ಶಿರಸಿ: ಅತಿ ಮಳೆಯ ಕಾರಣದಿಂದ ಈಗ ಮಳೆ ನಿಂತರೂ ಬೆಳೆ ಹಾನಿ ನಿಂತಿಲ್ಲ. ಅಲಕ್ಷ್ಯ ಮಾಡಿದರೆ ಮರ, ಬಳ್ಳಿಗಳೂ ಸಾಯುತ್ತವೆ. ಇಲ್ಲಿನ ತೋಟಗಾರಿಕಾ ಇಲಾಖೆ ಹಾರ್ಟಿ ಕ್ಲಿನಿಕ್‌ನ ತಜ್ಞ ವಿಜಯೇಂದ್ರ ಹೆಗಡೆ ಶಿಂಗನಮನೆ ರೈತರಿಗೆ ಎಚ್ಚರಿಕೆ ನೀಡಿ ಉಪಚಾರದ ಕ್ರಮ ಸೂಚಿಸಿದ್ದಾರೆ.
ಈ ವರ್ಷ ನಿರಂತರವಾಗಿ ಸುರಿದ ಮಳೆ, ನಮ್ಮ ಜಿಲ್ಲೆಯ ತೋಟಗಾರಿಕೆ ಬೆಳೆಗಳಿಗೆ ಸಾಕಷ್ಟು ಹಾನಿಯನ್ನು ಉಂಟು ಮಾಡಿದೆ. ಎಡ ಬಿಡದೇ ಸುರಿದ ಮಳೆಯಿಂದಾಗಿ, ರೈತರಿಗೆ ಸಕಾಲದಲ್ಲಿ ಔಷಧ ಸಿಂಪರಣೆ ಕೈಗೊಳ್ಳಲೂ ಸಾಧ್ಯವಾಗದೇ, ಕೊಳೆ ರೋಗ ಉಲ್ಭಣಿಸಿ ಹಾನಿ ಅನುಭವಿಸುವಂತಾಗಿದೆ. ಈಗ ಮಳೆ ಕಡಿಮೆಯಾಗುತ್ತಿದ್ದರೂ ಈ ಕೊಳೆ ರೋಗದ ಹಾನಿ ಇಲ್ಲಿಗೇ ಮುಗಿಯುವುದಿಲ್ಲ. ಇದು ಮುಂದುವರಿದು ಅಡಕೆ ಮರ ಅಥವಾ ಮೆಣಸಿನ ಬಳ್ಳಿಯನ್ನೇ ಸಾಯಿಸಬಹುದು. ಆದ್ದರಿಂದ ರೈತರು ಅಲಕ್ಷ ಮಾಡದೇ ರೋಗ ಪೀಡಿತ ತೋಟಗಳಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿ ಮಾರ್ಗದರ್ಶನ ನೀಡಿದ್ದಾರೆ.
ಕಾಯಿ ಕೊಳೆ ರೋಗ ಪೀಡಿತ ಅಡಕೆ ಮರಗಳು ಚಂಡೆ ಕೊಳೆ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿದ್ದು, ಇದನ್ನು ತಡೆಯಲು ಕಾಯಿ ಕೊಳೆ ರೋಗ ಪೀಡಿತ ತೋಟದ ಅಡಕೆ ಮರದ ಗೊನೆಗಳಿಗೆ ಮತ್ತು ಕೆಳ ಭಾಗದ ಮೂರ್‍ನಾಲ್ಕು ಹೆಡಗಳಿಗೆ ಮೆಟಾಲಾಕ್ಸಿಲ್ ಎಂ.ಜೆಡ್. 2ಗ್ರಾಂ ಪ್ರತಿ ಲೀಟರ ನೀರಿಗೆ ಬೆರೆಸಿದ ದ್ರಾವಣ ಮಳೆ ಬಿಡುವಿದ್ದಾಗ ಮಾತ್ರ ಸಿಂಪಡಿಸಬೇಕು. ಕೊಳೆ ರೋಗದಿಂದ ಉದುರಿದ ಕಾಯಿಗಳನ್ನು ಮತ್ತು ಸತ್ತ ಅಡಕೆ ಸಿಂಗಾರಗಳನ್ನು ತೋಟದಿಂದ ಹೊರ ಹಾಕಬೇಕು.
ಅಡಕೆ ಗೊನೆಗಳಿಗೆ ಬೋರ್ಡೋ ದ್ರಾವಣ ಸಿಂಪಡಣೆಯಾಗಿ ಒಂದು ತಿಂಗಳಿಗಿಂತ ಹೆಚ್ಚಿನ ಅವಧಿಯಾಗಿದ್ದಲ್ಲಿ ಅವಶ್ಯಕತೆ ಇದ್ದಲ್ಲಿ ಮತ್ತೊಮ್ಮೆ ಶೇಕಡಾ ಒಂದರ ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು. ಕೊಕೋ ಗಿಡಗಳಲ್ಲಿ ಕೊಳೆ ರೋಗ ಪೀಡಿತ ಕಾಯಿಗಳನ್ನು ತೆಗೆದು ಮತ್ತು ಅವಶ್ಯಕತೆಗನುಗುಣವಾಗಿ ಪ್ರೂನಿಂಗ್ ಮಾಡಿ ಶೇಕಡಾ ಒಂದರ ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು. ಕಾಳು ಮೆಣಸಿನ ಬಳ್ಳಿಯು ಬೇರು ರೋಗದಿಂದ ಹಳದಿಯಾಗಲು ಪ್ರಾರಂಭವಾಗಿದ್ದಲ್ಲಿ, ನಿಯಂತ್ರಣಕ್ಕೆ ಬುಡಕ್ಕೆ ಮೆಟಾಲಾಕ್ಸಿಲ್ ಎಂ.ಜೆಡ್. 2ಗ್ರಾಂ. ಪ್ರತಿ ಲೀಟರ ನೀರಿಗೆ ಬೆರೆಸಿದ ದ್ರಾವಣವನ್ನು ಪ್ರತಿ ಬಳ್ಳಿಗೆ 2-3ಲೀಟರ್ ಹಾಕಬೇಕು. ಬಳ್ಳಿಯ ಎಲೆ, ಚಿಗುರು ಕೊಳೆ ನಿಯಂತ್ರಣಕ್ಕೆ ಅವಶ್ಯಕತೆಗನುಗುಣವಾಗಿ ಶೇ.1ರ ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು.
ಅಡಕೆಯಲ್ಲಿ ಬೇರು ಹುಳ ನಿಯಂತ್ರಣಕ್ಕೆ ಕ್ಲೋರೋಫೈರಿಫಾಸ್ ಕೀಟನಾಶಕವನ್ನು 4ಮಿ. ಲೀ.ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಪ್ರತಿ ಮರದ ಬುಡದ ಸುತ್ತಲೂ 3ಲೀಟರ್ ದ್ರಾವಣ ಹಾಕಬೇಕು. ಅಥವಾ ಇಪಿಎನ್ (ಸೋಲ್ಜರ) ಜೈವಿಕ ಕೀಟನಾಶಕವನ್ನು 5ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಪ್ರತಿ ಮರದ ಬುಡದ ಸುತ್ತಲೂ ಒಂದು ಲೀಟರ್ ದ್ರಾವಣ ಹಾಕಬೇಕು. ಬಾಳೆಯಲ್ಲಿ ಕಟ್ಟೇ ರೋಗ ಪೀಡಿತ ಗಿಡಗಳನ್ನು ಕಿತ್ತು ತೋಟದಿಂದ ಹೊರ ಹಾಕಬೇಕು. ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ 1ಗ್ರಾಂ ಕಾರ್ಬೆಂಡೆಂಜಿಂ ಅಥವಾ 0.5 ಮಿ.ಲೀ. ಪ್ರೊಪಿಕಾನಾಝೋಲ್ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಎಲೆಗಳಿಗೆ ಸಿಂಪಡಿಸಬೇಕು. ಶುಂಠಿಯ ಗಡ್ಡೆ ಕೊಳೆ ನಿಯಂತ್ರಣಕ್ಕಾಗಿ ಕಾಪರ ಆಕ್ಸಿಕ್ಲೋರೈಡ ಶೀಲೀಂದ್ರ ನಾಶಕವನ್ನು 3ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು. ರೋಗ ಪ್ರಾರಂಭವಾಗಿದ್ದಲ್ಲಿ ಮೆಟಾಲಾಕ್ಸಿಲ್ ಎಂ.ಜೆಡ್. 2ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣ ಹಾಕಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.