇದಲ್ಲದೇ ಕಠಿನ ಯೋಗಾಭ್ಯಾಸಗಳನ್ನು ಲೀಲಾಜಾಲವಾಗಿ ಅವರು ಮಾಡುತ್ತಿದ್ದರು. ಗಂಡ ಭೇರುಂಡಾಸನ, ಮಯೂರಾಸನಗಳು ಇವರಿಗೆ ಕರಗತವಾಗಿದ್ದವು. ಭಗವದ್ಗೀತೆ ಮತ್ತು ರಾಮಕೃಷ್ಣ ಆಶ್ರಮದಲ್ಲಿ ಕಲಿತ ಪಾಠಗಳನ್ನು ಅವರು ಜೀವನದುದ್ದಕ್ಕೂ ರೂಢಿಸಿಕೊಂಡಿದ್ದರು.
ಚಿತ್ರಕಲಾ ಪರಿಷತ್‌ಗೆ ಭಾರಿ ಕೊಡುಗೆ: ಕಲಾ ಪ್ರೇಮಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್ ಸ್ಥಾಪನೆಯಾಗಲು ಪ್ರಮುಖ ಕೊಡುಗೆ ನೀಡಿದ್ದಾರೆ. 1976ರಲ್ಲಿ ಸ್ಥಾಪಿತವಾದ ಚಿತ್ರಕಲಾ ಪರಿಷತ್‌ಗೆ ಧರ್ಮದರ್ಶಿಯಾಗಿ ಕೃಷ್ಣ ಸೇರಿಕೊಂಡಿದ್ದರು. ಕುಮಾರ ಕೃಪಾ ಅತಿಥಿಗೃಹದ ಭಾಗವಾಗಿದ್ದ ಜಮೀನನ್ನು ಚಿತ್ರಕಲಾ ಪರಿಷತ್‌ಗೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೇ ಇಲ್ಲಿ ಸುಂದರ ಕಲಾಭವನವನ್ನು ಸ್ಥಾಪನೆ ಮಾಡಲು ವಿದೇಶಿ ಶಿಲ್ಪಕಾರರ ನೆರವು ಒದಗಿಸಿದರು.
ಸೋತಾಗೆಲ್ಲಾ ಬೌದ್ಧಿಕತೆಯತ್ತ ಪಯಣ: ಎಸ್.ಎಂ.ಕೃಷ್ಣ ಅವರು ಚುನಾವಣೆಗಳಲ್ಲಿ ಸೋತ ಬಳಿಕ ಆ ಸಮಯವನ್ನು ಬೌದ್ಧಿಕತೆ ಹೆಚ್ಚಳಕ್ಕೆ ಬಳಸಿಕೊಳ್ಳುತ್ತಿದ್ದರು. ಪುಸ್ತಕಗಳನ್ನು ಓದುವುದು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮಾಡುತ್ತಿದ್ದರು. ಅಲ್ಲದೇ ಹೆಚ್ಚಿನ ಸಮಯವನ್ನು ಟೆನಿಸ್ ಆಡುವುದರಲ್ಲಿ ಕಳೆಯುತ್ತಿದ್ದರು.
ಮಾಧ್ಯಮದವರ ಸಲಹೆಗೆ ಮನ್ನಣೆ: ಕೃಷ್ಣ ಅವರು ಮುಖ್ಯಮಂತ್ರಿ ಹಾಗೂ ಸಚಿವರಾಗಿದ್ದ ಸಮಯದಲ್ಲಿ ಮಾಧ್ಯಮದವರೊಂದಿಗೆ ಚರ್ಚಿಸಿ ಅವರ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದರು. ಪ್ರತೀಬಾರಿ ಸಂದರ್ಶನ ಅಥವಾ ಪತ್ರಿಕಾಗೋಷ್ಠಿ ಮುಗಿದ ಬಳಿಕ ಸಲಹೆಗಳನ್ನು ಪಡೆಯುತ್ತಿದ್ದರು. ಮಾಧ್ಯಮಗಳ ಜತೆ ಸದಾ ಕಾಲ ಸಂಪರ್ಕದಲ್ಲಿರಲು ಮಾಧ್ಯಮ ಸಮನ್ವಯಕಾರ ಎಂಬ ಹುದ್ದೆಯನ್ನು ಸೃಷ್ಟಿಸಿದ್ದರು. ಅಲ್ಲದೇ ಮಾಧ್ಯಮಗಳ ಎದುರು ಸುಮ್ಮನೆ ಮಾತನಾಡಬಾರದು. ಒಂದು ವೇಳೆ ಮಾತನಾಡಿದರೆ ಅದನ್ನು ಜಾರಿ ಮಾಡ ಬೇಕು ಎಂಬ ತತ್ತಕ್ಕೆ ಅವರು ಬದ್ಧರಾಗಿದ್ದರು.
ಎಮ್ಮೆ ಸವಾರಿ ಮಾಡಿದ್ದ ಕೃಷ್ಣ
ಸಂಪತ್ತಿಗೆ ಸವಾಲ್ ಚಲನಚಿತ್ರದಲ್ಲಿ ಡಾ| ರಾಜ್‌ಕುಮಾರ್ ಅವರು ಎಮ್ಮೆ ಮೇಲೆ ಕುಳಿತು ಸವಾರಿ ಮಾಡಿದ್ದನ್ನು ನೋಡಿದ್ದ ಕೃಷ್ಣ ಅವರು ಅದರಿಂದ ಸ್ಫೂರ್ತಿ ಪಡೆದುಕೊಂಡು ಎಮ್ಮೆ ಸವಾರಿ ಮಾಡಿದ್ದಾರೆ. ಬಾಲ್ಯದಲ್ಲಿ ಸ್ನೇಹಿತರೊಂದಿಗೆ ನಡೆದು ಹೋಗುವ ಸಮಯದಲ್ಲಿ ಎಮ್ಮೆಗಳನ್ನು ನೋಡಿದ ಕೃಷ್ಣ ಅವರು ಧೈರ್ಯ ಮಾಡಿ ಎಮ್ಮೆ ಮೇಲೆ ಹತ್ತಿ ಕುಳಿತರು. ಆದರೆ ಮೂಗುದಾರವಿಲ್ಲದ ಎಮ್ಮೆ ನಿಯಂತ್ರಣಕ್ಕೆ ಸಿಗದೇ, ಕೃಷ್ಣ ಅವರನ್ನು ಬೀಳಿಸಿ ಓಡಿತ್ತು. ಹೀಗಾಗಿ ಕೈ ಮುರಿದುಕೊಂಡ ಕೃಷ್ಣ ಅವರು 3 ತಿಂಗಳ ಕಾಲ ಮಲಗಿದ್ದರು.