ಪ್ಯಾರಿಸ್: ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಚ್ ಫ್ರೆಂಚ್ ಓಪನ್ ಟೆನಿಸ್‌ನ ಉಪಾಂತ್ಯಕ್ಕೇರಿದ್ದಾರೆ. ಅವರೊಂದಿಗೆ ಸ್ಟೆಫಾನೊಸ್ ಸಿಸಿಪಸ್ ಕೂಡಾ ಮುಂದಿನ ಸುತ್ತಿಗೇರಿದ್ದಾರೆ. ಇವರಿಬ್ಬರ ನಡುವೆ ಉಪಾಂತ್ಯದಲ್ಲಿ ಹೋರಾಟ ನಡೆಯಲಿದೆ.
ಮಣ್ಣಿನಂಕಣದ ಮಹಾನ್ ಆಟಗಾರ ರಫಾಯೆಲ್ ನಡಾಲ್, ಇನ್ನೊಂದು ಉಪಾಂತ್ಯದಲ್ಲಿ ಡಿಯೊಗೆ ಸ್ವಾಜ್‌ಮನ್‌ರನ್ನು ಎದುರಿಸಲಿದ್ದಾರೆ.
ಬುಧವಾರ ನಡೆದ ಎಂಟರಘಟ್ಟದ ಪಂದ್ಯದಲ್ಲಿ ಪುರುಷರ ಸಿಂಗಲ್ಸ್‌ನ ವಿಶ್ವ ನಂ.1 ಆಟಗಾರ ಜೊಕೊವಿಚ್, ಪ್ಯಾಬ್ಲೊ ಕರೆನೊ ಬುಸ್ಟರಿಂದ ಪೈಪೋಟಿ ಎದುರಿಸಿದರು. ಆದರೆ ಗೆಲುವನ್ನು ಬಿಟ್ಟುಕೊಡಲಿಲ್ಲ. ಮೊದಲ ಸೆಟ್ ಅನ್ನು ಜೊಕೊ ಕಳೆದುಕೊಂಡರು. ಮುಂದಿನ ಮೂರು ಸೆಟ್‌ಗಳನ್ನು ಸತತವಾಗಿ ಗೆದ್ದ ಜೊಕೊ ಯುಎಸ್ ಓಪನ್ ನೋವನ್ನು ಮರೆತರು. ಒಟ್ಟಾರೆ ಪ್ಯಾಬ್ಲೊ ವಿರುದ್ಧ ಜೊಕೊ ಗೆಲುವಿನ ಅಂತರ 4-6, 6-2, 6-3, 6-4. ಯುಎಸ್ ಓಪನ್‌ನಲ್ಲಿ ಇದೇ ಆಟಗಾರನ ವಿರುದ್ಧದ ಪಂದ್ಯದಲ್ಲಿ1 ಸೆಟ್ ಮಾತ್ರ ಆಡಿದ್ದ ಜೊಕೊ,ಆಪಂದ್ಯವನ್ನು ಬಿಟ್ಟುಕೊಟ್ಟು, ಕೂಟದಿಂದ ಅನಿವಾರ್ಯವಾಗಿ ಹೊರ ನಡೆದಿದ್ದರು.
ಇದನ್ನೂ ಓದಿ:ಗೆಲುವಿನ ಹಳಿ ಏರಲು ರಾಜಸ್ಥಾನ ಹೋರಾಟ: ಡೆಲ್ಲಿಗೆ ಮತ್ತೊಂದು ಗೆಲುವಿನ ಯೋಜನೆ
ಆ ಸೆಟ್‌ನಲ್ಲಿ ಹಿನ್ನಡೆ ಸಾಧಿಸಿದ ಸಿಟ್ಟಲ್ಲಿ, ಕೈಯಲ್ಲಿದ್ದ ಚೆಂಡನ್ನು ತುಸು ನಿರ್ಲಕ್ಷ್ಯದಿಂದ ಹಿಂದಕ್ಕೆ ಎಸೆದಿದ್ದರು. ಅದು ಹೋಗಿ ಅಲ್ಲಿದ್ದ ಗೆರೆ ತೀರ್ಪುಗಾರ್ತಿಗೆ ಬಡಿಯಿತು. ನಿಯಮಾವಳಿಗಳ ಪ್ರಕಾರ ಜೊಕೊ ಕೂಟದಿಂದ ಹೊರಹಾಕಲ್ಪಟ್ಟರು.
ಸಿಸಿಪಸ್ ಸೆಮೀಸ್‌ಗೆ: ಪುರುಷರ ಸಿಂಗಲ್ಸ್‌ನ ಇನ್ನೊಂದು ಎಂಟರಘಟ್ಟದ ಪಂದ್ಯದಲ್ಲಿ ಸ್ಟೆಫಾನೊಸ್ ಸಿಸಿಪಸ್ ಅವರು 7-5, 6-2, 6-3ರಿಂದ ಆಂಡ್ರೆ ರಬ್ಲೆವ್‌ರನ್ನು ಸೋಲಿಸಿ, ಕೂಟದಿಂದ ಹೊರಗಟ್ಟಿದರು. ಸಿಸಿಪಸ್ ಉಪಾಂತ್ಯದಲ್ಲಿ ನೊವಾಕ್ ಜೊಕೊವಿಚ್ ರಂತಹ ಪ್ರಬಲ ಸ್ಪರ್ಧಿಯನ್ನು ಎದುರಿಸಬೇಕಾಗಿದೆ. ಇದು ಅವರಿಗೆ ಒಂದು ಅವಕಾಶವೂ ಹೌದು. ಇಲ್ಲಿ ಯಶಸ್ವಿಯಾಗಿ, ಅಂತಿಮ ಹಂತಕ್ಕೇರಿದರೆ ಭವಿಷ್ಯದ ತಾರೆಯಾಗಿ ಹೊರ ಹೊಮ್ಮಲೂಬಹುದು.