ಬೆಂಗಳೂರು: ಕನ್ನಡ ತಂತ್ರಾಂಶದ ಯೂನಿಕೋಡ್ ಬಳಕೆಯನ್ನು ಇನ್ನಷ್ಟು ಸುಗಮಗೊಳಿಸುವ “ನುಡಿ-6 ತಂತ್ರಾಂಶ’ವನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ.
ಆಡಳಿತ ಮತ್ತು ತಂತ್ರಾಂಶದಲ್ಲಿ ಕನ್ನಡ ಬಳಕೆ ಕಡ್ಡಾಯ ಸಂಬಂಧ ಮಂಗಳವಾರ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಕನ್ನಡ ಗಣಕ ಪರಿಷತ್ ಅಭಿವೃದ್ಧಿಪಡಿಸಿರುವ ನುಡಿ-6 ತಂತ್ರಾಂಶ ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಅದನ್ನು ಮುಖ್ಯಮಂತ್ರಿ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ಆಡಳಿತದ ಎಲ್ಲ ಹಂತಗಳಲ್ಲೂ ಕನ್ನಡವನ್ನು ಅನುಷ್ಠಾನಗೊಳಿಸುವುದಕ್ಕೆ ಪ್ರಾಧಿಕಾರ ಕಟಿಬದ್ಧವಾಗಿದ್ದು, ಕನ್ನಡ ತಂತ್ರಾಂಶವನ್ನು ಸರ್ಕಾರದ ಎಲ್ಲ ಕಚೇರಿಗಳಲ್ಲೂ ಕಡ್ಡಾಯವಾಗಿ ಬಳಸುವಂತೆ ಸೂಚನೆ ನೀಡಲಾಗುವುದು ಮತ್ತು ಅನುಷ್ಠಾನವನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುವುದು.
ಮುಂದಿನ ದಿನಗಳಲ್ಲಿ ಕನ್ನಡಸ್ನೇಹಿ ತಂತ್ರಾಂಶಗಳನ್ನು ರಾಜ್ಯಾದ್ಯಂತ ಎಲ್ಲರೂ ಅಳವಡಿಸಿಕೊಂಡು ಬಳಸಲು ಅನುಕೂಲವಾಗುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅಂತರ್ಜಾಲ ಪುಟಗಳು, ಸಾಮಾಜಿಕ ಜಾಲತಾಣಗಳು, ಪ್ರಕಾಶನ ಸಂಸ್ಥೆಗಳು, ಸುದ್ದಿ ಮಾಧ್ಯಮಗಳು ಕನ್ನಡಸ್ನೇಹಿ ಯುನಿಕೋಡ್ ತಂತ್ರಾಂಶ ಅಳವಡಿಸಿಕೊಳ್ಳುವಂತೆ ಪ್ರಚಾರ ಮಾಡಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಕಚೇರಿಯಿಂದ ಹಿಡಿದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಚೇರಿ ಒಳಗೊಂಡಂತೆ ಎಲ್ಲ ಇಲಾಖೆಗಳ ಅಧಿಕೃತ ಅಂತರ್ಜಾಲ ಮುಖಪುಟಗಳು ಸಂಪೂರ್ಣವಾಗಿ ಕನ್ನಡದಲ್ಲಿರುವಂತೆ ಮರು ವಿನ್ಯಾಸಗೊಳಿಸಲು ಕ್ರಮ ಕೈಗೊಳ್ಳುವಂತೆ ಇದೇ ವೇಳೆ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯ (ಇ-ಆಡಳಿತ) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.