ಶಿರ್ವ: ಕಾಪು ವಿಧಾನಸಭಾ ಕ್ಷೇತ್ರದ ಶಾಸಕನಾಗಿದ್ದಾಗ ಕೇಂದ್ರದ ಹಿರಿಯ ಸಚಿವರನ್ನು ಸಂಪರ್ಕಿಸಿ ಅನುದಾನ ಬಿಡುಗಡೆಗೊಳಿಸಿ ಮೂಡುಬೆಳ್ಳೆ ಹಾಗೂ ಶಿರ್ವದ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಅದನ್ನು ಈಗ ಕಾಂಗ್ರೆಸ್ ಪಕ್ಷದವರು ತಮ್ಮ ಸರಕಾರದ ಸಾಧನೆಯೆಂಬಂತೆ ಬಿಂಬಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುವುದು ಶಾಸಕರ ಸಾಧನೆಯಲ್ಲ, ಕರ್ತವ್ಯವಾಗಿದೆ. ಮತದಾರರು ಬಿಜೆಪಿಯನ್ನು ಬೆಂಬಲಿಸಿ ಜನಸೇವೆ ಮಾಡುವ ಅವಕಾಶ ನೀಡಿ ಎಂದು ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್. ಮೆಂಡನ್ ಹೇಳಿದರು.
ಅವರು ಗುರುವಾರ ಶಿರ್ವ ಬಸ್ ನಿಲ್ದಾಣದ ಬಳಿ ಕಾಪು ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಲಿರುವ ಬಿಜೆಪಿ ಚುನಾವಣಾ ಪ್ರಚಾರ ರಥ ಯಾತ್ರೆಯ ಪ್ರಥಮ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಗೀತಾಂಜಲಿ ಸುವರ್ಣ ಮಾತನಾಡಿ ಕೇಂದ್ರದ ಮೋದಿ ಸರಕಾರದ ಜನಪರ ಯೋಜನೆಗಳನ್ನು ತನ್ನ ಸಾಧನೆಯೆಂಬಂತೆ ಬಿಂಬಿಸುವ ರಾಜ್ಯ ಸರಕಾರ ಹಿಂದೂ ಯುವಕರ ರಕ್ಷಣೆ ಮಾಡಲು ವಿಫಲವಾಗಿದೆ. ಕಾಂಗ್ರೆಸ್ ಸರಕಾರದ ದುರಾಡಳಿತದ ಬದಲಾವಣೆಗಾಗಿ ಈ ಬಾರಿ ಬಿಜೆಪಿಯನ್ನು ಬೆಂಬಲಿಸಿ ಸಜ್ಜನ ರಾಜಕಾರಣಿ ಲಾಲಾಜಿ ಮೆಂಡನ್ ಅವರನ್ನು ಗೆಲ್ಲಿಸಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ವಾರಿಜಾ ಪೂಜಾರ್ತಿ ಮಾತನಾಡಿದರು. ರಥಯಾತ್ರೆಯ ಉಸ್ತುವಾರಿ ನಾಗರಾಜ ಶೆಟ್ಟಿ, ಪ್ರಸಾದ್ ಶೆಟ್ಟಿ ಕುತ್ಯಾರು,ದೇವದಾಸ್ ನಾಯಕ್, ಶಿರ್ವಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ನಾಯ್ಕ,ಸಂತೋಷ್ ಕುಮಾರ್ ಮೂಡುಬೆಳ್ಳೆ, ರಾಜೇಶ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.ರವೀಂದ್ರ ಪಾಟ್ಕರ್ ನಿರೂಪಿಸಿ ,ಗ್ರಾಮ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ಕೋಡು ವಂದಿಸಿದರು.