ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಗುರುವಾರ (ನ.28 ರಂದು) ಹೈಕೋರ್ಟ್ನ ಏಕಸದಸ್ಯ ಪೀಠದಲ್ಲಿ ನಡೆದಿದೆ.
ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ಹಿಂದಿನಂತೆಯೇ ಈ ಸಲಿಯೂ ಪ್ರಬಲ ಅಂಶವನ್ನು ಮುಂದಿಟ್ಟುಕೊಂಡು ವಾದವನ್ನು ಮುಂದುವರೆಸಿದ್ದಾರೆ.
ರೇಣುಕಾಸ್ವಾಮಿಯನ್ನು ಬಲವಂತವಾಗಿ ಕಿಡ್ನ್ಯಾಪ್ ಮಾಡಿಲ್ಲ. ಕೊಲೆ ಮಾಡುವ ಉದ್ದೇಶದಿಂದ ಆತನ ಅಪಹರಣ ನಡೆದಿಲ್ಲ. ಆತನೇ ಬಾರ್ವವೊಂದಕ್ಕೆ ಹಣ ಪಾವತಿಸಿದ್ದಾನೆ. ಹಾಗಾಗಿ ಇದನ್ನು ಒತ್ತಾಯಪೂರ್ವಕವಾಗಿ ನಡೆದ ಅಪಹರಣವೆಂದು ಹೇಳಲ್ಲು ಆಗುವುದಿಲ್ಲ. ದರ್ಶನ್ ಬಟ್ಟೆಯ ಮೇಲೆ ರಕ್ತದ ಕಲೆ ಇದೆ ಎಂದಿದ್ದಾರೆ. ಆದರೆ ಅದನ್ನು ಸರ್ಫ್ನಲ್ಲಿ ಹಾಕಿ ಕುಕ್ಕಿ ಕುಕ್ಕಿ ಒಗೆದಿದ್ದಾರೆ. ಹೀಗೆ ಮಾಡಿದರೆ ರಕ್ತದ ಕಲೆ ಇರುವುದು ಹೇಗೆ? ಎನ್ನುವ ಕೆಲ ಪ್ರಬಲ ಅಂಶಗಳನ್ನಿಟ್ಟುಕೊಂಡು ಈ ಹಿಂದಿನ ವಾದದಲ್ಲಿ ನಾಗೇಶ್ ಉಲ್ಲೇಖಿಸಿದ್ದರು.
ಗುರುವಾರ ಕೂಡ ಇದೇ ರೀತಿಯ ಅಂಶಗಳೊಂದಿಗೆ ವಾದವನ್ನು ಮುಂದುವರೆಸಿದ್ದಾರೆ.
ಪ್ರಾಸಿಕ್ಯೂಷನ್ನವರು ನರೇಂದ್ರ ಸಿಂಗ್, ಮಲ್ಲಿಕಾರ್ಜುನ, ವಿಜಯ್ ಕುಮಾರ್ ಸೇರಿ 6 ಜನರನ್ನು ಪ್ರತ್ಯಕ್ಷದರ್ಶಿಗಳೆಂದು ಹೆಸರಿಸಿದ್ದಾರೆ. ನರೇಂದ್ರ ಸಿಂಗ್ ನ ಸಿಆರ್ ಪಿಸಿ 164ರ ಅಡಿ ಹೇಳಿಕೆ ದಾಖಲಿಸಿದ್ದಾರೆ. ಈತ ಹಲ್ಲೆಯ ಬಗ್ಗೆ ಏನನ್ನೂ ಹೇಳಿಲ್ಲ. 164ರ ಹೇಳಿಕೆಗೆ 161ರ ಹೇಳಿಕೆಗಿಂತ ಹೆಚ್ಚಿನ ಮೌಲ್ಯವಿದೆ.
ಪ್ರತ್ಯಕ್ಷದರ್ಶಿ ಮಧುಸೂದನ್ ಹೇಳಿಕೆಯನ್ನ ಇಲ್ಲಿ ಉಲ್ಲೇಖಿಸಿದ್ದಾರೆ. ಕೆಲವು ಕಾರು ಬರುತ್ತವೆ. ಅದರಲ್ಲಿ ದರ್ಶನ್ ಸರ್ ಇರ್ತಾರೆ. ಅಲ್ಲಿಗೆ ಹೋಗ್ಬೇಡಿ ಎಂದಿದ್ದೆ. ನಂತರ ಸಂಜೆ ಮನೆಗೆ ಹೋಗಿದ್ದೆ ಎಂದು ಮಧುಸೂದನ್ ಹೇಳಿಕೆ ನೀಡಿದ್ದಾರೆ. ಕೊಲೆಯಾದ ಬಗ್ಗೆ 10ನೇ ತಾರೀಕು ಮೊಬೈಲ್ ನಲ್ಲಿ ನೋಡಿಯೇ ತಿಳಿದುಕೊಂಡೆ ಎಂದು ಅವರು ಹೇಳಿದ್ದಾರೆ ಎಂದು ನಾಗೇಶ್ ವಾದದಲ್ಲಿ ಉಲ್ಲೇಖಿಸಿದ್ದಾರೆ.
ಇಬ್ಬರು ಪ್ರಮುಖ ಸಾಕ್ಷಿಗಳಾದ ಕಿರಣ್, ಪುನೀತ್ ಮೇಲೆ ಪ್ರಾಸಿಕ್ಯೂಷನ್ ಅವಲಂಬಿತವಾಗಿದೆ. ಎ13 ದೀಪಕ್ ಈ ಶೆಡ್ ಬಳಕೆ ಮಾಡುತ್ತಿದ್ದ. ಈತನ ಶೆಡ್ನಲ್ಲಿ ಕಿರಣ್, ಪುನೀತ್ ಕೆಲಸ ಮಾಡುತ್ತಿದ್ದರು. ಇವರನ್ನು ಆರೋಪಿಗಳ ಸಹಚರರೆಂದು ಭಾವಿಸಬೇಕಾಗುತ್ತದೆ. ದೀಪಕ್ಗೆ ಈಗಾಗಲೇ ಜಾಮೀನು ನೀಡಿದೆ. ಈತನೂ ಹಲ್ಲೆ ಮಾಡಿದವರಲ್ಲಿ ಒಬ್ಬ. ಜೂ.20,21 ರಂದು ಪುನೀತ್ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಕೃತ್ಯ ನಡೆದ ಬಳಿಕ ಆತ ಬೆಂಗಳೂರಿನಲ್ಲೇ ಇದ್ದ. ಆದರೆ 12 ದಿನದ ಬಳಿಕ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. 15 ತಾರೀಖಿನಂದೇ ಸಾಕ್ಷಿಯ ಬಗ್ಗೆ ತನಿಖಾಧಿಕಾರಿಗಳಿಗೆ ಅರಿವಿತ್ತು. ಈ ವಿಳಂಬಕ್ಕೆ ಪೊಲೀಸರು ಕಾರಣವನ್ನು ನೀಡಬೇಕಾಗುತ್ತದೆ ಎಂದು ವಾದಿಸಿದ್ದಾರೆ.
ಪ್ರತ್ಯಕ್ಷ ಸಾಕ್ಷಿಯ ಹೇಳಿಕೆಯನ್ನು ನಾಗೇಶ್ ಓದಿದ್ದಾರೆ. ವಿನಯ್ ಫೋನ್ ಮಾಡಿದಾಗ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತೇನೆ ಎಂದಿದ್ದೆ. ದರ್ಶನ್, ಪವಿತ್ರಾ ಗೌಡ ಬಂದಿರುವ ವಿಚಾರವನ್ನು ಹೇಳದಂತೆ ಹೇಳಿದ್ದರು. ಜೂ.10 ಕ್ಕೆ ಶೆಡ್ಗೆ ಹೋಗಿದ್ದೆ. ವಿನಯ್ ನನ್ನ ಮೊಬೈಲ್ನಲ್ಲಿ ಫೋಟೋ, ವಿಡಿಯೋ ಡಿಲೀಟ್ ಮಾಡಿದ್ದಾರೆ ಎಂದು ಆರೋಪಿಯ ಹೇಳಿಕೆಯನ್ನು ಓದಿದ್ದಾರೆ.
ಹಳೆಯ ಸಿಮ್ ಹೊಸ ಫೋನಿಗೆ ಹಾಕಿದೆ. ಕನಕಪುರದಲ್ಲಿ ಫೋಟೋ ತೆಗೆದುಕೊಂಡೆ ಎಂದು ಹೇಳಿದ್ದಾನೆ. ಹೆದರಿಕೆ ಆಯಿತು ಅದಕ್ಕೋಸ್ಕರ ಜೂ.11 ರಿಂದ 19ರವರೆಗೆ ಊರೂರು ಸುತ್ತಿದ್ದೆ ಎಂದಿದ್ದಾನೆ. ಆದರೆ ಸಾಕ್ಷಿಯ ಮೊದಲ ಹೇಳಿಕೆಯಲ್ಲಿ ಆತನ ಪ್ರಯಾಣದ ಉಲ್ಲೇಖವಿಲ್ಲ. ಸಾಕ್ಷಿಯ ಹೇಳಿಕೆಯನ್ನು ಪೊಲೀಸರು ತಿರುಚಿದ್ದಾರೆ ಎಂದು ವಾದ ಮಂಡಿಸಿದ್ದಾರೆ.
ಕೊಲ್ಲುವ ಉದ್ದೇಶ ಇದ್ದರೆ ಊಟ ತಂದು ಕೊಡಿ, ನೀರು ಕೊಡಿ, ಪೊಲೀಸರ ಮುಂದೆ ಹಾಜರುಪಡಿಸಿ ಎಂದು ದರ್ಶನ್ ಹೇಳಿರುತ್ತಿದ್ದರೇ? ಪವಿತ್ರಾ ಗೌಡ ಅವರ ಚಪ್ಪಲಿಯಲ್ಲಿ ದರ್ಶನ್ ರೇಣುಕಾಸ್ವಾಮಿಗೆ ಹೊಡೆದಿದ್ದಾರೆ. ನಾಗರಾಜ್ ತಂದ ಹಗ್ಗದಿಂದ ಬೆನ್ನಿಗೆ ಹೊಡೆದಿದ್ದಾರೆ. ಆದರೆ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯಲ್ಲಿ ವೈರುಧ್ಯಗಳಿವೆ. ಮರ್ಮಾಂಗಕ್ಕೆ ಹೊಡೆದಿದ್ದಾರೆ ಎನ್ನುವ ಬಗ್ಗೆ ಮತ್ತೊಂದು ಸಾಕ್ಷಿಯಲ್ಲಿ ಉಲ್ಲೇಖವಿಲ್ಲ ಎಂದು ವಾದದಲ್ಲಿ ಹೇಳಿದ್ದಾರೆ.
161 ಹೇಳಿಕೆ ಪಡೆದಾಗ ಕೇಸ್ ಡೈರಿಯಲ್ಲಿ ಅದನ್ನು ಬರೆದಿಟ್ಟು ಅದರ ಪ್ರತಿಯನ್ನು ಮ್ಯಾಜಿಸ್ಟೇಟ್ಗೆ ನೀಡಬೇಕು. ಆದರೆ ಈ ಪ್ರಕ್ರಿಯನ್ನು ತನಿಖಾಧಿಕಾರಿ ಮಾಡಿಲ್ಲ. ಮೊದಲ ರಿಮಾಂಡ್ ಅರ್ಜಿಯಲ್ಲಿ ಸಾಕ್ಷಿಗಳ ಹೇಳಿಕೆ ಉಲ್ಲೇಖವಿಲ್ಲ. ಸಾಕ್ಷಿಗಳ ಹೆಸರು, ವಿಳಾಸ, ಹೇಳಿಕೆಯ ವಿವರವನ್ನು ರಿಮಾಂಡ್ ಅರ್ಜಿಯಲ್ಲಿ ನೀಡಬೇಕು. ಆದರೆ ಈ ಪ್ರಕ್ರಿಯೆನ್ನು ತನಿಖಾಧಿಕಾರಿ ಪಾಲಿಸಿಲ್ಲವೆಂದು ತನಿಖೆಯ ಲೋಪವನ್ನು ಎತ್ತಿ ಹಿಡಿದಿದ್ದಾರೆ.
ಸಾಕ್ಷಿಗಳ ಹೇಳಿಕೆಯನ್ನು ಪಡೆಯಲು 3 ದಿನ ವಿಳಂಬವಾದರೂ ಜಾಮೀನು ಸಿಕ್ಕಿದೆ ಎಂದು ಸುಪ್ರೀಂ ತೀರ್ಪನ್ನು ಉಲ್ಲೇಖಿಸಿ ನಾಗೇಶ್ ತಮ್ಮ ವಾದವನ್ನು ಅಂತ್ಯಗೊಳಿಸಿದ್ದಾರೆ.
ಈ ವೇಳೆ ಜಡ್ಜ್ ವಿಶ್ವಜಿತ್ ದರ್ಶನ್ ಆರೋಗ್ಯ ಸ್ಥಿತಿಯ ಬಗ್ಗೆ ಕೇಳಿದ್ದಾರೆ. ಎಂಆರ್ ಐ ಸ್ಕ್ಯಾನ್ ಆಗಿದೆ. ಬಿಪಿ ವ್ಯತ್ಯಾಸವಾಗುತ್ತಿದೆ. ಅದು ಸರಿಯಾದ ಬಳಿಕವಷ್ಟೇ ಮುಂದಿನ ಚಿಕಿತ್ಸೆ. ಈ ಕಾರಣದಿಂದ ಸರ್ಜರಿ ವಿಳಂಬವಾಗುತ್ತಿದೆ ಎಂದು ನಾಗೇಶ್ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ.
ದರ್ಶನ್ ಮ್ಯಾನೇಜರ್ ನಾಗರಾಜು ಪರ ವಕೀಲರು ವಾದ ಮಂಡಸಿದ್ದಾರೆ. ವಿಚಾರಣೆಯನ್ನು ಶುಕ್ರವಾರ(ನ.29) ಕ್ಕೆ ನ್ಯಾಯಾಧೀಶರು ಮುಂದೂಡಿದ್ದಾರೆ.
ದರ್ಶನ್ ಅವರಿಗೆ ಸದ್ಯ ಅನಾರೋಗ್ಯ ಕಾರಣದಿಂದ ಮಧ್ಯಂತರ ಜಾಮೀನು ನೀಡಲಾಗಿದೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಬೆನ್ನುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಜರಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಇದುವರೆಗೆ ಸರ್ಜರಿ ಮಾಡಿಸಿಕೊಂಡಿಲ್ಲ.