ಸಿರುಗುಪ್ಪ:ತಾಲೂಕಿನ ಹಳೆಕೋಟೆ ಗ್ರಾಮದ ಕೃಷಿ ಕೂಲಿ ಕಾರ್ಮಿಕರು ನರೇಗಾ ಯೋಜನೆ ಅಡಿ ಕೆಲಸ ನೀಡಬೇಕೆಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಮಂಗಳವಾರ ನಡೆದಿದೆ.
ಮಹಾತ್ಮ ಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದಿನಗೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ಕೆಲಸ ನೀಡುತ್ತಿಲ್ಲವೆಂದು ಮೇಟಿಗಳ ನೇತೃತ್ವದಲ್ಲಿ ಕಾರ್ಮಿಕರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಕೂಲಿ ಕೆಲಸ ನೀಡಬೇಕು,ಇಲ್ಲದಿದ್ದರೆ ಕೆಲಸ ಅರಸಿ ಮಹಾನಗರಗಳಿಗೆ ವಲಸೆ ಹೋಗಬೇಕಾಗುತ್ತದೆ.ಆದ್ದರಿಂದ ನರೇಗಾ ಯೋಜನೆ ಅಡಿ ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸಬೇಕೆಂದು ಆಗ್ರಹಿಸಿದರು.
ಉದ್ಯೋಗ ಖಾತ್ರಿ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡುತ್ತಿಲ್ಲ ಹಾಗೂ ತಮಗೆ ಬೇಕಾದ ಮೇಟಿಗಳಿಗೆ ಉದ್ಯೋಗದ ಚೀಟಿ ನೀಡುತ್ತಿದ್ದಾರೆ ಎಂದು ಗ್ರಾಮದ ಮೇಟಿ ಬಿ ಮಲ್ಲಿಕಪ್ಪ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಡಿಒ ರಾಜೇಶ್ವರಿ ಮಾತನಾಡಿ, ನಮ್ಮಗ್ರಾಮ ಪಂಚಾಯಿತಿಯಲ್ಲಿ 1997 ಕುಟುಂಬಗಳು ಜಾಬ್ ಕಾರ್ಡ್ ನೊಂದಣಿ ಮಾಡಿಕೊಂಡಿದ್ದಾರೆ, ಇವರಿಗೆ ಶೇಕಡ 87 ರಷ್ಟು ಈಗಾಗಲೇ ಕೂಲಿ ಕೆಲಸ ನೀಡಲಾಗಿದೆ. ಆದರೂ ಕೆಲವು ಮೇಟಿಗಳು ಕಾರ್ಮಿಕರನ್ನು ಪುಸಲಾಯಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ ಎಂದು ಪಿಡಿಓ ರಾಜೇಶ್ವರಿ ತಿಳಿಸಿದ್ದಾರೆ.
ಮೇಟಿಗಳಾದ ಶಿವಕುಮಾರ, ಹರಿಜನ ಹುಲಗಪ್ಪ, ಜಿ.ಶಿವಕುಮಾರ, ಕಾರ್ಮಿಕರಾದ ಕಾಳಮ್ಮ, ಮಾರೆಮ್ಮ, ಈರಮ್ಮ, ಹನುಮಂತಮ್ಮ, ದುರ್ಗಮ್ಮ, ಮಾಳಮ್ಮ ಇನ್ನಿತರರು ಇದ್ದರು.