Advertisement
ಕೃಷಿಕರ ಬದುಕಿಗೆ ವಿವಿಧ ರೀತಿಯಲ್ಲಿ ಬೆಂಗಾವಲಾಗಿ ನಿಂತಿರುವ ನರೇಗಾದಡಿ ಕೃಷಿ ಕ್ಷೇತ್ರದಲ್ಲಿ ಹಲವು ಮಹತ್ವದ ಕೆಲಸಗಳು ನಡೆದಿವೆ. ಅದನ್ನೀಗ ಭತ್ತದ ಬೆಳೆಗೂ ವಿಸ್ತರಿಸುವ ಬಗ್ಗೆ ರಾಜ್ಯ ಸರಕಾರ ಆಸಕ್ತಿ ತೋರಿದೆ. ಭತ್ತ ಬೆಳೆಗಾರರಿಗೆ ಕಾರ್ಮಿಕರ ಕೊರತೆ ಹಾಗೂ ಕಾರ್ಮಿಕರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಗಂಭೀರ ವಿಚಾರಕ್ಕೆ ಮುಕ್ತಿ ನೀಡುವ ನಿಟ್ಟಿನಲ್ಲಿ ಈ ಚಿಂತನೆ ಮಾಡಲಾಗಿದೆ.
ಭತ್ತದ ಬೆಳೆಗೆ ಬಹಳಷ್ಟು ಅವಕಾಶವಿದೆ. ಹಡಿಲು ಗದ್ದೆಗಳು ಕೂಡ ಇವೆ. ಭತ್ತದ ಬೆಳೆಯ ಮೂಲಕ ಹೊಸ ಬದುಕು ಕಟ್ಟಿಕೊಳ್ಳಲು ಸಾಧ್ಯ. ಆದರೆ ಕೆಲವು ಸಲ ಕಾರ್ಮಿಕರು ಸಿಗುತ್ತಿಲ್ಲ ಎಂಬ ನೆಪದಿಂದ ಅಥವಾ ಕಾರ್ಮಿಕರಿಗೆ ಸಂಬಳ ನೀಡುವ ಹೊರೆಯನ್ನು ತಪ್ಪಿಸಲು ಭತ್ತದಿಂದ ಕೆಲವು ಕೃಷಿಕರು ವಿಮುಖರಾಗಿದ್ದಾರೆ. ಸದ್ಯ ನರೇಗಾ ಯೋಜನೆಯಡಿ ಭತ್ತದ ಕೃಷಿಯನ್ನೂ ಜೋಡಿಸುವ ಕಾರ್ಯಕ್ಕೆ ರಾಜ್ಯ ಸರಕಾರ ಮನಸ್ಸು ಮಾಡಿದ್ದು, ಕೇಂದ್ರದ ಜತೆಗೆ ಮಾತುಕತೆ ನಡೆಸುವ ಹಂತದಲ್ಲಿದೆ ಎನ್ನುತ್ತಾರೆ ಕೃಷಿಕರೂ ಆಗಿರುವ ಶಾಸಕ ರಾಜೇಶ್ ನಾೖಕ್.
Related Articles
ಕೃಷಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಕರಾವಳಿಯಲ್ಲಿ ಭತ್ತ ಬೆಳೆಯುವ ಪ್ರದೇಶ ನಿರಂತರವಾಗಿ ಇಳಿಕೆಯಾಗುತ್ತಿದೆ. ಆರು ವರ್ಷಗಳ ಹಿಂದೆ ದ.ಕ. ಜಿಲ್ಲೆಯಲ್ಲಿ 34,000 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುತ್ತಿದ್ದರೆ 2018-19ರಲ್ಲಿ 26,560 ಹೆಕ್ಟೇರ್‌ಗೆ ಕುಸಿದಿದೆ. ಉಡುಪಿ ಜಿಲ್ಲೆಯಲ್ಲಿ 2007ರಲ್ಲಿ 51,350 ಹೆಕ್ಟೇರ್ ಪ್ರದೇಶದಲ್ಲಿದ್ದ ಭತ್ತದ ಬೆಳೆ 2018-19ರಲ್ಲಿ 36,000 ಹೆಕ್ಟೇರ್‌ಗೆ ಇಳಿದಿದೆ.
Advertisement
ನರೇಗಾ ಯೋಜನೆಯಡಿ ಭತ್ತದ ಕೃಷಿಯನ್ನೂ ಸೇರಿಸಬೇಕು ಎಂಬ ಬೇಡಿಕೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರ ಗಮನಕ್ಕೆ ಈ ವಿಚಾರವನ್ನು ತರಲಾಗಿದೆ. ಅವರು ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆದು ನರೇಗಾದಡಿ ಭತ್ತ ಸೇರಿಸುವ ಕುರಿತಂತೆ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಭತ್ತದ ಕೃಷಿ ನರೇಗಾದಡಿ ಸೇರಿದರೆ ಅನ್ನದಾತರಿಗೆ ಬಹಳಷ್ಟು ಅನುಕೂಲವಾಗಲಿದೆ.– ಬಿ.ಸಿ. ಪಾಟೀಲ್,
ಕೃಷಿ ಸಚಿವರು