Advertisement

Mangaluru: ಕರಾವಳಿಯಲ್ಲಿ ಈ ಬಾರಿ ವಾಡಿಕೆಯಂತೆ ಚಳಿ

12:32 AM Nov 27, 2024 | Team Udayavani |

ಮಂಗಳೂರು: ಕರಾವಳಿ ಭಾಗದಲ್ಲಿ ಈ ಬಾರಿ ಮುಂಗಾರು ಹಾಗೂ ಹಿಂಗಾರಿನಂತೆ ಚಳಿಗಾಲವೂ ವಾಡಿಕೆಯಂತೆ ಆರಂಭವಾಗುವ ನಿರೀಕ್ಷೆ ಇದೆ. ಕೆಲವೆಡೆ ಸಣ್ಣಗೆ ಚಳಿ ಆರಂಭವಾಗಿದೆ.

Advertisement

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಡಿಸೆಂಬರ್‌ ಎರಡನೇ ವಾರದಿಂದ ಚಳಿ ಆರಂಭವಾಗುತ್ತದೆ. ಸದ್ಯದ ಮುನ್ಸೂಚನೆ ಪ್ರಕಾರ ಚಳಿಗೆ ಪೂರಕವಾದ ವಾತಾವರಣ ಇದ್ದು, ಒಂದು ವೇಳೆ ಚೀನ, ರಷ್ಯಾದಲ್ಲಿ ಹವಾಮಾನ ವೈಪರೀತ್ಯವಾದರೆ ಚಳಿಗಾಲದ ಅವಧಿಯಲ್ಲಿ ಬದಲಾವಣೆ ಉಂಟಾಗಬಹುದು. ಸಾಮಾನ್ಯವಾಗಿ ಚೀನ, ರಷ್ಯಾದಲ್ಲಿ ಡಿಸೆಂಬರ್‌ ಮೊದಲ ವಾರ ಚಳಿಗಾಲ ಆರಂಭಗೊಳ್ಳುತ್ತದೆ. ಬಳಿಕ ಆ ಭಾಗದಿಂದ ಇಲ್ಲಿನ ಕರಾವಳಿ ತೀರಕ್ಕೆ ಚಳಿಗಾಳಿ ಬೀಸಬೇಕು. ಅದರ ಪ್ರಭಾವದ ಆಧಾರದಲ್ಲಿ ವಾತಾವರಣದಲ್ಲಿ ಗರಿಷ್ಠ ತಾಪಮಾನ ಇನ್ನಷ್ಟು ಇಳಿಕೆಯಾಗಿ ಚಳಿಯ ಅನುಭವ ಇನ್ನಷ್ಟು ತೀವ್ರತೆ ಪಡೆಯುತ್ತದೆ.

ಕರಾವಳಿ ಭಾಗದಲ್ಲಿ ಹಿಂಗಾರು ಅವಧಿಯ ಮಳೆಯ ಪ್ರಮಾಣದಲ್ಲಿ ಭಾರೀ ಏರಿಳಿತ ಉಂಟಾಗಿದ್ದರೆ ಅದರ ಪರಿಣಾಮ ಚಳಿಗಾಲದ ಅವಧಿ ಮೇಲೂ ಬೀರುತ್ತಿತ್ತು. ಆದರೆ, ದ.ಕ., ಉಡುಪಿ ಭಾಗದಲ್ಲಿ ಈ ಬಾರಿ ವಾಡಿಕೆಯ ಮಳೆ ಸುರಿದಿದೆ. ಹಿಂಗಾರು ಪೂರ್ಣಗೊಳ್ಳಲು ಇನ್ನೂ ಕೆಲವು ವಾರ ಇರುವ ಕಾರಣ ಮುಂದಿನ ದಿನಗಳಲ್ಲಿ ವಾತಾವರಣದಲ್ಲಿ ಉಷ್ಣಾಂಶದಲ್ಲಿ ಭಾರೀ ಏರಿಕೆ ಉಂಟಾಗದು.

ವಾಡಿಕೆ ಪ್ರಕಾರ ಡಿಸೆಂಬರ್‌ ಮಧ್ಯ ಭಾಗದಲ್ಲಿ ಆರಂಭವಾಗುವ ಚಳಿ ಜನವರಿ ಮೂರನೇ ವಾರದವರೆಗೆ ಮುಂದುವರಿಯಬಹುದು ಎನ್ನುವುದು ಹವಾಮಾನ ಇಲಾಖೆ ತಜ್ಞರ ಅಭಿಪ್ರಾಯ.

ಗರಿಷ್ಠ ಉಷ್ಣಾಂಶ ತಗ್ಗುವ ನಿರೀಕ್ಷೆ
ಮಂಗಳೂರು ಸಹಿತ ಜಿಲ್ಲೆಯ ಹಲವು ಕಡೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಳಿತ ಕಾಣುತ್ತಿದೆ. ಹಿಂಗಾರು ಮಳೆಯ ಕಣ್ಣಾಮುಚ್ಚಾಲೆ ಪರಿಣಾಮ ಕೆಲವು ದಿನ ವಾಡಿಕೆಗಿಂತ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 2ರಿಂದ 3 ಡಿ.ಸೆ. ಅಧಿಕವಾಗಿರುತ್ತದೆ. ಹಿಂಗಾರು ಅವಧಿ ಪೂರ್ಣಗೊಳ್ಳಲು ಇನ್ನೂ ಸುಮಾರು ಒಂದೂವರೆ ತಿಂಗಳು ಇದ್ದು, ಮಳೆಯ ನಿರೀಕ್ಷೆ ಇದೆ. ಇದರಿಂದ ತಾಪಮಾನ ತುಸು ಇಳಿಕೆಯಾಗುವ ಸಾಧ್ಯತೆ ಇದೆ. ಇದು ಚಳಿಗಾಲ ಆರಂಭಕ್ಕೆ ಪೂರಕವಾಗಲಿದೆ.

Advertisement

ಕಳೆದ ವರ್ಷ ಏರುಪೇರು
ಕಳೆದ ವರ್ಷ ಹಿಂಗಾರು ಅವಧಿಯಲ್ಲಾದ ಏರುಪೇರು ಚಳಿಗಾಲದ ಮೇಲೂ ಪರಿಣಾಮ ಬೀರಿತ್ತು. ಹಿಂಗಾರು ಅವಧಿ ಕಡಿಮೆಯಾದ ಪರಿಣಾಮ ಭೂಮಿಯ ಮೇಲ್ಪದರದಲ್ಲಿ ನೀರಿನ ಅಂಶ ಕ್ಷೀಣಿಸಿತ್ತು. ಇದರಿಂದಾಗಿ ವಾತಾವರಣದ ಉಷ್ಣಾಂಶ ಕನಿಷ್ಠ ಮಟ್ಟಕ್ಕೆ ತಲುಪಿತ್ತು. ಚಳಿ ಪ್ರಮಾಣ ಕಡಿಮೆಯಾಗಿತ್ತು. ಅವಧಿಗೂ ಮುನ್ನ ಸೆಕೆ ಆರಂಭಗೊಂಡು ದೀರ್ಘ‌ ಬೇಸಗೆ ಕಾಲ ಇತ್ತು.

ಕರಾವಳಿ ಭಾಗದಲ್ಲಿ ಈ ಬಾರಿ ಹಿಂಗಾರು ನಿರೀಕ್ಷಿತ ವಾಡಿಕೆಯಂತೆ ಸುರಿದಿದ್ದು, ಇದು ಚಳಿಗಾಲ ಆರಂಭಕ್ಕೆ ಪೂರಕವಾಗುವ ಸಾಧ್ಯತೆ ಇದೆ. ಇದರಿಂದಾಗಿ ಡಿಸೆಂಬರ್‌ ಎರಡು ಅಥವಾ ಮೂರನೇ ವಾರದಲ್ಲಿ ಚಳಿ ಆರಂಭಗೊಳ್ಳಲಿದೆ. ರಷ್ಯಾ, ಚೀನ ಕಡೆಗಳಲ್ಲಿ ಚಳಿಗಾಲ ಆರಂಭವಾಗಿ ಅಲ್ಲಿಂದ ಬರುವ ಗಾಳಿಯ ಮೇಲೆ ಚಳಿಯ ತೀವ್ರತೆ ಅವಲಂಬಿತವಾಗಿರುತ್ತದೆ.
– ಡಾ| ರಾಜೇಗೌಡ,
ಹವಾಮಾನ ವಿಜ್ಞಾನಿ-ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next