ಕಳೆದೆರಡು ದಶಕಗಳಿಂದ ಜಾಗತಿಕ ಸಮುದಾಯಕ್ಕೆ ತಲೆನೋವಾಗಿ ಪರಿಣಮಿ ಸಿರುವ ಉತ್ತರ ಕೊರಿಯಾ ತನ್ನ ಸೇನಾಬಲವನ್ನು ವೃದ್ಧಿಸುವ ಮೂಲಕ ವಿಶ್ವಶಾಂತಿಗೆ ಬಲುದೊಡ್ಡ ಸವಾಲು ತಂದೊಡ್ಡಿದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ನಿರಂತರವಾಗಿ ವಿವಿಧ ಮಾದರಿಯ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಕ್ಷಿಪಣಿಗಳನ್ನು ಒಂದರ ಮೇಲೊಂದರಂತೆ ಪರೀಕ್ಷೆ ನಡೆಸುವ ಮೂಲಕ ಇಡೀ ವಿಶ್ವವನ್ನು ಆತಂಕಕ್ಕೀಡು ಮಾಡಿದೆ.
ವಿಶ್ವದ ಪ್ರಬಲ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆಯ ಸತತ ಎಚ್ಚರಿಕೆ ಹಾಗೂ ಒತ್ತಡದ ಹೊರತಾಗಿಯೂ ಉತ್ತರ ಕೊರಿಯಾವು ತನ್ನ ಚಾಳಿಯನ್ನು ಬಿಡದೆ ವಿಶ್ವದ ಮೇಲೆ ಹಿಡಿತ ಸಾಧಿಸುವ ಹುನ್ನಾರದಲ್ಲಿ ನಿರತವಾಗಿದೆ.
ಶನಿವಾರವಷ್ಟೇ ಖಂಡಾಂತರ ಕ್ಷಿಪಣಿಯ ಪರೀಕ್ಷೆ ನಡೆಸಿದ್ದ ಉತ್ತರ ಕೊರಿಯಾ ಸೋಮವಾರದಂದು ಅಲ್ಪಶ್ರೇಣಿಯ ಮತ್ತೆರಡು ಖಂಡಾಂತರ ಕ್ಷಿಪಣಿಗಳನ್ನು ಜಪಾನ್‌ನತ್ತ ಉಡಾಯಿಸಿ ಪರೀಕ್ಷೆ ನಡೆಸಿತ್ತು. ಉತ್ತರ ಕೊರಿಯಾದ ಈ ಸರ್ವಾಧಿಕಾರಿ ಧೋರಣೆಯ ವಿರುದ್ಧ ಕಿಡಿಕಾರಿರುವ ಜಪಾನ್ ಕ್ಷಿಪಣಿ ಪ್ರಯೋಗವನ್ನು ಖಂಡಿಸಿರುವುದೇ ಅಲ್ಲದೆ ಇದನ್ನೊಂದು ಅಂತಾರಾಷ್ಟ್ರೀಯ ಬೆದರಿಕೆ ಎಂದು ಪರಿಗಣಿಸುವುದಾಗಿ ಎಚ್ಚರಿಕೆ ನೀಡಿದೆ. ಇದೇ ವೇಳೆ ಅಮೆರಿಕ ಕೂಡ ಉತ್ತರ ಕೊರಿಯಾದ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯವೈಖರಿಯ ಬಗೆಗೇ ಅಸಮಾಧಾನ ಹೊರಹಾಕಿದೆ.
ದಕ್ಷಿಣ ಕೊರಿಯಾ ಮತ್ತು ಅಮೆರಿಕ ನಡೆಸುತ್ತಿರುವ ಜಂಟಿ ಮಿಲಿಟರಿ ಸಮರಾಭ್ಯಾಸವು ತನ್ನ ಭದ್ರತೆಗೆ ಬೆದರಿಕೆಯಾಗಿರುವುದರಿಂದ ಈ ಕ್ಷಿಪಣಿ ಪರೀಕ್ಷೆ ನಡೆಸಿರುವುದಾಗಿ ಉತ್ತರ ಕೊರಿಯಾ ಸ್ಪಷ್ಟನೆ ನೀಡಿದೆ. ಅಮೆರಿಕವು ದಕ್ಷಿಣ ಕೊರಿಯಾದೊಂದಿಗೆ ರಕ್ಷಣ ಸಂಬಂಧ ವೃದ್ಧಿಗೊಳಿಸುವ ಪ್ರಕ್ರಿಯೆಯಲ್ಲಿ ತಲ್ಲೀನವಾಗಿರುವುದರಿಂದ ಉತ್ತರ ಕೊರಿಯಾ ಪದೇ ಪದೆ ಇಂತಹ ಕ್ಷಿಪಣಿ ಪ್ರಯೋಗಗಳನ್ನು ನಡೆಸುವ ಮೂಲಕ ವಿಶ್ವ ಸಮುದಾಯವನ್ನು ಆತಂಕದ ಮಡುವಿಗೆ ತಳ್ಳುತ್ತಿದೆ. ಕಳೆದ ವರ್ಷ ಉತ್ತರ ಕೊರಿಯಾ ಎಲ್ಲ ಅಂತಾರಾಷ್ಟ್ರೀಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಹಲವಾರು ಕ್ಷಿಪಣಿಗಳ ಪರೀಕ್ಷೆಯನ್ನು ನಡೆಸಿತ್ತು. ಈ ವರ್ಷಾರಂಭದಿಂದಲೂ ಉತ್ತರ ಕೊರಿಯಾ ತನ್ನ ಕ್ಷಿಪಣಿ ಪ್ರಯೋಗವನ್ನು ಮುಂದುವರಿಸುವ ಮೂಲಕ ದಕ್ಷಿಣ ಕೊರಿಯಾ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಲೇ ಬಂದಿದೆ.
ಉತ್ತರ ಕೊರಿಯಾದ ವಿಚಾರದಲ್ಲಿ ವಿಶ್ವಸಂಸ್ಥೆ ಮೌನಕ್ಕೆ ಶರಣಾಗಿರುವುದು ಕೊಂಚ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ವಿಚಾರದಲ್ಲಿ ಸ್ವತಃ ಅಮೆರಿಕ ಕೂಡ ಇಬ್ಬಂದಿತನವನ್ನು ಪ್ರದರ್ಶಿಸುತ್ತಿರುವುದು ರಹಸ್ಯವಾಗಿಯೇನೂ ಉಳಿದಿಲ್ಲ. ಆದರೆ ಈ ಬಾರಿ ದಕ್ಷಿಣ ಕೊರಿಯಾದೊಂದಿಗೆ ಜಂಟಿ ಸಮರಾಭ್ಯಾಸ ನಡೆಸುತ್ತಿರುವಾಗಲೇ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆಯ ದಾಷ್ಟéìತನ ತೋರಿರುವುದರಿಂದ ಅಮೆರಿಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯವಿಧಾನವನ್ನು ಪ್ರಶ್ನಿಸಿದೆ. ಉತ್ತರ ಕೊರಿಯಾದ ವಿಚಾರದಲ್ಲಿ ಭದ್ರತಾ ಮಂಡಳಿಯನ್ನು ಕೆಲವೊಂದು ರಾಷ್ಟ್ರಗಳು ಬಲವಂತವಾಗಿ ಮೌನಕ್ಕೆ ಶರಣಾಗುವಂತೆ ಮಾಡಿವೆ ಎನ್ನುವ ಮೂಲಕ ಅಮೆರಿಕ, ರಷ್ಯಾ ಮತ್ತು ಚೀನದ ನಡೆಯನ್ನು ಪರೋಕ್ಷವಾಗಿ ಟೀಕಿಸಿದೆ. ಈ ರಾಷ್ಟ್ರಗಳ ನಡುವಣ ಮುಸುಕಿನ ಗುದ್ದಾಟದಲ್ಲಿ ಜಾಗತಿಕ ಸಮುದಾಯ ಆತಂಕದ ಕ್ಷಣಗಳನ್ನು ಎದುರಿಸುವಂತಾಗಿದೆ.
ಬಲಾಡ್ಯ ರಾಷ್ಟ್ರಗಳು ತಮ್ಮ ಭದ್ರತೆ, ಸಾರ್ವಭೌಮತೆ ರಕ್ಷಣೆಯ ನೆಪವನ್ನು ಮುಂದಿಟ್ಟು ಜಾಗತಿಕವಾಗಿ ಅಶಾಂತಿ ಸೃಷ್ಟಿಸುವ ಕಾರ್ಯದಲ್ಲಿ ನಿರತವಾಗಿರುವುದು ಖಂಡನೀಯ. ದೇಶವೊಂದು ತನ್ನ ಹಿತಾಸಕ್ತಿಯನ್ನು ಬಲಿಗೊಟ್ಟು ವಿಶ್ವಶಾಂತಿಯ ಜಪ ಪಠಿಸಲು ಸಾಧ್ಯವಿಲ್ಲ ಎಂಬುದನ್ನು ಮೊದಲು ವಿಶ್ವದ ಬಲಾಡ್ಯ ರಾಷ್ಟ್ರಗಳು ಮನಗಾಣಬೇಕು. ಯಾವುದೇ ರಾಷ್ಟ್ರ ತನ್ನ ಎಲ್ಲೆಯನ್ನು ಮೀರಿದ ಸಂದರ್ಭದಲ್ಲಿ ಸ್ಪಷ್ಟ ಮಾತುಗಳಲ್ಲಿ ಆ ರಾಷ್ಟ್ರಕ್ಕೆ ತಿಳಿ ಹೇಳುವ ಕಾರ್ಯವನ್ನು ವಿಶ್ವಸಂಸ್ಥೆ ಮಾಡಬೇಕು. ಹಾಗಾದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ.