ಹೊಸದಿಲ್ಲಿ: ಝಾರ್ಖಂಡ್ ವಿಧಾನಸಭೆಯಲ್ಲಿ 5 ವರ್ಷದ ಬಳಿಕ ಮತ್ತೂಮ್ಮೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೇರಲಿದೆ ಬಹುತೇಕ ಸಂಸ್ಥೆಗಳು ಭವಿಷ್ಯ ನುಡಿದಿವೆ. ಜೆಎಂಎಂ – ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದಿಂದ ಕೆಳಗಿಳಿಯಲಿದೆ ಎಂದು ಹೇಳಿವೆ.
ಒಟ್ಟು 7 ಸಂಸ್ಥೆಗಳು ಮತಗಟ್ಟೆ ಸಮೀಕ್ಷೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ 5 ಸಮೀಕ್ಷೆಗಳು ಎನ್ಡಿಎ ಅಧಿಕಾರಕ್ಕೇರಲಿದೆ ಎಂದು ಹೇಳಿವೆ. 81 ಸ್ಥಾನಗಳ ವಿಧಾಸಭೆಯಲ್ಲಿ ಬಹುಮತಕ್ಕೆ ಅಗತ್ಯವಿರುವ 41 ಸ್ಥಾನಗಳಿಗೆ 2 ಮೈತ್ರಿಕೂಟ ಹತ್ತಿರದಲ್ಲಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಮ್ಯಾಟ್ರಿಜ್, ಪೀಪಲ್ ಪಲ್ಸ್, ಟೈಮ್ಸ್ ನೌ, ಚಾಣಕ್ಯ ಎಸ್, ದೈನಿಕ್ ಭಾಸ್ಕರ್ ಸಂಸ್ಥೆಗಳು ಎನ್ಡಿಎ ಮೈತ್ರಿಕೂಟದ ಪರ ಭವಿಷ್ಯ ನುಡಿದಿದ್ದರೆ, ಆಕ್ಸಿಸ್ ಮೈ ಇಂಡಿಯಾ ಮತ್ತು ಪಿ ಮಾರ್ಕ್ ಸಂಸ್ಥೆಗಳು ಐಎನ್ಡಿಐಎ ಒಕ್ಕೂಟದ ಪರ ಭವಿಷ್ಯ ನುಡಿದಿವೆ. ಭ್ರಷ್ಟಾಚಾರ ಪ್ರಕರಣದಲ್ಲಿ ಹೇಮಂತ್ ಸೊರೇನ್ ಜೈಲಿಗೆ ಹೋಗಿದ್ದು ಎನ್ಡಿಎ ಮೈತ್ರಿಕೂಟಕ್ಕೆ ವರವಾಗಿ ಪರಿಣಮಿಸಲಿದೆ ಎನ್ನಲಾಗಿದೆ. ಎಲ್ಲ ಸಮೀಕ್ಷೆಗಳ ಸರಾಸರಿಯನ್ನು ನೋಡಿದರೆ ಎನ್ಡಿಎ 41, ಐಎನ್ಡಿಐಎ 38 ಮತ್ತು ಇತರರು 2 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎನ್ನಬಹುದಾಗಿದೆ.
ಸಮೀಕ್ಷೆಗಳು ಅವುಗಳ ಕೆಲಸ ಮಾಡುತ್ತಿವೆ. ವಿದ್ಯಾರ್ಥಿಗಳು, ಉದ್ಯೋಗ ಅರಸುತ್ತಿರುವ ಯುವಕರು ನಿರಾಸೆಗೊಂಡಿದ್ದಾರೆ. ರಾಜ್ಯದಲ್ಲಿ ಈ ಬಾರಿ ಪರಿವರ್ತನೆ ಆಗಲಿದೆ.
– ಚಂಪಯಿ ಸೊರೇನ್, ಬಿಜೆಪಿ ನಾಯಕ