Advertisement

ಅಭಿವೃದ್ಧಿ ವಿಷಯದಲ್ಲಿ ಬೇಡ ರಾಜಕೀಯ

03:30 PM Jun 27, 2018 | |

ನಾಲತವಾಡ: ಪಟ್ಟಣದಲ್ಲಿ ದಿನೇ ದಿನೇ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದ್ದು ಅಧ್ಯಕ್ಷರೂ ಸೇರಿದಂತೆ ಎಲ್ಲ ಸದಸ್ಯರು ಸಹಕಾರ ಹಾಗೂ ಒಮ್ಮತದ ಮೂಲಕ ನಮ್ಮನ್ನು ನಂಬಿದ ಜನತೆಗೆ 24 ತಾಸು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸೋಣ, ನನ್ನೊಂದಿಗೆ ಕೈಜೋಡಿಸಿ ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಶಾಸಕರಾಗಿ ಮೊದಲ ಬಾರಿಗೆ ಪಪಂ ಸಾಮಾನ್ಯ ಸಭೆಗೆ ಆಗಮಿಸಿದ ಅವರು, ಅಧ್ಯಕ್ಷ ಪೃಥ್ವಿರಾಜ್‌ ನಾಡಗೌಡ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜನ ಪ್ರತಿನಿಧಿಗಳಾದ ನಾವು ಜನರ ಸೇವೆ ಮಾಡೋಣ. ಕಳೆದ ಹಲವು ದಿನಗಳಿಂದ ನಿಮ್ಮಲ್ಲಿದ್ದ ವೈಯಕ್ತಿಕ ತಿಕ್ಕಾಟ ಬದಿಗೊತ್ತಬೇಕು. ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸೋಣ. ಕ್ರಿಯಾಯೋಜನೆ ಸಿದ್ಧಪಡಿಸುವ ಸಮಯದಲ್ಲಿ ರಾಜಕೀಯ ಬದಿಗೊತ್ತಿ ಸಹಕಾರದಿಂದ ಸಿದ್ದಪಡಿಸಿ ಎಂದರು.

ಕಳೆದ ಹಲವು ವರ್ಷಗಳಿಂದ ಪಟ್ಟಣದ ಕೆಲವು ಕುಟುಂಬಗಳ ಸ್ಥಿತಿಗತಿ ಅರಿತಿದ್ದೇನೆ. ನಿಜವಾದ ಕುಟುಂಬಗಳಿಗೆ ಸೂರು ಸಿಗುತ್ತಿಲ್ಲ, ಮುಂದಿನ ದಿನಗಳಲ್ಲಿ ಹೀಗಾಗಬಾರದು ಎನ್ನುವ ಉದ್ದೇಶದಿಂದ ನಾನು ಈಗಾಗಲೇ ಸೂರು ವಂಚಿತರ ಸಮೀಕ್ಷೆ ಮಾಡಿಸಿದ್ದೇನೆ. ಅಂತಹವರಿಗೆ ಆಸರೆಯಾಗೋಣ ಎಂದರು. ಎಲ್ಲ ಸದಸ್ಯರು ತಮ್ಮ ವಾರ್ಡ್‌ನತ್ತ ಗಮನ ಹರಿಸಿ ಪ್ರಮುಖವಾಗಿ ಸ್ವತ್ಛತೆಗೆ ಆದ್ಯತೆ ಕೊಡುವ ಮೂಲಕ ಚರಂಡಿ, ರಸ್ತೆಗಳನ್ನು ದುರಸ್ತಿಗೊಳಿಸಬೇಕು.

ವಿದ್ಯುತ್‌ ಕಂಬಗಳಲ್ಲಿ ದೀಪಗಳ ಅಳವಡಿಕೆ, ಪಡಿತರ ಸಮಸ್ಯೆ, ಪ್ರಮುಖ ಸ್ಥಳಗಳಲ್ಲಿ ಈಗಾಗಲೇ ಪ್ರಾರಂಭಗೊಂಡ ಚರಂಡಿ, ಕುಡಿಯುವ ನೀರಿನ ಸಂಪರ್ಕ ಹಾಗೂ ರಸ್ತೆಗಳು ಕಳಪೆಯಾಗದಂತೆ ನಿಗಾವಹಿಸಿ ಹೆಚ್ಚಿನ ಅನುದಾನ ಅವಶ್ಯವಿದ್ದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ನನಗೆ ಒಪ್ಪಿಸಿ ಎಂದರು. 

Advertisement

ಪಪಂನಲ್ಲಿ ಸಿಬ್ಬಂದಿಗಳ ಕೊರತೆ ಇದ್ದಲ್ಲಿ ಶೀಘ್ರವೇ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು. ಈಗಾಗಲೇ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಅವರವರ ಕೆಲಸಗಳನ್ನು ಚಾಚು ತಪ್ಪದೇ ಮಾಡುವಂತೆ ಸಿಒ ನಿಗಾವಹಿಸಬೇಕು. ಪಟ್ಟಣದ ಹಲವು ವಾರ್ಡ್‌ಗಳಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ, ತಾತ್ಕಾಲಿಕ ಕುಡಿಯುವ ನೀರಿನ ಟ್ಯಾಂಕ್‌ ಮೂಲಕ ಪೂರೈಸಬೇಕಿತ್ತು ಎಂದು ಸಿಒ ಅವರನ್ನು ಪ್ರಶ್ನಿಸಿದ ಶಾಸಕರು, ಮುಂದಿನ ದಿನಗಳಲ್ಲಿ ಬೇಜವಾಬ್ದಾರಿ ಆಡಳಿತ ಸಹಿಸಲ್ಲ ಎಂದು ಎಚ್ಚರಿಸಿದರು. 

ಅಧಿಕಾರಿಗಳು ಸೇರಿದಂತೆ ಸದಸ್ಯರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪಟ್ಟಣದ 14 ವಾರ್ಡ್ಗಳಲ್ಲಿ 7 ಶುದ್ಧ ನೀರಿನ ಘಟಕ ನಿರ್ಮಿಸಬೇಕು. ನನ್ನ ಅಧಿಕಾರ  ಅವಧಿಯಲ್ಲಿ ಯಾರೂ ನನಗೆ ಆಶ್ರಯ ಮನೆಗಳಿಲ್ಲ ಎಂದು ಅಂಗಲಾಚಿಕೊಳ್ಳಬಾರದು. ಈ ನಿಟ್ಟಿನಲ್ಲಿ ಎಲ್ಲ ಸದದಸ್ಯರ ಕಾರ್ಯಪ್ರವೃತ್ತರಾಗಿ ಎಂದು ಹೇಳಿದರು.

ಆರೋಪ: ಸಭೆ ನೆಡೆಯುತ್ತಿದ್ದಂತೆಯೇ ಸದಸ್ಯರಾದ ಸುಮಾ ಗಂಗನಗೌಡ, ಲತಾ ಕಟ್ಟಿಮನಿ ಹಾಗೂ ಭೀಮಣ್ಣ ಗುರಿಕಾರ ಮಧ್ಯಪ್ರವೇಶಿಸಿ ಪಪಂನ ನಮ್ಮ ವಾರ್ಡ್‌ಗಳಿಗೆ ಮಲತಾಯಿ ಧೋರಣೆ ಮಾಡಲಾಗುತ್ತಿದ್ದು, ಇದುವರೆಗೂ ಆಶ್ರಯ ಮನೆಗಳ ಹಂಚಿಕೆ, ರಸ್ತೆ, ಚರಂಡಿ ಕಾಮಗಾರಿಗಳ ಕ್ರಿಯಾಯೋಜನೆಗಳನ್ನು ನಮ್ಮನ್ನು ಒಮ್ಮತಕ್ಕೆ ಪಡೆಯದೇ ಸಿದ್ದಪಡಿಸುತ್ತಿದ್ದು ಈ ಅವ್ಯವಸ್ಥೆಗೆ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದರು. ಈ ಹಿಂದೆ ತಿಕ್ಕಾಟದ ಪ್ರಸಂಗಗಳನ್ನು ನೆನಪಿಸಿಕೊಂಡು ಮತ್ತೆ ತಿಕ್ಕಾಟಕ್ಕೆ ಆಸ್ಪದ ಕೊಡಬೇಡಿ ಎಂದು ಶಾಸಕ ನಡಹಳ್ಳಿ ಅವರು ಆರೋಪಿಸಿದ ಸದಸ್ಯರಿಗೆ ತಿಳಿ ಹೇಳಿದರು.

ಈ ವೇಳೆ ಪಪಂ ಉಪಾಧ್ಯಕ್ಷ ವೀರೇಶ ಚಲವಾದಿ, ಶಿವಶೇಖರಯ್ಯ ಹಿರೇಮಠ, ಕಾಶಿಮಸಾಬ್‌ ಚಿಲಮಕೋರ, ಹನುಮಂತ ಕಾನೀಕೇರಿ, ಮೈಬೂಬ ಬಾಗವಾನ, ದಸ್ತಗೀರಸಾಬ್‌ ಆರೇಶಂಕರ, ಭೀಮಣ್ಣ ಗುರಿಕಾರ, ಸಲ್ಮಾಬೇಗಂ ನಾಡದಾಳ, ಲಕ್ಷ್ಮೀಬಾಯಿ ಕ್ಷತ್ರಿ, ಬಸಲಿಂಗಮ್ಮ ಮಸ್ಕಿ, ಸಂಗಮ್ಮ ಗಂಗನಗೌಡ, ಲತಾ ಕಟ್ಟಿಮನಿ, ಸುಮಾ ಗಂಗನಗೌಡ, ಸಿಒ ಮಾರುತಿ ನಡುವಿನಕೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next