ಧಾರವಾಡ: ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಬರುವ ಸಾಧ್ಯತೆಗಳಿರುವುದರಿಂದ ಇಂದಿನಿಂದಲೇ ಜಲ ಸಂರಕ್ಷಣೆಗಾಗಿ ಗುಡ್ಡ ಪ್ರದೇಶದಲ್ಲಿ ಗಿಡಮರಗಳನ್ನು ಬೆಳೆಸುವ ಮೂಲಕ ನೀರು ಇಂಗುವಂತೆ ಮಾಡಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ಹೇಳಿದರು.
ನಗರ ಹೊರವಲಯದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯಲ್ಲಿ ವಿಶ್ವ ಜಲ ದಿನಾಚರಣೆ-2022ರ ಅಂಗವಾಗಿ ಅಂತರ್ಜಲ-ಅದೃಶ್ಯದಿಂದ ಸದೃಶ್ಯದೆಡೆಗೆ ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೀರಿಲ್ಲದೇ ಯಾವ ಕೆಲಸ ಮಾಡಲು ಸಾಧ್ಯವಿಲ್ಲ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ನನಗೆ ಎರಡು ಎಕರೆ ಬರಡು ಭೂಮಿ ಕೊಡಲಾಯಿತು. ನೀರಿನ ಲಭ್ಯತೆ ಇಲ್ಲವಾದ್ದರಿಂದ ನೀರಿಗಾಗಿ ಸಾಂಪ್ರದಾಯಿಕ ನೀರಿನ ಮೂಲವನ್ನು ಸುರಂಗ ಕೊರೆಯುವ ಮೂಲಕ ಹುಡುಕುವ ನಿರಂತರ ಪ್ರಯತ್ನದ ನಂತರ ನೀರು ಲಭ್ಯವಾಯಿತು. ಮಿತ ನೀರಿನ ಬಳಕೆ ಜತೆಗೆ ಇದ್ದ ಸ್ವಲ್ಪ ಜಾಗೆಯಲ್ಲಿ ಅಂತರ್ಜಲ ಮರು ಪೂರಣ ಕಾಯಕ ಮಾಡುತ್ತಿದ್ದೇನೆ ಎಂದರು.
ಆನ್‌ಲೈನ್ ಮೂಲಕ ಮಾತನಾಡಿದ ನವದೆಹಲಿಯ ಭಾರತ ಸರಕಾರದ ರಾಷ್ಟ್ರೀಯ ಮಳೆ ಆಶ್ರಿತ ಪ್ರದೇಶಗಳ ಅಭಿವೃದ್ಧಿ ಪ್ರಾಧಿಕಾರದ ಡಾ| ಅಶೋಕ ದಳವಾಯಿ, ಜಿಲ್ಲೆ, ರಾಜ್ಯ ಮತ್ತು ದೇಶಗಳ ಗಡಿ ಮೀರಿ ಗಾಳಿ, ನೀರು ಮತ್ತು ಹವಾಮಾನ ಇಡೀ ಪೃಥ್ವಿಯನ್ನು ಪರಸ್ಪರ ಒಂದುಗೂಡಿಸುವ ಶಕ್ತಿಗಳಾಗಿವೆ. ಅಂತರ್ಜಲ ಮತ್ತು ಮೇಲ್ಮೈ ನೀರು ಪರಸ್ಪರ ಅವಲಂಬಿತವಾಗಿವೆ. ಅಂತರ್ಜಲ ದುರ್ಬಳಕೆಯಿಂದ ಭೂಮಿಯ ತಾಪಮಾನ ಹೆಚ್ಚಾಗುತ್ತದೆ ಮತ್ತು ಅಂತರ್ಜಲ ಖಾಲಿಯಾದರೆ ಭೂಮಿ ಕುಸಿಯಲು ಪ್ರಾರಂಭವಾಗುತ್ತದೆ. ಕರ್ನಾಟಕದಲ್ಲಿ ಖುಷ್ಕಿ ಜಮೀನು ಹೆಚ್ಚಾಗಿದ್ದು ನಿರಂತರ ಹರಿಯುವ ನದಿಗಳಿಲ್ಲ. ಮಳೆ ಆಶ್ರಿತ ನದಿಗಳಿಗೆ ಜಲ ಮೂಲವಾದ ಅಂತರ್ಜಲ ಸಂರಕ್ಷಣೆ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.
ನವದೆಹಲಿಯ ಇಂಡಿಯನ್ ಫೆಡರೇಶನ್ ಆಫ್ ಯುನೈಟೆಡ್ ನೇಶನ್ಸ್ ಅಸೋಸಿಯೇಷನ್ ಮಾಧ್ಯಮ ಸಲಹೆಗಾರ ದೀಪಕ ಪರ್ವತಿಯಾರ ಮಾತನಾಡಿ, ಪಂಚತತ್ವದಲ್ಲಿ ಒಂದಾದ ಎಲ್ಲರಿಗೂ ಅತ್ಯವಶ್ಯಕವಾದ ನೀರಿನ ಸದ್ಬಳಕೆಯಾಗಬೇಕಾಗಿದೆ. ಪ್ರತಿ ಗ್ರಾಮದಲ್ಲಿಯೂ ಒಬ್ಬ ಮಹಾಲಿಂಗ ನಾಯ್ಕ ಅಮೈ ಮತ್ತು ಶಿವಾಜಿ ಕಾಗಣಿಕರ ಅವರಂತಹ ಸಾಧಕರ ಸಾಂಪ್ರದಾಯಿಕ ಜ್ಞಾನ ಮತ್ತು ಮಾರ್ಗದರ್ಶನದಲ್ಲಿ ಎಲ್ಲರೂ ಅಂತರ್ಜಲದ ಸಂರಕ್ಷಣೆ ಕೈಕೊಳ್ಳಬೇಕು. ಅಂತರ್ಜಲ ಸಂರಕ್ಷಣೆಯಲ್ಲಿ ರೈತರು ಮತ್ತು ಜನ ಸಮುದಾಯದಾದ ಪಾಲ್ಗೊಳ್ಳುವಿಕೆ ಅವಶ್ಯವಿದೆ. ವಾಲ್ಮಿ ನೀರಿನ ಜಾಗೃತಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದು, ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ಜಲತಜ್ಞರಾದ ಅಮೈ ಮಹಾಲಿಂಗ ನಾಯ್ಕ, ಶಿವಾಜಿ ಕಾಗಣಿಕರ, ಭೂವಿಜ್ಞಾನಿ ಡಾ| ಜಿ.ವಿ. ಹೆಗಡೆ ಮತ್ತು ಸೂಕ್ಷ್ಮ ನೀರಾವರಿ ವಿಷಯ ತಜ್ಞ ಗಿರೀಶ ದೇಶಪಾಂಡೆ ಅವರನ್ನು ವಿಶ್ವ ಜಲ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.
ಟಿ.ಎಸ್. ಅನಿತಾ ಶಾಮ್, ಶಶಿಕಾಂತ ನಾಯಕ, ಡಾ| ಬಸವರಾಜಯ್ಯ, ಪಾಲಿಕೆ ಆಯುಕ್ತ ಡಾ|ಗೋಪಾಲಕೃಷ್ಣ, ಜಿಪಂ ಸಿಇಒ ಡಾ| ಸುರೇಶ ಇಟ್ನಾಳ, ಡಾ| ಬಿ.ಡಿ. ಬಿರಾದಾರ, ಶಶಿಧರ ಕುರೇರ, ಕೇಶವ ಕುಲಕರ್ಣಿ, ಫರೀದ ಖಾನ್, ಅನುಸೂಯಾ, ತೇಜಸ್ವಿ ಪಟೇಲ್ ಪಾಲ್ಗೊಂಡಿದ್ದರು. ಪ್ರೊ| ಬಿ.ವೈ. ಬಂಡಿವಡ್ಡರ ಮತ್ತು ಗಿರೀಶ್ ಬಿ. ಕಾರ್ಯಕ್ರಮ ಸಂಯೋಜಿಸಿದರು. ಮಹದೇವಗೌಡ ಹುತ್ತನಗೌಡರ ನಿರೂಪಿಸಿದರು. ವಾಲ್ಮಿ ಸಂಸ್ಥೆಯ ಬೋಧಕರು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳಗ್ಗೆ ವಾಲ್ಮಿ ಸಂಸ್ಥೆಯ ಕೆರೆಯಿಂದ ಮಹಿಳೆಯರು ಕುಂಭಯಾತ್ರೆ ಕೈಕೊಂಡಿದ್ದು ವಿಶೇಷವಾಗಿತ್ತು.
ಅಂತರ್ಜಲದ ವಿವಿಧ ಆಯಾಮಗಳನ್ನು ಅರ್ಥ ಮಾಡಿಕೊಂಡು ಅಂತರ್ಜಲ ಅಭಿವೃದ್ಧಿ, ಸಂರಕ್ಷಣೆ ಮತ್ತು ಬಳಕೆ ಕುರಿತು ಜಾಗತಿಕ ಹಾಗೂ ಸ್ಥಳೀಯ ಪ್ರಯತ್ನಗಳ ಅವಶ್ಯಕತೆ ಇರುತ್ತದೆ. ಇದೀಗ ಅಂತರ್ಜಲದ ಮಹತ್ವವನ್ನು ತಿಳಿಸಿಕೊಡಲು ಜಲಜಾಗೃತಿ ಅವಶ್ಯಕತೆ ಇದೆ.
–ಡಾ| ರಾಜೇಂದ್ರ ಪೊದ್ದಾರ ವಾಲ್ಮಿ ನಿರ್ದೇಶಕ
ಸರ್ಕಾರಗಳು ನೀರಾವರಿ ಯೋಜನೆಗಳಿಗೆ ನೀಡಿದ ಮಹತ್ವವನ್ನು ನೀರಾವರಿ ನಿರ್ವಹಣೆಗೂ ನೀಡಿದರೆ, ನೀರಿನ ಸದ್ಬಳಕೆಯಾಗುತ್ತದೆ. ಸರ್ಕಾರದಷ್ಟೇ ಮಹತ್ವದ ಪಾತ್ರ ರೈತ ಸಮುದಾಯದ್ದೂ ಆಗಿದೆ.
-ಪಂಚಪ್ಪ ಕುಲಬುರ್ಗಿ ರೈತ ಮುಖಂಡ, ವಿಜಯಪುರ