Advertisement

ಬೆಳವಣಿಗೆಗೆ ತಕ್ಕಷ್ಟು ಅಭಿವೃದ್ಧಿ ಕಂಡಿಲ್ಲ

12:30 AM Mar 05, 2019 | |

ಬೆಂಗಳೂರು: ವಿದ್ಯಾವಂತ ಹಾಗೂ ಬುದ್ಧಿವಂತ ಮತದಾರರೇ ಗಣನೀಯ ಸಂಖ್ಯೆಯಲ್ಲಿದ್ದಾರೆಂಬ ಹೆಗ್ಗಳಿಕೆಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈಗಷ್ಟೇ ಚುನಾವಣಾ ಕಣ ಕಾವೇರುತ್ತಿದೆ.

Advertisement

ಸತತ ಆರು ಬಾರಿ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿದ್ದಾಗಲೇ ಅನಂತ ಕುಮಾರ್‌ ಅವರು ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ರಾಜಕೀಯ ಲೆಕ್ಕಾಚಾರಗಳ ಜತೆಗೆ ಅಭಿವೃದ್ಧಿ  ಕಾರ್ಯಗಳ ಮೌಲ್ಯಮಾಪನವೂ ಶುರುವಾಗಿದೆ. ಅಭಿವೃದ್ಧಿ  ಹೊಂದಿದ ಪ್ರದೇಶಗಳೇ ಪ್ರಧಾನವಾಗಿರುವ ಹಾಗೂ ಸಂಪೂರ್ಣ ನಗರ ಪ್ರದೇಶವನ್ನೇ ಹೊಂದಿರುವ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳು ತಕ್ಕಮ ಟ್ಟಿಗಿವೆ. ಆದರೆ ಹೆಚ್ಚುತ್ತಿರುವ ಜನ, ವಾಹನ ಸಂಖ್ಯೆಗೆ ಪೂರಕವಾಗಿ ಸುಧಾರಿತ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡುತ್ತಿಲ್ಲವೆಂಬ ಬೇಸರ ಕ್ಷೇತ್ರದ ಜನತೆಯಲ್ಲಿದೆ. 

ಬೆಳವಣಿಗೆಗೆ ತಕ್ಕಂತೆ ಅಭಿವೃದ್ಧಿ ಇಲ್ಲ: ಕನಿಷ್ಠ ಮೂಲ ಸೌಕರ್ಯ, ಉದ್ಯಾನ, ಮೈದಾನ, ನಾಗರಿಕ ಸೇವಾ ಸಂಸ್ಥೆಗಳು ತಕ್ಕ ಮಟ್ಟಿಗೆ ಇರುವುದರಿಂದ ದಕ್ಷಿಣ ಭಾಗದಲ್ಲಿ ನೆಲೆಯೂರುವವರ ಸಂಖ್ಯೆ ಹೆಚ್ಚುತ್ತಿದೆ. ಅಪಾರ್ಟ್‌ ಮೆಂಟ್‌ಗಳು ದೊಡ್ಡ ಸಂಖ್ಯೆಯಲ್ಲಿ ತಲೆಯೆತ್ತುತ್ತಿದ್ದು, ಜನಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ಕುಡಿಯುವ ನೀರು,ಒಳಚರಂಡಿ ವ್ಯವಸ್ಥೆ, ರಸ್ತೆ ವಿಸ್ತರಣೆ, ಸಿಗ್ನಲ್‌ ಮುಕ್ತ ಸಂಚಾರ ವ್ಯವಸ್ಥೆ, ಸಂಚಾರ ದಟ್ಟಣೆ ನಿವಾರಣಾ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂಬ ಭಾವನೆ ಜನರಲ್ಲಿದೆ. ಬೆಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಗೆ ಎಂಟು ವಿಧಾನಸಭೆ ಕ್ಷೇತ್ರಗಳು ಬರಲಿದ್ದು ಐದರಲ್ಲಿ ಬಿಜೆಪಿ ಹಾಗೂ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ.

ಇದರಿಂದಾಗಿ ಕ್ಷೇತ್ರದ ಪ್ರದೇಶಗಳ ಅಭಿವೃದ್ಧಿಯಲ್ಲಿ ವೈವಿಧ್ಯದ ಜತೆಗೆ ವೈರುಧ್ಯವಿರುವುದು ಕಾಣುತ್ತದೆ.ಹೆಗ್ಗುರುತು ಇಲ್ಲ: ರಾಜ್ಯ ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿರುವ ಅನಂತ ಕುಮಾರ್‌ ಅವರಿಗೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಮಹತ್ವದ ಕೊಡುಗೆ ಮೂಲಕ ಹೆಗ್ಗುರುತು ಮೂಡಿಸಲು ಅವಕಾಶವಿತ್ತು. ಮುಖ್ಯವಾಗಿ ರಸಗೊಬ್ಬರ ಸಚಿವರಾಗಿದ್ದರಿಂದ ಬೆಂಗಳೂರಿನ ತ್ಯಾಜ್ಯ ಸಮಸ್ಯೆ ನಿವಾರಣೆಗಾಗಿ ಹಸಿ ಕಸ ಸಂಸ್ಕರಿಸಿ ಸಾವಯವ ಗೊಬ್ಬರವನ್ನಾಗಿ ರೂಪಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಇನ್ನಷ್ಟು ಗಮನ ನೀಡಬಹುದಿತ್ತು ಎಂಬ ಮಾತುಗಳು ಇವೆ.

ವಾರಾಂತ್ಯದ ಸಂಸದರು!: ಸತತ ಆರನೇ ಬಾರಿ ಸಂಸದರಾಗಿ ಆಯ್ಕೆಯಾದ ಅನಂತ ಕುಮಾರ್‌ ಕಳೆದ ಬಾರಿ ಕೇಂದ್ರ ಕಾನೂನು ಮತ್ತು ಸಂಸದೀಯ, ರಾಸಾಯನಿಕ ಹಾಗೂ ರಸಗೊಬ್ಬರ ಸಚಿವರಾಗಿದ್ದರು. ಜನರಿಗೆ ನೇರವಾಗಿ ಸಂಬಂಧಪಟ್ಟ ಖಾತೆ ನಿರ್ವಹಿಸುತ್ತಿದ್ದರಿಂದ ಅವರಿಗೆ ರಾಷ್ಟ್ರಾದ್ಯಂತ ನಿರಂತರ ಪ್ರವಾಸ ಅನಿವಾರ್ಯವಾಗಿತ್ತು. ಹಾಗಾಗಿ ವಾರಾಂತ್ಯದ ಶನಿವಾರ,
ಭಾನುವಾರ ಬೆಂಗಳೂರಿನಲ್ಲಿದ್ದು ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಹೀಗಾಗಿ ಅವರನ್ನು ವಾರಾಂತ್ಯದ
ಸಂಸದರೆಂದು ಕರೆಯುವ ಜತೆಗೆ ಜನರಿಗೆ ಸಿಗುತ್ತಿರಲಿಲ್ಲ ಎಂಬ ಆರೋಪವಿತ್ತು.

Advertisement

ರಾಜಧಾನಿಗೆ ಕೊಡುಗೆ: ಅನಂತಕುಮಾರ್‌ ಕೇಂದ್ರ ಸಚಿವರೂ ಆಗಿದ್ದರಿಂದ ಬೆಂಗಳೂರಿನ ಅಭಿವೃದ್ಧಿಗೆ ತಮ್ಮ ಇಲಾಖೆಯಿಂದ ಹಲವು ಕೊಡುಗೆ ಸಹ ನೀಡಿದ್ದಾರೆ. ಸೆಂಟರ್‌ ಇನ್‌ಸ್ಟಿಟ್ಯೂಟ್‌ ಆಫ್ ಪ್ಲಾಸ್ಟಿಕ್ಸ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ(ಸಿಐಪಿಇಟಿ) ಸಂಸ್ಥೆ ಸ್ಥಾಪನೆಗೆ ಶಂಕುಸ್ಥಾಪನೆ, ಪ್ಲಾಸ್ಟಿಕ್‌ ಮರುಬಳಕೆ ಘಟಕ ಕಾರ್ಯಾರಂಭ. ಹಸಿ ಕಸ ಸಂಸ್ಕರಿಸಿ ಕಾಂಪೋಸ್ಟ್‌ ತಯಾರಿಸಿ ಸಾರ್ವಜನಿಕ ಉದ್ದಿಮೆ ಕ್ಷೇತ್ರದ ರಸಗೊಬ್ಬರ ಸಂಸ್ಥೆಗಳ ಮೂಲಕ ಮಾರಾಟ ವ್ಯವಸ್ಥೆಗೆ ಒಪ್ಪಂದ,ಕರ್ನಾಟಕ ಆ್ಯಂಟಿಬಯೋಟಿಕ್ಸ್‌ ಮತ್ತು ಫಾರ್ಮಾಸುÂಟಿಕಲ್ಸ್‌ನ ಕಾರ್ಯಕ್ಷಮತೆ ಹೆಚ್ಚಿಸಲು ಒತ್ತು, ಸಬ್‌ ಅರ್ಬನ್‌ ರೈಲು ಯೋಜನೆಗೂ ವಿಶೇಷ ಕಾಳಜಿ ವಹಿಸಿದ್ದರು. ಪೆರಿಫೆರಲ್‌ ರಿಂಗ್‌ ರಸ್ತೆ (ಪಿಆರ್‌ಆರ್‌) ಯೋಜನೆಗೆ ತಗಲುವ ವೆಚ್ಚದಲ್ಲಿ ಶೇ.50ರಷ್ಟನ್ನು ಕೇಂದ್ರ ಸರ್ಕಾರ ಭರಿಸುವ ಸಂಬಂಧ 2016ರ ಸೆಪ್ಟೆಂಬರ್‌ನಲ್ಲಿ ಕೈಗೊಂಡ ನಿರ್ಣಯದಲ್ಲೂ ಅನಂತ ಕುಮಾರ್‌ ಮುಖ್ಯ ಭೂಮಿಕೆಯಲ್ಲಿದ್ದರು.

ಶೇ.84ರಷ್ಟು ಅನುದಾನ ಬಳಕೆ
ಸಂಸದರ ಪ್ರದೇಶಾಭಿವೃದ್ಧಿ  ನಿಧಿಯಡಿ ನಾಲ್ಕು ವರ್ಷಗಳಿಗೆ 17 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಕೇಂದ್ರವು 12 ಕೋಟಿ ರೂ. ಬಿಡುಗಡೆ ಮಾಡಿದ್ದು, ಇದರಲ್ಲಿ ಶೇ. 84ರಷ್ಟು ಹಣ ಬಳಕೆಯಾಗಿದೆ. ಉಳಿದ ಪ್ರಸ್ತಾಪಿತ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಿದ್ಧತೆ ನಡೆದಿದ್ದ ಹೊತ್ತಿನಲ್ಲೇ ಅನಂತ ಕುಮಾರ್‌ ಅವರು ಅಕಾಲಿಕ ನಿಧನರಾದರು.

ನಿರೀಕ್ಷೆಯಷ್ಟು ಸುಧಾರಣೆ ಆಗಿಲ್ಲ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಸಂಪೂರ್ಣ ನಗರ ಪ್ರದೇಶವನ್ನೇ ಹೊಂದಿರುವುದರಿಂದ ಅನಂತ ಕುಮಾರ್‌ ಅವರು
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಗೀಹಳ್ಳಿಯನ್ನು ಸಂಸದರ ಆದರ್ಶ ಗ್ರಾಮಯೋಜನೆಯಡಿ ದತ್ತು ತೆಗೆದುಕೊಂಡಿದ್ದರು. ರಾಗೀಹಳ್ಳಿ ಬಯಲು ಬಹಿರ್ದೆಸೆ ಮುಕ್ತವಾಗಿರುವ ಜತೆಗೆ ಎಲ್ಲ ಮನೆಗಳಿಗೂ ವಿದ್ಯುತ್‌ ಸಂಪರ್ಕ
ಕಲ್ಪಿಸಲಾಗಿದೆ. ಮನೆಗಳಿಗೆ ಕುಡಿಯುವ ನೀರಿನ ಕೊಳವೆ ಅಳವಡಿಕೆ ಪ್ರಮಾಣ ಶೇ.65ರಿಂದ ಶೇ.70ಕ್ಕೆ ಹೆಚ್ಚಿದೆ. ಗ್ರಾಪಂಗೆ ಬ್ರಾಡ್‌ಬ್ಯಾಂಡ್‌ ಸೇವೆ ಹಾಗೂ ಇ-ಪಂಚಾಯತ್‌ ಸೇವೆ ಕಲ್ಪಿಸಲಾಗಿದೆ. ಸರ್ಕಾರಿ ಭೂಮಿ ಇಲ್ಲದ ಕಾರಣ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಆ ಹಿನ್ನೆಲೆಯಲ್ಲಿ ಒಂದೆಡೆ ಒಂದು ಎಕರೆ ಹಾಗೂ ಮತ್ತೂಂದೆಡೆ 15 ಎಕರೆ ಖರಾಬು ಭೂಮಿ ಪಡೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಆದರೆ, ಆದರ್ಶ ಗ್ರಾಮ ಯೋಜನೆಯಡಿ ನಿರೀಕ್ಷಿದಷ್ಟು ಪ್ರಮಾಣದಲ್ಲಿ ಸೌಲಭ್ಯ ಸಿಕ್ಕಿಲ್ಲ. ಅನಂತ ಕುಮಾರ್‌ ಅವರು ಕೇಂದ್ರ ಸಚಿವರಾಗಿದ್ದ ಕಾರಣ ಸಾಕಷ್ಟು ಅಭಿವೃದ್ಧಿಕಾರ್ಯಗಳಾಗುವ ನಿರೀಕ್ಷೆಯಿತ್ತು. ಅದಕ್ಕೆ ಪೂರಕ ಪ್ರಸ್ತಾಪಗಳನ್ನು ರೂಪಿಸಿದ್ದರೂ ನಿರೀಕ್ಷೆಯಷ್ಟು ಸುಧಾರಣೆ ಕಂಡಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next