Advertisement

ಶಮನವಾಗಿಲ್ಲ ನ್ಯಾಯಾಂಗ ಬಿಕ್ಕಟ್ಟು

06:00 AM Jan 17, 2018 | Team Udayavani |

ಹೊಸದಿಲ್ಲಿ: ಸುಪ್ರೀಂಕೋರ್ಟ್‌ನಲ್ಲಿ ಎದ್ದಿರುವ ಅಸಮಾಧಾನದ ಹೊಗೆ ಇನ್ನೂ ಸಂಪೂರ್ಣವಾಗಿ ಆರಿಲ್ಲ. ಆದರೆ ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ಮಾತುಕತೆಗಳು ಮುಂದುವರಿದಿವೆ.

Advertisement

ಸಾರ್ವಜನಿಕವಾಗಿ ಅತೃಪ್ತಿ ಹೊರಹಾಕಿದ್ದ ಹಿರಿಯ ನ್ಯಾಯಮೂರ್ತಿಗಳಾದ ಜೆ.ಚಲಮೇಶ್ವರ್‌, ರಂಜನ್‌ ಗೊಗೋಯ್‌, ಮದನ್‌ ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್ರನ್ನು ಮಂಗಳವಾರ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜತೆಗೆ ಎಲ್ಲ ಬಿಕ್ಕಟ್ಟು ಶಮನವಾಗಿದೆ ಎಂದು ಸೋಮವಾರವಷ್ಟೇ ಹೇಳಿಕೊಂಡಿದ್ದ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರೂ ಮಂಗಳವಾರ ಮಾತು ಬದಲಿಸಿದ್ದು, ಇನ್ನೂ ಎಲ್ಲವೂ ಸರಿಹೋಗಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಮಂಗಳವಾರ ಹಿರಿಯ ನ್ಯಾಯಮೂರ್ತಿಗಳ ಜತೆ ಸುಮಾರು 15 ನಿಮಿಷಗಳ ಕಾಲ ಸಿಜೆಐ ದೀಪಕ್‌ ಮಿಶ್ರಾ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇತರೆ ಕೆಲವು ಜಡ್ಜ್ಗಳೂ ಇದ್ದರು ಎಂದು ಹೇಳಲಾಗಿದೆ. ಬುಧವಾರವೂ ನ್ಯಾಯಮೂರ್ತಿಗಳ ನಡುವೆ ಮಾತುಕತೆ ಮುಂದುವರಿಯಲಿದ್ದು, 2-3 ದಿನಗಳಲ್ಲಿ ಬಿಕ್ಕಟ್ಟು ಇತ್ಯರ್ಥವಾಗಲಿದೆ. ಸದ್ಯ ಎಲ್ಲವೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಮಾತುಕತೆಯ ಬಳಿಕ ಎಲ್ಲ ನ್ಯಾಯಮೂರ್ತಿಗಳೂ ಎಂದಿನಂತೆ ಕೋರ್ಟ್‌ ಕಲಾಪದಲ್ಲಿ ಭಾಗಿಯಾಗಿದ್ದಾರೆ.

ಇದೇ ವೇಳೆ, “ಯಾವುದೇ ಸಂಧಾನ ಪ್ರಕ್ರಿಯೆ ನಡೆದಿಲ್ಲ. ನಾವು ಎತ್ತಿರುವ ವಿಚಾರಗಳನ್ನು ಪರಿಹರಿಸುವ ಪ್ರಯತ್ನವೇ ನಡೆದಿಲ್ಲ’ ಎಂದು  ಹಿರಿಯ ನ್ಯಾಯಮೂರ್ತಿಗಳು ತಿಳಿಸಿದ್ದಾಗಿ ಅವರ ಆಪ್ತ ಮೂಲಗಳನ್ನು ಉಲ್ಲೇಖೀಸಿ “ದಿ ಹಿಂದೂ’ ವರದಿ ಮಾಡಿದೆ. ಇನ್ನೊಂದೆಡೆ, ಈ ವಾರಾಂತ್ಯದೊಳಗೆ ಎಲ್ಲವೂ ಸರಿಹೋಗಲಿದೆ ಎಂದು ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷ ವಿಕಾಸ್‌ ಸಿಂಗ್‌ ತಿಳಿಸಿದ್ದಾರೆ.

ರಾಜಕೀಯ ಸಂಚು: ಆರ್‌ಎಸ್‌ಎಸ್‌ ಆರೋಪ
ಕಳೆದ ಶುಕ್ರವಾರ ಹಿರಿಯ ನ್ಯಾಯಮೂರ್ತಿಗಳು ನಡೆಸಿದ ಸುದ್ದಿಗೋಷ್ಠಿಯ ಹಿಂದೆ ಸ್ಪಷ್ಟ ರಾಜಕೀಯ ಪಿತೂರಿ ಅಡಗಿದೆ. ನ್ಯಾಯಮೂರ್ತಿಗಳು ಮಾಡಿದ್ದನ್ನು ಕ್ಷಮಿಸಲಾಗದು. ಅವರು ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರು ಇಟ್ಟಿರುವಂಥ ನಂಬಿಕೆಯ ಮೇಲೆಯೇ ದಾಳಿ ನಡೆಸಲು ಯತ್ನಿಸಿದ್ದಾರೆ ಎಂದು ಆರ್‌ಎಸ್‌ಎಸ್‌ನ ಅಖೀಲ ಭಾರತೀಯ ಸಹ ಬೌಧಿಕ್‌ ಪ್ರಮುಖ್‌ ಜೆ. ನಂದಕುಮಾರ್‌ ಆರೋಪಿಸಿದ್ದಾರೆ.

Advertisement

ನ್ಯಾ| ಲೋಯಾ ಸಾವು ಪ್ರಕರಣ: ಅರ್ಜಿದಾರರಿಗೂ ಗೊತ್ತಾಗಲಿ ಈ ಎಲ್ಲ ಬೆಳವಣಿಗೆಗಳ ನಡುವೆಯೇ ಮಂಗಳವಾರ ಸುಪ್ರೀಂ ಕೋರ್ಟ್‌ ನಲ್ಲಿ ಸಿಬಿಐ ವಿಶೇಷ ಜಡ್ಜ್ ಬಿ.ಎಚ್‌.ಲೋಯಾ ಅವರ ಸಾವಿಗೆ ಸಂಬಂಧಿಸಿದ ವಿಚಾರಣೆ ನಡೆಯಿತು. ನ್ಯಾ| ಲೋಯಾ ಅವರ ಮರಣೋತ್ತರ ಪರೀಕ್ಷೆಯ ವರದಿ ಸೇರಿದಂತೆ ಅವರ ಸಾವಿನ ಕುರಿತಾದ ಹಲವು ದಾಖಲೆಗಳನ್ನು ಮಹಾರಾಷ್ಟ್ರ ಸರಕಾರ‌ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತು. 

ನ್ಯಾ| ಅರುಣ್‌ ಮಿಶ್ರಾ ಹಾಗೂ ಎಂ.ಎಂ.ಶಾಂತನಗೌಡರ್‌ ಅವರಿದ್ದ ನ್ಯಾಯ ಪೀಠ, “ಈ ಕೇಸಿನಲ್ಲಿ ಯಾವ ವಿಚಾರವೂ ರಹಸ್ಯವಾಗಿ ಉಳಿಯಬಾರದು. ಅರ್ಜಿದಾರರಿಗೆ ಎಲ್ಲವೂ ಗೊತ್ತಿರಲಿ. ಇನ್ನು 7 ದಿನಗಳ ಒಳಗಾಗಿ ಈ ದಾಖಲೆಗಳ ಪ್ರತಿಯನ್ನು ಅರ್ಜಿದಾರರಿಗೆ ನೀಡಬೇಕು’ ಎಂದು ಆದೇಶಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next