ನವದೆಹಲಿ: ಸಾಲಗಾರರಿಗೆ ಕಿರುಕುಳ ನೀಡುತ್ತಿರುವ ಚೀನೀ ಪ್ರಜೆಗಳ ನಿಯಂತ್ರಣದಲ್ಲಿರುವ ಲೋನ್ ಆ್ಯಪ್ ಗಳ ವಿರುದ್ಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತುರ್ತಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ನಿರ್ದೇಶಿಸಿದೆ.
ಲೋನ್ ಆ್ಯಪ್ ಗಳಿಂದ ಸಾಲ ತೀರಿಸಲಾಗದ ವ್ಯಕ್ತಿಗಳಿಗೆ ಕಿರುಕುಳ, ಬ್ಲಾಕ್‌ಮೇಲ್ ಸೇರಿದಂತೆ ಅನಗತ್ಯ ಶೋಷಣೆ ನೀಡಲಾಗುತ್ತಿದೆ. ಇದರಿಂದ ಅನೇಕ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಈ ಸಮಸ್ಯೆಯು ರಾಷ್ಟ್ರೀಯ ಭದ್ರತೆ, ಆರ್ಥಿಕತೆ ಮತ್ತು ನಾಗರಿಕರ ಸುರಕ್ಷತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ವಿಶೇಷವಾಗಿ ದುರ್ಬಲ ಮತ್ತು ಕಡಿಮೆ ಆದಾಯದ ಕುಟುಂಬದ ವ್ಯಕ್ತಿಗಳಿಗೆ ಸಂಸ್ಕರಣಾ ಶುಲ್ಕ, ಅತಿಯಾದ ಬಡ್ಡಿ ದರದಲ್ಲಿ ಅಲ್ಪವಧಿಯ ಮತ್ತು ಸಣ್ಣ ಮೊತ್ತದ ಸಾಲವನ್ನು ಅಕ್ರಮ ಡಿಜಿಟಲ್ ಲೋನ್ ಆ್ಯಪ್ ಗಳು ನೀಡುತ್ತಿರುವ ಬಗ್ಗೆ ದೇಶಾದ್ಯಂತ ನೂರಾರು ದೂರುಗಳು ದಾಖಲಾಗಿವೆ. ಸಾಲ ಪಡೆದವರ ವೈಯಕ್ತಿಕ ಮಾಹಿತಿ, ಸಂಪರ್ಕ ಸಂಖ್ಯೆ, ಅವರಿರುವ ಸ್ಥಳ, ಪೋಟೋಗಳು ಮತ್ತು ವಿಡಿಯೋಗಳನ್ನು ಸಾಲ ನೀಡಿದವರು ಪಡೆದು ಬ್ಲಾಕ್‌ಮೇಲ್ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿದೆ ಎಂದು ಗೃಹ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.