Advertisement

ಅಸಮರ್ಪಕ ಮೋರಿ ತೆರವುಗೊಳಿಸಲು ನೋಟಿಸ್‌ 

02:12 PM Jun 24, 2018 | |

ಕಬಕ : ಮಳೆ ನೀರು ರಸ್ತೆಗೆ ಹರಿಯದಂತೆ ತಡೆಯುವ ಸಲುವಾಗಿ ಆಸಮರ್ಪಕವಾಗಿದ್ದ ಮೋರಿಗಳನ್ನು ತೆರವುಗೊಳಿಸಲು ಕಬಕ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಬುಧವಾರ ನಿರ್ಣಯ ಕೈಗೊಳ್ಳಲಾಯಿತು. ಕಬಕ ಗ್ರಾ.ಪಂ. ಸಾಮಾನ್ಯ ಸಭೆ ಅಧ್ಯಕ್ಷೆ ಪ್ರೀತಾ ಬಿ. ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ನ ರಾಜೀವ್‌ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.

Advertisement

ಕಬಕದಿಂದ ಪೋಳ್ಯದ ವರೆಗಿನ ರಸ್ತೆ ಬದಿಯ ಅಂಗಡಿ, ಗ್ಯಾರೇಜು ಹಾಗೂ ಮನೆ ಮಾಲಕರು ರಸ್ತೆಯ ಬದಿಯಲ್ಲಿ ನೀರು ಹರಿಯುವ ಚರಂಡಿಗಳಿಗೆ ಅವೈಜ್ಞಾನಿಕ ಮೋರಿಗಳನ್ನು ಹಾಕಿದರಿಂದ ಅದರಲ್ಲಿ ಮಳೆ ನೀರು ಸಮರ್ಪಕವಾಗಿ ಹರಿಯದೆ ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದ ವಾಹನ ಸವಾರರಿಗೆ ಮತ್ತು ಶಾಲಾ ಮಕ್ಕಳಿಗೆ ತೊಂದರೆಯಾಗುತಿದೆ. ಕೆಲವು ಕಡೆ ಶಾಲೆಗೆ ನಡೆದುಕೊಂಡು ಹೋಗುವ ವಿದ್ಯಾರ್ಥಿಗಳ ಮೇಲೆ ಕೆಸರು ಮಿಶ್ರಿತ ನೀರು ಚಿಮ್ಮುತ್ತದೆ. ಈ
ಸಮಸ್ಯೆಗೆ ಮುಕ್ತಿ ಪಡೆಯಲು ಪೇಟೆಯಲ್ಲಿ ಆಳವಡಿಸಿದ ಖಾಸಗಿ ಚರಂಡಿಗಳನ್ನು ತೆರವುಗೊಳಿಸಿ ಸಮರ್ಪಕ ಮಳೆ ನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸದಸ್ಯ ಶಾಬ ಕಬಕ ಆಗ್ರಹಿಸಿದರು.

ಇವರ ಮನವಿಯನ್ನು ಆಲಿಸಿದ ಸಭೆ ಸಹಮತ ವ್ಯಕ್ತಪಡಿಸಿ ಸಂಬಂಧ ಪಟ್ಟವರಿಗೆ ನೋಟಿಸ್‌ ಜಾರಿ ಮಾಡಿ ಮುಂದಿನ ಕ್ರಮ ಜರುಗಿಸಲು ತಿರ್ಮಾನಿಸಲಾಯಿತು. ಮುರ ಜಂಕ್ಷನ್‌ನಲ್ಲೂ ಚರಂಡಿ ಬ್ಲಾಕ್‌ ಆಗಿ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದೆ. ಆಲ್ಲಿಯೂ ಪಂಚಾಯತ್‌ ಕಾರ್ಯಾಚರಣೆ ನಡೆಸಿ ಸಾರ್ವಜನಿಕ ತೊಂದರೆ ನಿವಾರಿಸಬೇಕು ಎಂದು ಸದಸ್ಯ ಪ್ರಶಾಂತ್‌ ಮುರ ತಿಳಿಸಿದರು. ಕಬಕ ಪೇಟೆಯಲ್ಲಿ ಅಕ್ರಮ ಗೂಡಂಗಡಿ ಕಟ್ಟಲಾಗುತಿದೆ ಎಂದು ಜಮೀರ್‌ ವಿದ್ಯಾಪುರ ಎಂಬವರು ಪ್ರಸ್ತಾವಿಸಿದರು. ಪಂಚಾಯತ್‌ ನೀರು ನಿರ್ವಾಹಕರಿಗೆ ಹಾಗೂ ಸಾರ್ವಜನಿಕರಿಗೆ ಇರುವ ಗೊಂದಲವನ್ನು ನಿವಾರಿಸುವಂತೆ ಪಂಚಾಯತ್‌ ನೀರು ನಿರ್ವಾಹಕ ಅಬ್ದುಲ್‌ ರಹಿಮಾನ್‌ ಅಂದು ಪಂಚಾಯತ್‌ಗೆ ಮನವಿ ಸಲ್ಲಿಸಿದರು.

ಭವಾನಿ ಶವ ಸಂಸ್ಕಾರಕ್ಕೆ ಅನುದಾನ
ಕಬಕ ವಿದ್ಯಾಪುರದಲ್ಲಿ ಇತ್ತೀಚೆಗೆ ನಿಧನರಾದ ಭವಾನಿ ಎಂಬವರ ಶವ ಸಂಸ್ಕಾರದ ಸಹಾಯಧನಕ್ಕೆ ಬಂದ ಅರ್ಜಿಯನ್ನು ಸ್ವೀಕರಿಸಿ 1,000 ರೂ. ಬಿಡುಗಡೆ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಸಾರ್ವಜನಿಕರಿಗೆ ಪಂಚಾಯತ್‌ನಿಂದ ನೀಡಲಾಗುವ ದೃಢ ಪತ್ರಿಕೆ ನಿರಾಕ್ಷೇಪಣಾ ಪತ್ರಗಳಿಗೆ 250 ರೂ. ಈಗಾಗಲೇ ಪಡೆಯಲಾಗುತ್ತಿದ್ದು ಇದರಿಂದ ಬಡವರಿಗೆ ಕಷ್ಟವಾಗುತ್ತಿದೆ. ಬಳಿಕ ಸಭೆಯಲ್ಲಿ ಚರ್ಚಿಸಿ ದೃಢ ಪತ್ರಕ್ಕೆ 100 ರೂ. ನಿಗದಿ ಮಾಡಲು ನಿರ್ಣಯಿಸಲಾಯಿತು.

ಮರ ತೆರವಿಗೆ ಆಗ್ರಹ
ಮಾಣಿ-ಮೈಸೂರು ರಾಷ್ಟ್ರ ಹೆದ್ದಾರಿಗೆ ಕುವೆತ್ತಿಲ ಎಂಬಲ್ಲಿ ಬೃಹದಾಕಾರದ ಮರವೊಂದು ಬೀಳುವ ಸ್ಥಿತಿಯಲ್ಲಿದೆ. ಇದನ್ನು ತೆರವುಗೊಳಿಬೇಕು ಎಂದು ಸ್ಥಳೀಯ ಸದಸ್ಯ ಶಾಬ ಆಗ್ರಹಿಸಿದರು. ಉಪಾಧ್ಯಕ್ಷೆ ಶಂಕರಿ ಜಿ. ಭಟ್‌, ಆಭಿವೃದ್ಧಿ ಅಧಿಕಾರಿ ಆಶಾ ಇ., ಕಾರ್ಯದರ್ಶಿ ಚಂದ್ರಮತಿ, ವಿಠಲ ಗೌಡ ಬನ, ಶಾಬ ಕೆ. ಪ್ರಶಾಂತ್‌ ಮುರ, ವಿನಯ ಕುಮಾರ್‌ ಕಲ್ಲೇಗ, ಮೋಹನ ಪಿ., ಬಾಲಕೃಷ್ಣ ಕಳಮೆಮಜಲು, ಬಾನುಮತಿ ಹೆಗ್ಡೆ, ರೂಪಾ, ಮಾಲತಿ, ಹರಿಣಾಕ್ಷಿ ಉಪಸ್ಥಿತರಿದ್ದರು . 

Advertisement

ಅಳವಡಿಸಿಕೊಡುವ ಪ್ರಶ್ನೆಯೇ ಇಲ್ಲ 
ಪಂಚಾಯತ್‌ ಸಂಬಂಧಪಟ್ಟವರಿಗೆ ನೋಟಿಸ್‌ ಜಾರಿ ಮಾಡಿಯೂ ಸ್ಪಂದನೆ ನೀಡದ ಸಾರ್ವಜನಿಕರ ಮನೆಯ ಮುಂದೆ ಇರುವ ಮೋರಿಗಳನ್ನು ತೆರವುಗೊಳಿಸಿದರೆ ಮತ್ತೆ ಪಂಚಾಯತ್‌ ಅನುದಾನದಲ್ಲಿ ಸರಿಪಡಿಸಲಾಗುವುದಿಲ್ಲ. ಪಂಚಾಯತ್‌ ನೀಡಿರುವ ನೋಟಿಸ್‌ ಬಂದ ತತ್‌ ಕ್ಷಣ ತಮ್ಮ ಮೋರಿಗಳನ್ನು ಮಳೆ ನೀರು ಹರಿಯುವಂತೆ ಸರಿಪಡಿಸಿಕೊಂಡು ಸಹಕರಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next