Advertisement

ಕಾಂಗ್ರೆಸ್‌ ವಿರುದ್ಧ ಒಬಿಸಿ ಅಸ್ತ್ರ?

11:54 PM Mar 28, 2023 | Team Udayavani |

ಬೆಂಗಳೂರು: ಕಳೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರಕಾರ ತೆಗೆದುಕೊಂಡ ಮೀಸಲು ನಿರ್ಧಾರದ ವಿರುದ್ಧ ಕಾಂಗ್ರೆಸ್‌ ನಾಯಕರು ತಿರುಗಿ ಬಿದ್ದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಜೆಪಿ ಇದೀಗ ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ “ಒಬಿಸಿ ಅಸ್ತ್ರ’ ಪ್ರಯೋಗಕ್ಕೆ ಮುಂದಾಗಿದೆ.

Advertisement

ಕರ್ನಾಟಕದ ಒಬಿಸಿ ಮೀಸಲಾತಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ರಾಹುಲ್‌ ಪ್ರಕರಣ ಎರಡೂ ಬಿಲ್ಲಿನಲ್ಲೂ “ಒಬಿಸಿ’ ಬಾಣವನ್ನೇ ಕಾಂಗ್ರೆಸ್‌ನತ್ತ ನೆಟ್ಟಿರುವ ಬಿಜೆಪಿ ಕಾಂಗ್ರೆಸನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟೀಕೆ ನಡೆಸುತ್ತಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮತಿ ಇರಾನಿ ವಾಗ್ಧಾಳಿ ನಡೆಸಿದ್ದು, ರಾಹುಲ್‌ ಹಿಂದುಳಿದ ವರ್ಗಗಳ ವಿರೋಧಿ ಎಂದು ಆಪಾದಿಸಿದ್ದಾರೆ. ಇನ್ನೊಂದೆಡೆ ಮೀಸಲು ನೀತಿಯ ವಿರುದ್ಧ ಮಾತನಾಡಿರುವ ರಾಜ್ಯ ಕಾಂಗ್ರೆಸ್‌ ನಾಯಕರನ್ನು ಹಿಂದುಳಿದ ವರ್ಗದ ದ್ವೇಷಿಗಳು ಎಂದು ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿನಲ್ಲಿ ಟೀಕಿಸಿದ್ದಾರೆ. ಹೀಗಾಗಿ ಚುನಾವಣ ಹೊಸ್ತಿಲಲ್ಲಿ ಮತ್ತೊಂದು ರಾಜಕೀಯ ಅಸ್ತ್ರ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದ್ದು, ಕಾಂಗ್ರೆಸ್‌ಗೆ ಇಕ್ಕಟ್ಟು ಸೃಷ್ಟಿಸುವ ಸಂಭವವಿದೆ.

ತಾವು ಅಧಿಕಾರಕ್ಕೆ ಬಂದರೆ ಮುಸ್ಲಿಮರ ಮೀಸಲಾತಿ ಕಿತ್ತು ಹಾಕಿರುವ ರಾಜ್ಯ ಸರಕಾರದ ನಿರ್ಧಾರವನ್ನು ರದ್ದು ಮಾಡುತ್ತೇವೆ ಎಂದು ಗುಡುಗಿದ್ದ ಕಾಂಗ್ರೆಸ್‌ ನಾಯಕರಿಗೆ ಈ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಇದರ ಜತೆಗೆ ದಲಿತರ ಒಳಮೀಸಲಾತಿ, ಲಿಂಗಾಯತ ಹಾಗೂ ಒಕ್ಕಲಿಗ ಮೀಸಲಾತಿ ಅಸ್ತ್ರವನ್ನೂ ತನ್ನ ಬತ್ತಳಿಕೆಯಲ್ಲಿ ಸೇರಿಸಿಕೊಂಡಿದೆ. ಯಾವುದೇ ವರ್ಗದ ವಿರುದ್ಧ ಮಾತನಾಡಿದರೂ ಕಷ್ಟ ಎಂಬ ಸನ್ನಿವೇಶ ಸೃಷ್ಟಿಸಿ ಕಾಂಗ್ರೆಸ್‌ ನಾಯಕರನ್ನು ಖೆಡ್ಡಾಕ್ಕೆ ಕೆಡವಲು ಬಿಜೆಪಿ ಮುಂದಾಗಿದೆ.

ಬಿಜೆಪಿ ವಾದವೇನು?: ಧರ್ಮದ ಆಧಾರದ ಮೇಲೆ ಉದ್ಯೋಗ, ಶಿಕ್ಷಣ ಹಾಗೂ ರಾಜಕೀಯ ಮೀಸಲಾತಿ ನೀಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೆ ಆಂಧ್ರ ಪ್ರದೇಶದಲ್ಲಿ ಹಿಂದುಳಿದ ವರ್ಗಕ್ಕೆ ನೀಡಲಾಗಿದ್ದ ಮೀಸಲನ್ನು ಕಸಿದು ಮುಸ್ಲಿಮರಿಗೆ ನೀಡಲಾಗಿತ್ತು. ರಾಜ್ಯದಲ್ಲೂ ಇದೇ ಮಾದರಿಯಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಿದ್ದರಿಂದ ಹಿಂದುಳಿದ ಸಮುದಾಯಕ್ಕೆ ಅನ್ಯಾಯವಾಗಿದೆ. ಈ ನೀತಿಯನ್ನು ದಶಕಗಳ ಕಾಲ ಪ್ರಶ್ನಿಸದೇ ಇರುವ ಮೂಲಕ ಕಾಂಗ್ರೆಸ್‌ ಅನ್ಯಾಯ ಮಾಡಿದೆ. ಈ ಐತಿಹಾಸಿಕ ಪ್ರಮಾದಕ್ಕೆ ಬಿಜೆಪಿ ಪರಿಹಾರ ಕಲ್ಪಿಸಿದೆ.

Advertisement

ಆದರೆ ಕಾಂಗ್ರೆಸ್‌ ನಾಯಕರು ಸಂಪುಟ ಸಭೆಯಲ್ಲಿ ತೆಗೆದುಕೊಂಡ ಈ ನಿರ್ಧಾರವನ್ನು ರದ್ದು ಮಾಡುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಯಾರಿಗೆ ಕೊಟ್ಟ ಮೀಸಲಾತಿ ಪ್ರಮಾಣವನ್ನು ಕಸಿದು ಮುಸ್ಲಿಂ ಸಮುದಾಯಕ್ಕೆ ನೀಡುತ್ತಾರೆ? ಮುಸ್ಲಿಂ ಓಲೈಕೆಗಾಗಿ ನೀವು ಮತ್ತೆ ಕೈ ಹಾಕುವುದು ಹಿಂದುಳಿದ ವರ್ಗಗಳ ಮೀಸಲು ಬುಟ್ಟಿಗಲ್ಲವೇ? ಎಂದು ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿ| ದೇವರಾಜ ಅರಸು ಸಹಿತ ಕಾಂಗ್ರೆಸ್‌ ಕಾಲಾವಧಿಯಲ್ಲಿ ಹಿಂದುಳಿದ ವರ್ಗಗಳ ನಾಯಕರಿಗೆ ಆದ ಅನ್ಯಾಯಗಳ ಬಗ್ಗೆಯೂ ತೇಜಸ್ವಿ ಸೂರ್ಯ ಪ್ರಸ್ತಾವಿಸಿದ್ದಾರೆ. ಅಲ್ಲದೆ ಹಿಂದುಳಿದ ಸಮುದಾಯಕ್ಕೆ ಮಂಡಲ ಆಯೋಗದ ಫ‌ಲ ನೀಡುವಲ್ಲಿಯೂ ಕಾಂಗ್ರೆಸ್‌ ಅಡ್ಡಗಾಲಾಗಿತ್ತು ಎಂದು ಬಿಜೆಪಿ ವಾದ ಮಂಡಿಸುತ್ತಿದೆ. ಈ ಮೂಲಕ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ವಿರೋಧಿ ಎಂಬ ಭಾವನೆ ಬಲಗೊಳಿ ಸುವುದಕ್ಕೆ ಬಿಜೆಪಿ ಮುಂದಾಗಿದ್ದು, ಚುನಾವಣ ವರ್ಷದಲ್ಲಿ ಈಗ ಮತ್ತೂಂದು ಚರ್ಚೆ ಆರಂಭವಾದಂತಾಗಿದೆ.

ಡ್ಯಾಮೇಜ್‌ ಕಂಟ್ರೋಲ್‌?: ಈ ಮಧ್ಯೆ ಮೈಸೂರಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಅವರು ಮೀಸಲಾತಿಗೆ ಕಾಂಗ್ರೆಸ್‌ ವಿರೋಧ ಇರಲಿಲ್ಲ. ಈ ಮೊದಲೇ ಒಳಮೀಸಲಾತಿಗೆ ಕಾಂಗ್ರೆಸ್‌ ಒಲವು ತೋರಿಸಿತ್ತು ಎಂದಿದ್ದಾರೆ. ಆದರೆ ಬಿಜೆಪಿ ಮೂರೂವರೆ ವರ್ಷದವರೆಗೆ ಸುಮ್ಮನಿದ್ದು ಈಗ ಘೋಷಣೆ ಮಾಡಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಮಾಡಬೇಕಿತ್ತು ಎಂದು ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದಾರೆ.

ಕಾಂಗ್ರೆಸ್‌ಗೇಕೆ ಸಂಕಷ್ಟ?
ರಾಜ್ಯ ಸರಕಾರ ಮುಸ್ಲಿಮರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ತೆಗೆದು ಲಿಂಗಾಯತರು ಮತ್ತು ಒಕ್ಕಲಿಗರಿಗೆ ತಲಾ ಶೇ.2ರಷ್ಟು ಹಂಚಿಕೆ ಮಾಡಿದೆ. ಈಗ ಕಾಂಗ್ರೆಸ್‌ ನಾಯಕರು ಇಡೀ ಮೀಸಲಾತಿಯನ್ನೇ ರದ್ದು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಮತ್ತೂಂದು ಕಡೆಯಲ್ಲಿ ರಾಜ್ಯ ಸರಕಾರದ ಮೀಸಲಾತಿ ನಿರ್ಧಾರವನ್ನು ಬಹುತೇಕ ಲಿಂಗಾಯತ ಮತ್ತು ಒಕ್ಕಲಿಗರು ಒಪ್ಪಿಕೊಂಡಂತಿದೆ. ಇಂಥ ಸಂದರ್ಭದಲ್ಲಿ ಮೀಸಲಾತಿ ನಿರ್ಧಾರ ವಾಪಸ್‌ ತೆಗೆದುಕೊಳ್ಳುವುದು ಕಷ್ಟಕರ. ಒಂದು ವೇಳೆ ಈಗಿನ ಮೀಸಲು ವಾಪಸ್‌ ರದ್ದು ಮಾಡಿ, ಮುಸ್ಲಿಮರಿಗೆ ಮರು ಹಂಚಿಕೆ ಮಾಡಿದರೆ ಇನ್ನಷ್ಟು ಸಮಸ್ಯೆ ತಂದೊಡ್ಡಲಿದೆ. ಆಗ ಎರಡೂ ಸಮುದಾಯಗಳ ಸಿಟ್ಟು ಎದುರಿಸಬೇಕಾದ ಸನ್ನಿವೇಶ ಬರಲಿದೆ. ಹೀಗಾಗಿ ಬಿಜೆಪಿ ಜಾಣ್ಮೆಯಿಂದ ಕಾಂಗ್ರೆಸ್‌ ಅನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದೇ ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next