Advertisement

Congress: ದ.ಕ.ದಲ್ಲಿ ಜನರ ಒಲವು ಕಾಂಗ್ರೆಸ್‌ ಪರ: ಹರೀಶ್‌ ಕುಮಾರ್‌

11:16 PM Nov 27, 2024 | Team Udayavani |

ಮಂಗಳೂರು: ವಿಧಾನಸಭೆಯ ಮೂರು ಕ್ಷೇತ್ರ ಹಾಗೂ ಗ್ರಾಮ ಪಂಚಾಯತ್‌ ಉಪಚುನಾವಣೆಯನ್ನು ಗಮನಿಸಿದಾಗ ಮತದಾರ ಕಾಂಗ್ರೆಸ್‌ ಪರ ಒಲವು ಹೊಂದಿರುವುದು ದೃಢವಾಗಿದೆ.

Advertisement

ದಕ್ಷಿಣ ಕನ್ನಡದಲ್ಲೂ ಬದಲಾವಣೆಯ ವಾತಾವರಣವಿದ್ದು, 30 ಗ್ರಾಪಂ ಕ್ಷೇತ್ರಗಳು ಮತ್ತು ಪುರಸಭೆಯ 1 ಕ್ಷೇತ್ರ ಸಹಿತ ಒಟ್ಟು 31 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ 24 ಕ್ಷೇತ್ರಗಳನ್ನು ಗೆದ್ದಿದೆ, ಬಿಜೆಪಿ 7ಕ್ಕೆ ಕುಸಿದಿದೆ.

ಜಿಲ್ಲೆಯ ಜನ ಕಾಂಗ್ರೆಸ್‌ನ ಅಭಿವೃದ್ಧಿಯ ರಾಜಕಾರಣಕ್ಕೆ ಬೆಂಬಲ ನೀಡಿರುವುದು ಸಾಬೀತಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಹೇಳಿದ್ದಾರೆ.

ಬುಧವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 31 ಕ್ಷೇತ್ರಗಳ ಪೈಕಿ ಚುನಾವಣೆಗೆ ಮೊದಲು 14ರಲ್ಲಿ ಕಾಂಗ್ರೆಸ್‌ ಬೆಂಬಲಿಗರು ಇದ್ದರೆ, ಬಿಜೆಪಿ ಸಂಖ್ಯೆ 17 ಇತ್ತು. ಕಳೆದ ವಿಧಾನಸಭೆ ಚುನಾವಣೆಗಿಂತ ಮುಂಚೆ ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂಬ ಬಿಜೆಪಿಯವರ ಅಪಪ್ರಚಾರವನ್ನು ಜನ ನಂಬಿದ್ದರು. ಈಗ ಗ್ಯಾರಂಟಿ ಯಶಸ್ವಿಯಾಗಿ ಅನುಷ್ಠಾನವಾಗಿರುವುದರಿಂದ ಜನ ಬಿಜೆಪಿಯ ಅಪಪ್ರಚಾರಗಳಿಗೆ ಸೊಪ್ಪು ಹಾಕಿಲ್ಲ.

ಮುಂದಿನ ವರ್ಷ ಮಂಗಳೂರು ಮಹಾನಗರ ಪಾಲಿಕೆ, ಜಿ.ಪಂ., ತಾ.ಪಂ. ಚುನಾವಣೆಗಳು ನಡೆಯಲಿದ್ದು, ಕಾಂಗ್ರೆಸ್‌ ಗೆದ್ದು ಅಧಿಕಾರದ ಗದ್ದುಗೆ ಏರುವುದು ನಿಶ್ಚಿತ. ಗ್ಯಾರಂಟಿ ಫಲಾನುಭವಿ ಮಹಿಳಾ ಮತದಾರರು ಕಾಂಗ್ರೆಸ್‌ ಜತೆಗಿದ್ದಾರೆ ಎಂದು ಹರೀಶ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸಂವಿಧಾನ ತಿದ್ದುಪಡಿ ಅರ್ಜಿ ವಜಾ ಸ್ವಾಗತಾರ್ಹ: ಸಂವಿಧಾನದಲ್ಲಿರುವ ಜಾತ್ಯತೀತ, ಸಮಾಜವಾದಿ, ಸಮಗ್ರತೆ ಪದಗಳನ್ನು ತೆಗೆದುಹಾಕುವಂತೆ ಬಿಜೆಪಿಯ ಸುಬ್ರಮಣಿಯನ್‌ ಸ್ವಾಮಿ, ವಿಷ್ಣು ಶಂಕರ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಈ ಪದಗಳನ್ನು ತೆಗೆಯಲಾಗದು ಎಂದು ಸುಪ್ರೀಂ ಕೋರ್ಟ್‌ ಅವರ ಅರ್ಜಿಯನ್ನೇ ವಜಾಗೊಳಿಸಿದೆ. ಈ ತೀರ್ಪನ್ನು ಕಾಂಗ್ರೆಸ್‌ ಸ್ವಾಗತಿಸುತ್ತದೆ ಎಂದರು.

ಪ್ರಮುಖರಾದ ಇಬ್ರಾಹಿಂ ಕೋಡಿಜಾಲ್‌, ಶಾಹುಲ್‌ ಹಮೀದ್‌, ಶುಭೋದಯ ಆಳ್ವ, ಸುಹಾನ್‌ ಆಳ್ವ, ವಿಕಾಸ್‌ ಶೆಟ್ಟಿ, ಜಿತೇಂದ್ರ ಸುವರ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next