Advertisement

ರೂಪಾಂತರದ ಹೊಸ್ತಿಲಲ್ಲಿ ಹಳೇ ಬಸ್‌ನಿಲ್ದಾಣ

01:42 PM Jun 28, 2020 | Suhan S |

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆಯಡಿ ಇಲ್ಲಿನ ಹಳೇ ಬಸ್‌ನಿಲ್ದಾಣವನ್ನು ಅತ್ಯಾಧುನಿಕವಾಗಿ ನಿರ್ಮಾಣ ನಿಟ್ಟಿನಲ್ಲಿ, ಇರುವ ಕಟ್ಟಡ ತೆರವಿಗೆ 2-3 ದಿನಗಳಲ್ಲಿ ಟೆಂಡರ್‌ ಸಿದ್ಧಗೊಳ್ಳಲಿದ್ದು, ಇನ್ನೊಂದು ವಾರದೊಳಗೆ ಹಳೇ ಬಸ್‌ ನಿಲ್ದಾಣವನ್ನು ಸ್ಮಾರ್ಟ್‌ ಸಿಟಿ ಯೋಜನೆ ವಶಕ್ಕೆ ನೀಡಲು ವಾಯವ್ಯ ಸಾರಿಗೆ ಸಂಸ್ಥೆ ಒಪ್ಪಿಕೊಂಡಿದೆ.

Advertisement

ಸ್ಮಾರ್ಟ್‌ ಸಿಟಿ ಯೋಜನೆ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ಸಹಭಾಗಿತ್ವದಲ್ಲಿ ಹಳೇ ಬಸ್‌ ನಿಲ್ದಾಣವನ್ನು ಅತ್ಯಾಧುನಿಕವಾಗಿ ನಿರ್ಮಾಣಕ್ಕೆ ಪರಸ್ಪರ ಒಡಬಂಡಿಕೆ ಮಾಡಿಕೊಳ್ಳಲಾಗಿದ್ದು, ಈ ಕುರಿತಾಗಿ ಉಭಯ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು, ಹಿರಿಯ ಅಧಿಕಾರಿಗಳು ಹಲವು ಬಾರಿ ಚರ್ಚಿಸಿ ಒಮ್ಮತಕ್ಕೆ ಬಂದಿದ್ದಾರೆ.

ವಾಕರಸಾ ಸಂಸ್ಥೆಯಿಂದ ಎನ್‌ಒಸಿ: ಹಳೇ ಬಸ್‌ ನಿಲ್ದಾಣವನ್ನು ಒಟ್ಟಾರೆ 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿತ್ತು. ಇದರಲ್ಲಿ 30 ಕೋಟಿ ರೂ. ಸ್ಮಾರ್ಟ್‌ ಸಿಟಿ ಯೋಜನೆಯಡಿ, 40 ಕೋಟಿ ರೂ. ವಾಯವ್ಯ ಸಾರಿಗೆ ಭರಿಸುವ ಒಡಂಬಡಿಕೆ ಆಗಿತ್ತು.

ಲಾಕ್‌ಡೌನ್‌ ಇನ್ನಿತರ ಆರ್ಥಿಕ ಸಂಕಷ್ಟ ಸ್ಥಿತಿಯಲ್ಲಿ 40 ಕೋಟಿ ರೂ. ನೀಡಿಕೆ ವಾಯವ್ಯ ಸಾರಿಗೆ ಸಂಸ್ಥೆಗೆ ಸಾಧ್ಯವಾಗದ್ದರಿಂದ ಉದ್ದೇಶಿತ ಯೋಜನೆ ವಿಳಂಬಕ್ಕೆ ಕಾರಣವಾಗಿತ್ತು. ಆದರೆ, ಇತ್ತೀಚೆಗೆ ಅವಳಿನಗರಕ್ಕೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವರು ಧಾರವಾಡದಲ್ಲಿ ನಡೆಸಿದ ಸಭೆಯಲ್ಲಿ, ಸ್ಮಾರ್ಟ್‌ ಸಿಟಿ ಯೋಜನೆ ಪಾಲಿನ 30 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಿ ಬಿಡಿ, ಮುಂದೆ ವಾಯವ್ಯ ಸಾರಿಗೆಯವರು 40 ಕೋಟಿ ರೂ. ನೀಡಿದರೂ ಅದರ ಬಳಕೆಗೂ ಅನುಕೂಲವಾಗುವ ರೀತಿಯಲ್ಲಿ ನಿರ್ಮಾಣ ಯೋಜನೆ ಕೈಗೊಳ್ಳಿ ಎಂದು ಸೂಚಿಸಿದ್ದರು.

ಸಚಿವರ ಸೂಚನೆ ಹಿನ್ನೆಲೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಹಾಗೂ ವಾಯವ್ಯ ಸಾರಿಗೆ ಸಂಸ್ಥೆಯ ಇಬ್ಬರು ವ್ಯವಸ್ಥಾಪಕ ನಿರ್ದೇಶಕರು, ತಾಂತ್ರಿಕ ಅಧಿಕಾರಿಗಳ ತಂಡ ಪರಸ್ಪರ ಚರ್ಚಿಸಿದ್ದು, ಕಟ್ಟಡ ನಿರ್ಮಾಣ ಕಾರ್ಯಾರಂಭಕ್ಕೆ ಒಪ್ಪಿಗೆ ಸೂಚಿಸಿದ್ದು, ಪೂರಕವಾಗಿ ಹಳೇ ಬಸ್‌ ನಿಲ್ದಾಣದಲ್ಲಿ ಇರುವ ಕಟ್ಟಡ ತೆರವು ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೆ ವಾಯವ್ಯ ಸಾರಿಗೆ ಸಂಸ್ಥೆ ಆಕ್ಷೇಪಣಾ ರಹಿತ ಪ್ರಮಾಣಪತ್ರ (ಎನ್‌ಒಸಿ)ನೀಡಿದೆ. ಇನ್ನೊಂದು ತಿಂಗಳಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ 30 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣದ ಟೆಂಡರ್‌ ಕೂಡ ರೂಪುಗೊಳ್ಳಲಿದೆ.

Advertisement

2-3 ದಿನಗಳಲ್ಲಿ ತೆರವು ಟೆಂಡರ್‌ :  ಹಳೇ ಬಸ್‌ ನಿಲ್ದಾಣದ ಪ್ರಸ್ತುತ ಇರುವ ಕಟ್ಟಡ ತೆರವಿಗೆ 2-3 ದಿನಗಳಲ್ಲಿ ಟೆಂಡರ್‌ ಸಿದ್ಧಗೊಳ್ಳಲಿದ್ದು, ಇದಕ್ಕೆ ಅಲ್ಪಕಾಲದ ಟೆಂಡರ್‌ ಕರೆಯಲಾಗುತ್ತದೆ. ಇದರ ಜತೆಗೆ ಒಂದು ತಿಂಗಳೊಳಗೆ ನೂತನ ಕಟ್ಟಡದ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಸಿದ್ಧಗೊಳ್ಳಲಿದೆ. ಡಿಪಿಆರ್‌ಗೆ ಸ್ಮಾರ್ಟ್‌ ಸಿಟಿ ಯೋಜನೆ ಹಾಗೂ ವಾಯವ್ಯ ಸಾರಿಗೆ ಸಂಸ್ಥೆಗಳು ಒಪ್ಪಿಗೆ ನಂತರ ತಾಂತ್ರಿಕ ಕಮಿಟಿಯಿಂದ ಒಪ್ಪಿಗೆ ಪಡೆದು, ಟೆಂಡರ್‌ ಕರೆಯಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಕೆಲವೇ ದಿನಗಳಲ್ಲಿ ಇಲ್ಲಿನ ಹಳೇ ಬಸ್‌ ನಿಲ್ದಾಣ ನೂತನ ರೂಪ ಪಡೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನಿರಿಸಲಿದೆ.

ಜಿ+3 ಯೋಜನೆ  : ಹಳೇ ಬಸ್‌ ನಿಲ್ದಾಣವನ್ನು ಆದಾಯ ಮೂಲವಾಗಿಯೂ ರೂಪಿಸುವ ನಿಟ್ಟಿನಲ್ಲಿ ಜಿ+3 ಮಹಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಬೇಸ್‌ಮೆಂಟ್‌ನಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗುತ್ತದೆ. ನೂತನ ನಿಲ್ದಾಣದಲ್ಲಿ 3 ಬಿಆರ್‌ಟಿಎಸ್‌ ಬಸ್‌ ಲೈನ್‌, 5 ಉಪನಗರ ಬಸ್‌ಗಳ ಲೈನ್‌, 8 ಗ್ರಾಮೀಣ ಮಾರ್ಗಗಳ ಬಸ್‌ಗಳು, ಇತರೆ ಬಸ್‌ಗಳ ಲೈನ್‌ಗಳು, ಪ್ರಯಾಣಿಕರಿಗೆ ವ್ಯವಸ್ಥೆ, ಶೌಚಾಲಯ, ಫ‌ುಡ್‌ ಕೋರ್ಟ್‌, ವಾಚ್‌ ಆ್ಯಂಡ್‌ ವಾರ್ಡ್‌, ಇತರೆ ವಾಣಿಜ್ಯ ಮಳಿಗೆಗಳು ನಿರ್ಮಾಣಗೊಳ್ಳಲಿವೆ. ಪ್ರಸ್ತುತ ಸ್ಮಾರ್ಟ್‌ ಸಿಟಿ ಯೋಜನೆಯ ಅಂದಾಜು 30 ಕೋಟಿ ರೂ. ವೆಚ್ಚದಲ್ಲಿ ಬೇಸ್‌ಮೆಂಟ್‌ ಹಾಗೂ ಗ್ರೌಂಡ್‌ಪ್ಲೋರ್‌ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ತನ್ನ ಪಾಲಿನ 40 ಕೋಟಿ ರೂ. ಗಳಲ್ಲಿ ನಿರ್ಮಾಣಕ್ಕೆ ಮುಂದಾದರೂ ಅನುಕೂಲಕರವಾಗುವ ನಿಟ್ಟಿನಲ್ಲಿ ವಿನ್ಯಾಸ ರೂಪುಗೊಳ್ಳುತ್ತಿದೆ

ವಾರದೊಳಗೆ ನಮ್ಮ ತಾಬಾಕ್ಕೆ ವಾಯವ್ಯ ಸಾರಿಗೆ ಸಂಸ್ಥೆ ಕಟ್ಟಡ ತೆರವಿಗೆ ಎನ್‌ಒಸಿ ನೀಡಿದ್ದು, ವಾರದೊಳಗೆ ನಮ್ಮ ತಾಬಾಕ್ಕೆ ನೀಡುವುದಾಗಿಯೂ ತಿಳಿಸಿದೆ. ಇನ್ನೊಂದು ವಾರದೊಳಗೆ ಹಳೇ ಬಸ್‌ ನಿಲ್ದಾಣದ ಪೂರ್ಣ ಪ್ರಮಾಣದ ಕಾರ್ಯಾಚರಣೆ ಹೊಸೂರಿನಲ್ಲಿನ ಬಸ್‌ ನಿಲ್ದಾಣಕ್ಕೆ ವರ್ಗಾವಣೆಗೊಳಿಸುವುದಾಗಿ ಸಂಸ್ಥೆ ತಿಳಿಸಿದ್ದು, 2-3 ದಿನಗಳಲ್ಲಿಯೇ ಕಟ್ಟಡ ತೆರವು ಟೆಂಡರ್‌ ಸಿದ್ಧಪಡಿಸಲಾಗುವುದು. ಇನೊಂದು ತಿಂಗಳಲ್ಲಿ ನೂತನ ಕಟ್ಟಡ ಡಿಪಿಆರ್‌ ಸಿದ್ಧಗೊಳ್ಳಲಿದೆ.- ಎನ್‌.ಎಚ್‌. ನರೇಗಲ್ಲ, ವಿಶೇಷಾಧಿಕಾರಿ, ಹು-ಧಾ ಸ್ಮಾರ್ಟ್‌ ಸಿಟಿ ಯೋಜನೆ

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next