Advertisement

ಎನ್‌ಆರ್‌ಐ ಸಮಸ್ಯೆ ನಿವಾರಣೆಗೆ ನಿಯಮ ತಿದ್ದುಪಡಿ

03:45 AM Jan 08, 2017 | Team Udayavani |

ಬೆಂಗಳೂರು: ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಅಗತ್ಯವಾದರೆ ನಿಯಮಾವಳಿ ತಿದ್ದುಪಡಿ ತರಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಧ್ಯಾನೇಂದ್ರ ಮುಳೆ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಪ್ರವಾಸಿ ಭಾರತೀಯ ದಿವಸ ಸಮಾವೇಶವು ಅನಿವಾಸಿ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ವೇದಿಕೆಯಾಗಲಿದೆ. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದರು.

ಸಮಾವೇಶದಲ್ಲಿ ಆನಿವಾಸಿ ಭಾರತೀಯರು ವ್ಯಕ್ತಪಡಿಸುವ ಅಭಿಪ್ರಾಯ, ನೀಡುವ ಸಲಹೆ-ಸೂಚನೆ ನಮಗೆ ಅತ್ಯಮೂಲ್ಯ. ಆ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಅಗತ್ಯವಾದರೆ ನಿಯಮಾವಳಿಗೂ ತಿದ್ದುಪಡಿ ತರಲಾಗುವುದು ಎಂದರು.

ಅನಿವಾಸಿ ಭಾರತೀಯರಿಂದ ಭಾರತಕ್ಕೆ ಬಂಡವಾಳ ಆಕರ್ಷಿಸುವುದರ ಜತೆಗೆ ಅವರ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವುದು ಸಮಾವೇಶದ ಮೂಲ ಉದ್ದೇಶ. ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರ ಸಮಸ್ಯೆ ಕುರಿತು ಚರ್ಚಿಸಲು ಸಹ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ
ಈ ಹಿಂದೆ ನಡೆದ ಎಲ್ಲ ಪ್ರವಾಸಿ ಭಾರತೀಯ ದಿವಸ ಸಮಾವೇಶಕ್ಕೆ ಹೋಲಿಸಿದರೆ ಬೆಂಗಳೂರಿನ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. 72 ದೇಶಗಳ 7200ಕ್ಕೂ ಹೆಚ್ಚುಪ್ರತಿನಿಧಿಗಳು ಭಾಗವಹಿಸಿದ್ದಾರೆ. 200 ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು, ಬೆಂಗಳೂರಿನ ಶಾಲಾ-ಕಾಲೇಜುಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, 3,200 ವೀಕ್ಷಕರು ಆಗಮಿಸಿದ್ದಾರೆ. ಏಳು ದೇಶಗಳ ರಾಯಭಾರಿಗಳು ಇಲ್ಲಿಯೇ ತಂಗಿ ಆಯಾ ದೇಶಗಳ ಪ್ರತಿನಿಧಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ದೊರಕಿಸಿಕೊಡಲಿದ್ದಾರೆ.
– ಧ್ಯಾನೇಶ್ವರ್‌ ಮುಳೆ, ಕಾರ್ಯದರ್ಶಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ

Advertisement

ಹೊರ ದೇಶಗಳಿಗೆ ಉದ್ಯೋಗ ಕೆಲಸ ಕೊಡಿಸುವ ಅಮಿಷವೊಡ್ಡಿ ಕರೆದೊಯ್ದು ದುರ್ಬಳಕೆ ಮಾಡಿಕೊಳ್ಳುವ ಪ್ರಕರಣಗಳ ಬಗ್ಗೆಯೂ ಸರ್ಕಾರ ಗಂಭೀರ ಗಮನ ಹರಿಸಿದೆ. ಅಂತಹ ಪ್ರಕರಣಗಳನ್ನು ಯಾವ ರೀತಿ ನಿಯಂತ್ರಿಸಬಹುದು ಹಾಗೂ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು ಕೊಡುವ ಕುರಿತ ಪ್ರಶ್ನೆಗೆ, ಈ ಸಂಬಂಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ ಎಂದಷ್ಟೇ ಮುಳೆ ಪ್ರತಿಕ್ರಿಯಿಸಿದರು. ಅನಿವಾಸಿ ಭಾರತೀಯರ ನೋಟು ಬದಲಾವಣೆಗೆ ಜೂನ್‌ವರೆಗೆ ಕಾಲಾವಕಾಶ ನೀಡಿದ್ದು, ಅವಧಿ ವಿಸ್ತರಣೆ ಕುರಿತು ಆರ್‌ಬಿಐ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಮತ್ತೂಂದು ಪ್ರಶ್ನೆಗೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next