Advertisement

ಬಿರುಗಾಳಿ ಮಳೆಗೆ ನೆಲಕಚ್ಚಿದ ಅಡಕೆ, ಬಾಳೆ

09:47 PM May 18, 2019 | Team Udayavani |

ನೆಲಮಂಗಲ: ತಾಲೂಕಿನಾದ್ಯಂತ ಸುರಿಯುತ್ತಿರುವ ಬಿರುಗಾಳಿ ಸಹಿತ ಭಾರೀ ಮಳೆಯಿಂದ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತವಾದರೆ ಕೆಲವೆಡೆ ರೈತರ ಪಾಲಿಹೌಸ್‌, ಬಾಳೆ, ಅಡಕೆ ಮರಗಳು ಹಾನಿಯಾಗಿದ್ದು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.

Advertisement

ಶುಕ್ರವಾರ ಸಂಜೆ ವೇಳೆಗೆ ತಾಲೂಕಿನ ಹೊಸಪಾಳ್ಯದಲ್ಲಿ ಭಾರಿ ಮಳೆ ಸುರಿಯಿತು. ಈ ವೇಳೆ ರೈತ ಸಿದ್ದಗಂಗಯ್ಯನವರ ಬಾಳೆತೋಟದಲ್ಲಿ ಆಲಿಕಲ್ಲು ಮಳೆಯಿಂದ ಸಂಪೂರ್ಣವಾಗಿ ಹಾಳಾದರೇ, ಜಕ್ಕಸಂದ್ರದ ದೊಡ್ಡಚಿಕ್ಕಗಂಗಯ್ಯನವರ ಪಾಲಿಹೌಸ್‌ ಸಂಪೂರ್ಣ ನೆಲಕಚ್ಚಿದೆ. ಇದರಿಂದ ಸುಮಾರು 10ಲಕ್ಷಕ್ಕೂ ಹೆಚ್ಚು ಹಣನಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಆಧುನಿಕ ಬೇಸಾಯ ಮತ್ತು ತೋಟಗಾರಿಕೆ ರೂಡಿಕೊಂಡು ಪಾಲಿ ಹೌಸ್‌ ನಿರ್ಮಿಸಿದ್ದ ದೊಡ್ಡಚಿಕ್ಕಗಂಗಯ್ಯ ಗ್ರಾಮೀಣ ಕಲ್ಪತರು ಬ್ಯಾಂಕ್‌ನಿಂದ ಸಾಲ ಪಡೆದ್ದರು. ಆದರೆ, ಮಳೆಯ ಆರ್ಭಟಕ್ಕೆ ಹಾಕಿದ ಬಂಡವಾಳವನ್ನು ಮಳೆ ಮಣ್ಣುಪಾಲು ಮಾಡಿದೆ. ಇದಲ್ಲದೆ ಬಾಳೆ, ಅಡಕೆ ಮರಗಳು ಮುರಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ.

ಮನೆ ಪರಿಶೀಲನೆ: ಶುಕ್ರವಾರ ಸುರಿದ ಭಾರಿ ಮಳೆಯಿಂದ ಹಾಜಿಪಾಳ್ಯ ಗ್ರಾಮದ ಉಮೇಶ್‌ ಅವರ ಮನೆ ಚಾವಣೆ, ಗೋಡೆಗಳು ಸಂಪೂರ್ಣ ಹಾನಿಯಾಗಿವೆ. ಶನಿವಾರ ಬೆಳಗ್ಗೆ “ಉದಯವಾಣಿ’ಯಲ್ಲಿ ಸುದ್ದಿ ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಕೆ.ಎನ್‌.ರಾಜಶೇಖರ್‌ ಹಾನಿಗೊಳಗಾದ ಮನೆ ಪರಿಶೀಲಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ತರಾಟೆ: ಹಾಜಿಪಾಳ್ಯ ಗ್ರಾಮದಲ್ಲಿ ಮಳೆಯಿಂದ ಮನೆ ಹಾನಿಯಾದರೂ ಸ್ಥಳೀಯ ಗ್ರಾಮಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಲಿಲ್ಲ. ಹೀಗಾಗಿ ತಹಶೀಲ್ದಾರ್‌ ಕೆ.ಎನ್‌.ರಾಜಶೇಖರ್‌ ದೂರವಾಣಿ ಮೂಲಕ ಗ್ರಾಮಲೆಕ್ಕಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

Advertisement

ರಥೋತ್ಸವದ ನಂತರ ಮಳೆ: ತಾಲೂಕಿನ ತ್ಯಾಮಗೊಂಡ್ಲು ಬೈಲಾಂಜನೇಯ ಸ್ವಾಮಿ ರಥೋತ್ಸವದ ಮುಗಿದ ನಂತರ ಮಳೆ ಆರ್ಭಟ ಹೆಚ್ಚಾಗಿ ಕೆಲಕಾಲ ಭಕ್ತರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವು ಕಡೆ ಬಿರುಗಾಳಿ ಮಳೆಗೆ ರಸ್ತೆಪಕ್ಕದ ಮರಗಳು ಧರೆಗುರುಳಿ ಪ್ರಯಾಣಿಕರು ಆತಂಕದಲ್ಲಿ ಸಂಚರಿಸುವಂತಾಗಿತ್ತು.

ಉರುಳಿದ ಮರಗಳು: ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಬಿರುಗಾಳಿಗೆ ರಸ್ತೆಬದಿಗಳಲ್ಲಿನ ಕೆಲಮರಗಳ ಕೊಂಬೆಗಳು ಬಿದ್ದರೆ ಮತ್ತೆ ಕೆಲವೆಡೆ ಮರಗಳೇಧರೆಗುರುಳಿದ್ದರಿಂದ ಕೆಲ ಕಾಲ ಸಂಚಾರ ಸಮಸ್ಯೆ ಎದುರಾಗಿತ್ತು.

ಅಲ್ಲದೇ, ಮತ್ತೆ ಕೆಲವೆಡೆ ವಿದ್ಯುತ್‌ ತಂತಿಗಳ ಮೇಲೆ ಮರಗಳು ಬಿದ್ದು ವಿದ್ಯುತ್‌ ಸಮಸ್ಯೆ ಎದುರಾಗಿತ್ತು. ಪಟ್ಟಣದ ಕೆಇಬಿ ಹಿಂಭಾಗದ ಜ್ಯೋಪರ್ಣೀಕ ನಿಲಯದ ಪಕ್ಕದಲ್ಲಿದ್ದ ಹಳೆಯದಾದ ತೆಂಗಿನ ಮರ ಮನೆಯೊಂದರ ಮೇಲೆ ಬಿದ್ದು ಮನೆ ಜಖಂ ಆಗಿದೆ. ಆದರೆ, ಅದೃಷ್ಟವಶಾತ್‌ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next