ಕನಕಪುರ:ಅಧಿಕಾರಿಗಳು ಸಣ್ಣಪುಟ್ಟ ಸಮಸ್ಯೆಗೆ ಇಂದು ನಾಳೆ ಎಂದು ಸಾರ್ವಜನಿಕರನ್ನು ಅಲೆದಾಡಿಸಬಾರದು ಎಂದು ಶಾಸಕಿ ಅನಿತಾಕುಮಾರಸ್ವಾಮಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕಿನ ಹಾರೋಹಳ್ಳಿಯ ಸ್ಕೌಟ್ ಅಂಡ್ ಗೈಡ್ಸ್ ಭವನದಲ್ಲಿ ನಡೆದ ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಒಂದೆರಡು ದಿನದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದೆ ವಿಳಂಬ ಮಾಡುತ್ತಾರೆ ಎಂದು ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿದೆ. ಪೌತಿ ಖಾತಿ, ಪಿಂಚಣಿ, ವಿಧವಾ ವೇತನ ಸೇರಿದಂತೆ ಇನ್ನಿತರ ಸಮಸ್ಯೆಗೆ ಸಾರ್ವಜನಿಕರನ್ನು ಸುಖಾ ಸುಮ್ಮನೆ ಅಲೆದಾಡಿಸದೆ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಬಸ್ ತಂಗುದಾನ ನಿರ್ಮಾಣಕ್ಕೆ ಹಣ ಬಿಡುಗಡೆ: ಇತ್ತೀಚಿಗೆ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಗ್ರಾಮೀಣ ಭಾಗದ ಬಸ್‌ನಿಲ್ದಾಣಗಳಲ್ಲಿ ತಂಗುದಾಣಗಳಿಲ್ಲದೆ ಶಾಲಾ ಮಕ್ಕಳು ಬಿಸಿಲಿನಲ್ಲಿ ಬಸ್‌ಗಾಗಿ ಕಾದು ನಿಲ್ಲುವಂತಾಗಿದೆ. ಅಲ್ಲಲ್ಲಿ ತಂಗುದಾಣ ನಿರ್ಮಿಸಲು ಸಾರ್ವಜನಿಕರಿಂದ ಅಹವಾಲುಗಳು ಬಂದಿವೆ.
ಹಾರೋಹಳ್ಳಿ- ಮರಳವಾಡಿ ಹೋಬಳಿ ವ್ಯಾಪ್ತಿಗಳಲ್ಲಿ ಶಾಸಕರ ನಿಧಿಯಲ್ಲಿ ಅವಶ್ಯವಿರುವ ಕಡೆ ತಂಗುದಾನ ನಿರ್ಮಿಸಲು ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮದಲ್ಲೂ ಗ್ರಾಮಸಭೆ ನಡೆಸಲಿದ್ದು, ಗ್ರಾಮಸ್ಥರಿಂದ ಯಾವುದೇ ಸಮಸ್ಯೆಗಳು ಬಾರದ ಹಾಗೆ ನೋಡಿಕೊಳ್ಳಿ ಎಂದರು.
ತಾಪಂ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ಬಾಬು, ತಹಶೀಲ್ದಾರ್ ವರ್ಷಾ ಒಡೆಯರ್, ಹಾರೋಹಳ್ಳಿ ಹೋಬಳಿ ಪಿಡಿಒ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.