Advertisement

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

11:46 PM Sep 25, 2023 | Team Udayavani |

ಮಂಗಳೂರು: ಮಂಗಳೂರಿನ ಮೀನುಗಾರಿಕೆ ದಕ್ಕೆಯಲ್ಲಿ ಈದ್‌ ಮಿಲಾದ್‌ ರಜೆಯ ಕುರಿತು ಅಳವಡಿಸಿದ ಬ್ಯಾನರ್‌ ವಿವಾದಕ್ಕೆ ಕಾರಣವಾಗಿದೆ.

Advertisement

“ಈದ್‌ ಮಿಲಾದ್‌ ಹಿನ್ನೆಲೆಯಲ್ಲಿ ವ್ಯಾಪಾರಸ್ಥರ ಸಂಘದ ನಿರ್ಧಾರದಂತೆ ಸೆ. 28ರಂದು ಮುಂಜಾನೆ 3.45ರ ಅನಂತರ ಹಸಿ ಮೀನು ವ್ಯಾಪಾರಿಗಳು ವ್ಯಾಪಾರ ಮಾಡದೆ ಕಡ್ಡಾಯವಾಗಿ ರಜೆ ಮಾಡಬೇಕು. ರಜೆ ಮಾಡದೆ ಕಾನೂನು ಉಲ್ಲಂ ಸಿದರೆ 1 ತಿಂಗಳ ಕಾಲ ವ್ಯಕ್ತಿಯು ಬಂದರು ದಕ್ಕೆಯಲ್ಲಿ ವ್ಯಾಪಾರ ಮಾಡದಂತೆ ಸಂಘ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ದಂಡನೆ ವಿಧಿಸಬೇಕಾಗುತ್ತದೆ’ ಎಂಬದಾಗಿ ಬ್ಯಾನರ್‌ನಲ್ಲಿ ಬರೆಯಲಾಗಿದೆ. ಈ ಬ್ಯಾನರ್‌ಗೆ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಕ್ರಮಕ್ಕೆ ಒತ್ತಾಯ
“ಬೆದರಿಕೆಯ ತಂತ್ರಗಳಿಗೆ ಹಿಂದೂ ಮೀನುಗಾರರು ಮಣಿಯಬಾರದು. ಈ ಬಗ್ಗೆ ಪೊಲೀಸ್‌ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಒತ್ತಾಯಿಸಿದ್ದಾರೆ.

ಶ್ರೀರಾಮಸೇನೆ ಖಂಡನೆ
ಇನ್ನೊಂದು ಧರ್ಮದ ಮೀನುಗಾರರನ್ನು ಕೆರಳಿಸುವ ರೀತಿಯಲ್ಲಿ ಪ್ರಚೋದನೆ ನೀಡಿರುವುದು ಖಂಡನೀಯ ಎಂದು ಶ್ರೀರಾಮಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್‌ ತಿಳಿಸಿದ್ದಾರೆ.
“ಬ್ಯಾನರ್‌ನಿಂದ ಗೊಂದಲವಾಗಿಲ್ಲ- ಅನ್ಯೋನ್ಯತೆಯಿಂದ ಇದ್ದೇವೆ’ ಬ್ಯಾನರ್‌ ಅಳವಡಿಸಿರುವುದರಿಂದ ಮೀನು ಗಾರರಲ್ಲಿ ಯಾವುದೇ ಗೊಂದಲ ಉಂಟಾಗಿಲ್ಲ. ಎಲ್ಲ ಧರ್ಮಗಳ ಹಬ್ಬಗಳಿಗೂ ರಜೆ ನಿಗದಿಗೊಳಿಸಿ ನಿರ್ಣಯಿಸಲಾಗಿದೆ. ಆದರೆ ಕೆಲವರು ರಜೆ ಇದ್ದರೂ, ಬೆಳಗ್ಗೆ 6 ಗಂಟೆಯವರೆಗೂ ಕೆಲಸ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಹಸಿ ಮೀನು ವ್ಯಾಪಾರಸ್ಥರ ಸಂಘದವರು ಬ್ಯಾನರ್‌ ಹಾಕಿರಬಹುದು.

ಎಲ್ಲರೂ ಅನ್ಯೋನ್ಯತೆಯಿಂದ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಉಮೇಶ್‌ ಟಿ. ಕರ್ಕೇರ ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿಯ ಕಾರ್ಯಾಧ್ಯಕ್ಷ ಭರತ್‌ ಕುಮಾರ್‌ ಉಳ್ಳಾಲ್‌ ಪ್ರತಿಕ್ರಿಯಿಸಿದ್ದಾರೆ.

Advertisement

“ಸಂಘಗಳಲ್ಲಿ ನಿರ್ಣಯಿಸಿದಂತೆ ಬ್ಯಾನರ್‌’
ಸಂಘಗಳ ನಿರ್ಣಯದಂತೆ ಪೂರ್ವ ನಿರ್ಧರಿತ ಪದ್ಧತಿಯಂತೆ ಸೆ. 28ರಂದು ಈದ್‌ ಮಿಲಾದ್‌ ಪ್ರಯುಕ್ತ ಕಡ್ಡಾಯ ರಜೆ ಪಾಲಿಸುವ ಬಗ್ಗೆ ಫ್ಲೆಕ್ಸ್‌ ಅಳವಡಿಸಲಾಗಿದೆ. ಬಾಕೂìರು ಪೂಜೆ, ಉಚ್ಚಿಲ ಪೂಜೆ, ಗಣೇಶ ಚತುರ್ಥಿ, ಈದ್‌ ಉಲ್‌ ಫಿತರ್‌, ಬಕ್ರೀದ್‌, ಈದ್‌ ಮಿಲಾದ್‌, ಗುಡ್‌ ಫ್ರೈಡೇ ಮತ್ತು ಕ್ರಿಸ್ಮಸ್‌ ಎಂಬಿತ್ಯಾದಿ ಶುಭ ದಿನಗಳಲ್ಲಿ ಕೂಡಾ ಸಂಘಗಳ ನಿರ್ಣಯದಂತೆ ಮಾರಾಟಗಾರರು ಕಡ್ಡಾಯ ರಜೆ ಹೊಂದಿ ಆ ದಿನ ಮೀನು ಮಾರಾಟ ಚಟುವಟಿಕೆ ಸ್ಥಗಿತಗೊಳಿಸುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಕೆಲವರು ತಪ್ಪು ಗ್ರಹಿಕೆಯ ಮಾಹಿತಿ ಹಂಚುತ್ತಿದ್ದಾರೆ ಎಂದು ಮಂಗಳೂರು ದಕ್ಕೆ ಹಸಿಮೀನು ಮಾರಾಟಗಾರರ, ಕಮಿಷನ್‌ ಏಜೆಂಟರ ಸಂಘದ ಅಧ್ಯಕ್ಷ ಕೆ. ಅಶ್ರಫ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next