Advertisement

Miracle: ವರ್ಷದಲ್ಲಿ 6ರಿಂದ 7 ತಿಂಗಳು ನೀರಿನಲ್ಲಿ ಮುಳುಗಡೆಯಾಗಿರುತ್ತೆ ಈ ದೇವಸ್ಥಾನ

05:15 PM Oct 28, 2024 | ಸುಧೀರ್ |

ದೇವರು ನಮ್ಮ ದೇಶದಲ್ಲಿ ಎಂತೆಂಥ ಅದ್ಭುತಗಳನ್ನು ಸೃಷ್ಟಿ ಮಾಡಿದ್ದಾನೆ ಎಂಬುದಕ್ಕೆ ಇಲ್ಲಿರುವ ದೇವಸ್ಥಾನವೇ ಪ್ರತ್ಯಕ್ಷ ಉದಾಹರಣೆ. ಅದೇನೆಂದರೆ ಇಲ್ಲಿನ ದೇವಸ್ಥಾನ ವರ್ಷದಲ್ಲಿ ಸುಮಾರು ಆರರಿಂದ ಏಳು ತಿಂಗಳು ನೀರಿನಿಂದ ಮುಳುಗಡೆಯಾಗಿರುತ್ತೆ, ನಾಲ್ಕರಿಂದ ಐದು ತಿಂಗಳು ಮಾತ್ರ ಭಕ್ತರಿಗೆ ದೇವರ ದರ್ಶನ ಭಾಗ್ಯ… ಬನ್ನಿ ಹಾಗಾದರೆ ಎಲ್ಲಿದೆ ಈ ಪ್ರಾಚೀನ ದೇವಸ್ಥಾನ ಈ ದೇವಸ್ಥಾನ ಮುಳುಗಡೆಯಾಗಲು ಏನು ಕಾರಣ… ಎಂಬುದನ್ನು ನೋಡೋಣ ಬನ್ನಿ.

Advertisement

ಆಂಧ್ರಪ್ರದೇಶದ ಕನೂ೯ಲು ಜಿಲ್ಲೆಯಲ್ಲಿರುವ ಕೃಷ್ಣಾ ನದಿಯ ದಂಡೆಯ ಮೇಲಿರುವ ಸಂಗಮೇಶ್ವರ ಶಿವ ದೇವಸ್ಥಾನವೇ ಈ ಅದ್ಭುತಗಳನ್ನು ಹೊಂದಿರುವ ದೇವಾಲಯವಾಗಿದೆ ಈ ದೇವಸ್ಥಾನವನ್ನು ನೋಡಲೆಂದೇ ದಿನವೊಂದಕ್ಕೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಗೊತ್ತಿಲ್ಲದೇ ಮಳೆಗಾಲದ ಸಮಯದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದರೆ ಕೇವಲ ಜಲಾವೃತ ಪ್ರದೇಶ ಮಾತ್ರ ಗೋಚರವಾಗಲಿದ್ದು, ದೇವಸ್ಥಾನ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿರುತ್ತೆ.

ಸ್ಥಳ ಪುರಾಣ:
ಈ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪುರಾಣದ ಪ್ರಕಾರ ಪಾಂಡವರ ವನವಾಸದ ಸಮಯದಲ್ಲಿ ಧರ್ಮರಾಜನು ಇಲ್ಲಿ ಶಿವಲಿಂಗವನ್ನು ಸ್ಥಾಪಿಸಲು ನಿರ್ಧರಿಸಿದನು. ಧರ್ಮರಾಜನ ಆದೇಶದ ಮೇರೆಗೆ ಶಿವಲಿಂಗವನ್ನು ತರಲು ಕಾಶಿಗೆ ಹೋದ ಭೀಮನು ಸಮಯಕ್ಕೆ ಸರಿಯಾಗಿ ಬರಲಿಲ್ಲ. ಮುನಿಗಳ ಸೂಚನೆಯಂತೆ ಧರ್ಮರಾಜನು ಬೇವಿನ ಮರದ ಕೊಂಬೆಯನ್ನು ಶಿವಲಿಂಗವನ್ನಾಗಿಸಿ ಪೂಜಿಸಿದ್ದನಂತೆ. ಇದರಿಂದ ಕುಪಿತನಾದ ಭೀಮ ತಾನು ತಂದಿದ್ದ ಶಿವಲಿಂಗವನ್ನು ನದಿಗೆ ಎಸೆದಿದ್ದನಂತೆ ಭೀಮನನ್ನು ಒಲಿಸಿಕೊಳ್ಳಲು ನದಿಯ ದಡದಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಅದನ್ನು ಭೀಮಲಿಂಗ ಎಂದು ನಾಮಕರಣ ಮಾಡಿದರಂತೆ. ಅದರಂತೆ ಭಕ್ತರು ಭೀಮೇಶ್ವರನ ದರ್ಶನ ಮಾಡಿದ ನಂತರವೇ ಸಂಗಮೇಶ್ವರನ ದರ್ಶನ ಮಾಡಬೇಕೆಂದು ಸ್ಥಳ ಪುರಾಣ ಹೇಳುತ್ತದೆ.

7 ನದಿಗಳು ಸಂಗಮಿಸುವ ಏಕೈಕ ಸ್ಥಳ:
ಸಂಗಮೇಶ್ವರಂ ಜಗತ್ತಿನ 7 ನದಿಗಳು ಸಂಗಮಿಸುವ ಏಕೈಕ ಸ್ಥಳವಾಗಿದೆ. ಸಂಗಮೇಶ್ವರಂ ಕರ್ನೂಲ್ ಜಿಲ್ಲೆಯ ಕೋತಪಲ್ಲಿ ಮಂಡಲದಲ್ಲಿರುವ ತುಂಗಾ, ಭದ್ರಾ, ಕೃಷ್ಣ, ವೇಣಿ, ಭೀಮಾ, ಮಲಾಪಹಾರಿಣಿ ಮತ್ತು ಭವಾನಾಸಿ ನದಿಗಳ ಸಂಗಮವಾಗಿದೆ. ಈ ನದಿಗಳಲ್ಲಿ ಭವನಾಸಿಯು ಪುರುಷನ ಹೆಸರಿನ ಏಕೈಕ ನದಿಯಾಗಿದ್ದು, ಉಳಿದೆಲ್ಲ ನದಿಗಳಿಗೆ ಮಹಿಳೆಯರ ಹೆಸರನ್ನು ಇಡಲಾಗಿದೆ. ಭವನಾಸಿಯು ಪೂರ್ವದಿಂದ ಪಶ್ಚಿಮಕ್ಕೆ ಹರಿದರೆ, ಉಳಿದೆಲ್ಲ ನದಿಗಳು ಪಶ್ಚಿಮದಿಂದ ಪೂರ್ವಕ್ಕೆ ಹರಿದು ಜ್ಯೋತಿರ್ಲಿಂಗ, ಅಷ್ಟಾದಶ ಶಕ್ತಿಪೀಠ ಶ್ರೀಶೈಲ ದೇಗುಲವನ್ನು ಸ್ಪರ್ಶಿಸಿ ಕೊನೆಗೆ ಸಮುದ್ರದಲ್ಲಿ ವಿಲೀನವಾಗುತ್ತವೆ.

Advertisement

23 ವರ್ಷ ಜಲಾವೃತಗೊಂಡಿದ್ದ ದೇವಸ್ಥಾನ:
ಸಂಗಮೇಶ್ವರ ದೇವಸ್ಥಾನವು ಮೂಲತಃ ಕೃಷ್ಣಾ ನದಿಯ ದಡದಲ್ಲಿದೆ. ಶ್ರೀಶೈಲಂ ಅಣೆಕಟ್ಟು ನಿರ್ಮಾಣದ ಬಳಿಕ ಅದರ ಹಿನ್ನೀರಿನಿಂದಾಗಿ ಸಂಗಮೇಶ್ವರ ದೇವಸ್ಥಾನವು ಸುಮಾರು 23 ವರ್ಷಗಳ ಕಾಲ ನೀರಿನಲ್ಲಿ ಮುಳುಗಿತ್ತು. ವರ್ಷ ಕಳೆದಂತೆ ಇಲ್ಲೊಂದು ದೇವಸ್ಥಾನ ಇತ್ತೆಂಬುದನ್ನು ಇಲ್ಲಿನ ಜನರೇ ಮರೆತಿದ್ದರಂತೆ ಇದಾದ ಬಳಿಕ 2003 ರಲ್ಲಿ ಶ್ರೀಶೈಲಂ ಅಣೆಕಟ್ಟಿನ ನೀರಿನ ಮಟ್ಟ ಕಡಿಮೆಯಾದಾಗ ದೇವಸ್ಥಾನ ಗೋಚರವಾಗಿದೆ ಅಂದಿನಿಂದ ದೇವಾಲಯದಲ್ಲಿ ಮತ್ತೆ ಪೂಜೆಗಳು ಆರಂಭಗೊಂಡಿತ್ತಂತೆ.

ವರ್ಷದಲ್ಲಿ 6 ರಿಂದ 7 ತಿಂಗಳು ನೀರಿನಲ್ಲಿ ಮುಳುಗಿರುತ್ತೆ:
ಪ್ರತಿ ವರ್ಷ ಮಳೆಗಾಲದ ಸಂದರ್ಭ ಅಣೆಕಟ್ಟಿನ ನೀರಿನ ಮಟ್ಟ ಏರಿಕೆಯಾದಂತೆ ದೇವಸ್ಥಾನ ಜಲಾವೃತಗೊಳ್ಳುತ್ತದೆ ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿ ದೇವಸ್ಥಾನ ನೀರಿನಿಂದ ಆವೃತಗೊಳ್ಳುತ್ತದೆ ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಶಿವಲಿಂಗಕ್ಕೆ ಕೊನೆಯ ಬಾರಿ ಪೂಜೆ ಸಲ್ಲಿಸಿ ದೋಣಿಯ ಮೂಲಕ ದಡ ಸೇರುತ್ತಾರೆ ಅದಾದ ಬಳಿಕ ಸುಮಾರು ಆರರಿಂದ ಏಳು ತಿಂಗಳ ಬಳಿಕ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ದೇವಸ್ಥಾನ ಗೋಚರವಾಗುತ್ತದೆ ಆದರದ ಬಳಿಕ ಮತ್ತೆ ದೇವಸ್ಥಾನದಲ್ಲಿ ಪೂಜೆ ಅರ್ಚನೆಗಳು ನಿರಂತರವಾಗಿ ನಡೆಯುತ್ತದೆ.

ಶಿಥಿಲಗೊಂಡ ಪುರಾತನ ದೇವಾಲಯ:
ಈಗಾಗಲೇ ಕಾಣುತ್ತಿರುವ ದೇವಾಲಯ ಸುಮಾರು ೨೦೦ ವರ್ಷಗಳ ಹಿಂದೆ ನಿರ್ಮಾಣವಾಗಿರುವ ದೇವಸ್ಥಾನವಾಗಿದ್ದು ಇದಕ್ಕೂ ಮೊದಲು ಸಾವಿರಾರು ವರ್ಷಗಳ ಹಿಂದೆ ದೇವಾಲಯ ನಿರ್ಣಗೊಂಡಿದ್ದು ಇದರ ಆಧಾರ ಸ್ತಂಭ, ಮುಖಮಂಟಪ ಸಂಪೂರ್ಣ ಶಿಥಿಲಗೊಂಡಿದ್ದರಿಂದ ಅದನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡಲಾಗಿದ್ದು ಇಲ್ಲಿ ಅಂತರಾಲಯ ಮತ್ತು ಗರ್ಭಗುಡಿ ಮಾತ್ರ ಕಾಣಸಿಗುತ್ತದೆ. ಗರ್ಭಗುಡಿಯಲ್ಲಿ ಸಂಗಮೇಶ್ವರನ ಲಿಂಗವಿದ್ದು, ಶಿವನ ಎಡಭಾಗದಲ್ಲಿ ಶ್ರೀ ಲಲಿತಾ ದೇವಿ ಮತ್ತು ಬಲಭಾಗದಲ್ಲಿ ವಿನಾಯಕನನ್ನು ಕಾಣಬಹುದು. ಅದಕ್ಕೂ ಮೊದಲು ಇಬ್ಬರಿಗೂ ಪ್ರತ್ಯೇಕ ದೇವಾಲಯಗಳಿದ್ದವು. ಆದರೆ, ಅವು ಶಿಥಿಲಗೊಂಡಿದ್ದರಿಂದ ಗರ್ಭಗುಡಿಯಲ್ಲಿ ಲಲಿತಾ ದೇವಿ ಮತ್ತು ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು.

ಕ್ಷತ್ರವನ್ನು ತಲುಪುವುದು ಹೇಗೆ:

ಸಂಗಮೇಶ್ವರಂ ಕರ್ನೂಲ್ ಜಿಲ್ಲೆಯ ಕೋತಪಲ್ಲಿ ಪ್ರದೇಶದಲ್ಲಿದ್ದು ಈ ಕ್ಷೇತ್ರವು ಕರ್ನೂಲಿನಿಂದ 55 ಕಿ.ಮೀ ಮತ್ತು ನಂದಿಕೋಟ್ಕೂರಿನಿಂದ 20 ಕಿ.ಮೀ ದೂರದಲ್ಲಿದೆ. ಈ ಕ್ಷೇತ್ರವನ್ನು ವಿವಿಧ ಮಾರ್ಗಗಳ ಮೂಲಕ ತಲುಪಬಹುದು. ಮುಖ್ಯವಾಗಿ ಆತ್ಮಕೂರಿನಿಂದ ಸಂಗಮೇಶ್ವರಕ್ಕೆ ಆಟೋ ಮತ್ತು ಜೀಪ್‌ಗಳ ಮೂಲಕ ಹೋಗಬಹುದು. ಕರ್ನೂಲ್ ಜಿಲ್ಲೆಯ ಆತ್ಮಕೂರಿನಿಂದ ಕಪಿಲೇಶ್ವರಂ ಅನ್ನು ಬಸ್ಸಿನಲ್ಲಿ ತಲುಪಿ ಅಲ್ಲಿಂದ 5 ಕಿ.ಮೀ ದೂರದ ಆಟೋ ಮತ್ತು ಜೀಪುಗಳ ಮೂಲಕ ಈ ಕ್ಷೇತ್ರವನ್ನು ತಲುಪಬಹುದು. ಸ್ವಂತ ವಾಹನಗಳಲ್ಲಿ ಪ್ರಯಾಣಿಸುವವರು ದೇವಸ್ಥಾನ ಬಲಿಯವರೆಗೆ ತಲುಪಬಹುದು. ನೀವು ತೆಲಂಗಾಣದ ಮೂಲಕ ಬರುವುದಾದರೆ ಸೋಮಸಿಲಕ್ಕೆ ಬಂದು ಬಳಿಕ ಸೋಮಸಿಲದಿಂದ ದೋಣಿಗಳ ಮೂಲಕ ಸಂಗಮೇಶ್ವರಂ ತಲುಪಬಹುದು. ಪ್ರತಿ ವರ್ಷ ಮಹಾಶಿವರಾತ್ರಿಯ ವೇಳೆಗೆ ಕ್ಷೇತ್ರದ ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಆಂಧ್ರ ಸಾರಿಗೆ ಬಸ್‌ಗಳು ಸಂಚರಿಸುತ್ತವೆ.

– ಸುಧೀರ್ ಪರ್ಕಳ

Advertisement

Udayavani is now on Telegram. Click here to join our channel and stay updated with the latest news.

Next