ಹೊಸದಿಲ್ಲಿ: ದೇಶದಲ್ಲಿ ಅನುತ್ಪಾದಕ ಆಸ್ತಿ (ಎನ್‌ಪಿಎ) ಹೆಚ್ಚಳವಾಗಲು ಯುಪಿಎ-2 ಸರಕಾರದ ಹಗರಣಗಳು ಹಾಗೂ ನೀತಿಗ್ರಹಣ ಕಾರಣ ಎಂದು ಸಂಸದೀಯ ಸಮಿತಿಗೆ ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ನೀಡಿದ ಹೇಳಿಕೆಯು ಈಗ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣ ವಾಗಿದೆ. ರಾಜನ್ ಹೇಳಿಕೆಯನ್ನು ಪ್ರಸ್ತಾವಿಸಿಕೊಂಡು ಕಾಂಗ್ರೆಸ್ ವಿರುದ್ಧ ಆಡಳಿತಾರೂಢ ಬಿಜೆಪಿ ಹರಿಹಾಯ್ದರೆ, ಅತ್ತ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ. ಒಟ್ಟಿನಲ್ಲಿ ರಾಜಕೀಯ ಕೆಸರೆರಚಾಟಕ್ಕೆ ರಾಜನ್ ನಾಂದಿಹಾಡಿದಂತಾಗಿದೆ.
ರಾಜನ್ ಹೇಳಿಕೆಯನ್ನು ಉಲ್ಲೇಖೀಸಿ ಮಂಗಳವಾರ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವೆ ಸ್ಮತಿ ಇರಾನಿ, “ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಸರಕಾರವು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ್ಕೇ ಕೊಡಲಿಯೇಟು ನೀಡಿತು. 2006-08ರ ಅವಧಿಯಲ್ಲಿ ಯುಪಿಎ ಸರಕಾರದ ಕಾರ್ಯನಿರ್ವಹಣೆಯು ಎನ್‌ಪಿಎ ಹೆಚ್ಚಳಕ್ಕೆ ಕಾರಣವಾಯಿತು ಎಂದು ಸ್ವತಃ ರಾಜನ್ ಅವರೇ ಹೇಳಿದ್ದಾರೆ. ಎನ್‌ಪಿಎಗೆ ಕಾಂಗ್ರೆಸ್ ಕಾರಣ ಎಂದು ನಾವು ಹೇಳುತ್ತಲೇ ಬಂದಿದ್ದೆವು. ಈಗ ರಾಜನ್ ಹೇಳಿಕೆ ಅದನ್ನು ಪುಷ್ಟೀಕರಿಸಿದ್ದು, ಅದು ಕಾಂಗ್ರೆಸ್‌ನ ಭ್ರಷ್ಟಾಚಾರದ ಗಟ್ಟಿ ಧ್ವನಿಯಾಗಿ ಹೊರಹೊಮ್ಮಿದೆ’ ಎಂದಿದ್ದಾರೆ.
ಇದೇ ವೇಳೆ, ನ್ಯಾಶನಲ್ ಹೆರಾಲ್ಡ್ ಪ್ರಕರಣ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಾಲೆಳೆದ ಸಚಿವೆ ಇರಾನಿ, “ಪ್ರಧಾನಿ ಮೋದಿ ಅವರನ್ನು ಕಂಡ ಕೂಡಲೇ ಅಪ್ಪಿಕೊಳ್ಳುವ ರಾಹುಲ್, ಐಟಿ ಅಧಿಕಾರಿಗಳನ್ನು ಕಂಡೊಡನೆ ಓಡಿಹೋಗುತ್ತಿರುವುದೇಕೆ? ಇದಕ್ಕೆ ಅವರು ಉತ್ತರಿಸಬೇಕು’ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ತಿರುಗೇಟು: ಸ್ಮತಿ ಇರಾನಿ ಹೇಳಿಕೆ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇìವಾಲಾ, ಸಚಿವೆ ಇರಾನಿ ಹಾಗೂ ರಾಜನ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. “ಯುಪಿಎ ಆಡಳಿತ ಕೊನೆಗೊಂಡಾಗ 2014ರಲ್ಲಿ ಒಟ್ಟು ಅನುತ್ಪಾದಕ ಆಸ್ತಿ ಪ್ರಮಾಣ 2.83 ಲಕ್ಷ ಕೋಟಿ ರೂ. ಆಗಿತ್ತು. ಆದರೆ, ಎನ್‌ಡಿಎ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಎನ್‌ಪಿಎ ಮೊತ್ತ 12 ಲಕ್ಷ ಕೋಟಿ ರೂ.ಗೆ ಏರಿಕೆಯಾಯಿತು. ಅಂದರೆ, ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಎನ್‌ಪಿಎ 9.17 ಲಕ್ಷ ಕೋಟಿ ಏರಿಕೆಯಾಗಿದೆ. ಹಾಗಾಗಿ ಎನ್‌ಡಿಎ ಸರಕಾರವನ್ನೂ ಇದಕ್ಕೆ ಹೊಣೆಯಾಗಿಸಬೇಕಲ್ಲವೇ’ ಎಂದು ಸುಜೇìವಾಲಾ ಪ್ರಶ್ನಿಸಿದ್ದಾರೆ. ಜತೆಗೆ, ಒಂದು ವೇಳೆ ರಾಜನ್ ಹೇಳಿಕೆ ಪ್ರಕಾರ, ಯುಪಿಎ ಅವಧಿ ಯಲ್ಲಾದ ಎನ್‌ಪಿಎ 2.83 ಲಕ್ಷ ಕೋಟಿ ರೂ. ಆಗಿದ್ದರೆ, ಈಗಲೂ ಎನ್‌ಪಿಎ ಮೊತ್ತ ಅಷ್ಟೇ ಇರಬೇಕಿತ್ತಲ್ಲವೇ? ಹಾಗಿದ್ದರೆ ಅದು 12 ಲಕ್ಷ ಕೋಟಿ ರೂ. ಆಗಿದ್ದು ಹೇಗೆ ಎಂದೂ ಸುಜೇìವಾಲಾ ಕೇಳಿದ್ದಾರೆ.
ಹೈಪ್ರೊಫೈಲ್ ವಂಚಕರ ಪಟ್ಟಿ ಕೊಟ್ಟಿದ್ದೆ: ರಾಜನ್
ಯುಪಿಎ ಸರಕಾರದ ಅವಧಿಯಲ್ಲಿ ಹೈಪ್ರೊಫೈಲ್ ವಂಚಕರ ಪಟ್ಟಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸಿದ್ದೆ ಎಂದೂ ಸಂಸದೀಯ ಸಮಿತಿಗೆ ರಾಜನ್ ಮಾಹಿತಿ ನೀಡಿರುವ ವಿಚಾರ ಮಂಗಳವಾರ ಬೆಳಕಿಗೆ ಬಂದಿದೆ. ನಾನು ಗವರ್ನರ್ ಆಗಿದ್ದಾಗ ಆರ್‌ಬಿಐ ವಂಚನೆ ನಿಗಾ ಘಟಕವನ್ನು ಸ್ಥಾಪಿಸಿತು. ಈ ಘಟಕವು ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿ ತನಿಖಾ ಸಂಸ್ಥೆಗಳಿಗೆ ವರದಿ ನೀಡುತ್ತಿತ್ತು. ನಾನು ಕೂಡ ಪ್ರಧಾನಿ ಕಾರ್ಯಾಲಯಕ್ಕೆ ಕೆಲವು ಹೈಪ್ರೊಫೈಲ್ ವಂಚಕರ ಪಟ್ಟಿಯನ್ನು ಸಲ್ಲಿಸಿದ್ದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದೆ. ಆದರೆ, ಅನಂತರ ಆ ವಿಚಾರದಲ್ಲಿ ಆದ ಪ್ರಗತಿ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ರಾಜನ್ ಹೇಳಿದ್ದಾರೆ. ಅಲ್ಲದೆ, ಒಬ್ಬ ವಂಚಕನ ವಿರುದ್ಧವಾದರೂ ಕ್ರಮ ಕೈಗೊಂಡಿದ್ದರೆ, ಸ್ವಲ್ಪವಾದರೂ ಬಿಸಿ ಮುಟ್ಟಿಸಿದಂತಾಗುತ್ತಿತ್ತು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.