Advertisement
ಸ್ವಾಮಿಯ ಜಾತ್ರೆ ಬಂದರೆ ಸಾಕು ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ಎಲ್ಲಾ ಜಾತಿ-ಜನಾಂಗದವರು ಪಾಲ್ಗೊಂಡು ದೇವರ ದರ್ಶನ ಪಡೆಯುತ್ತಾರೆ. ಈ ಜಾತ್ರೆಗೆ ರಾಜ್ಯವಷ್ಟೇ ಅಲ್ಲ ವಿವಿಧ ರಾಜ್ಯಗಳ ಮೂಲೆ-ಮೂಲೆಗಳಿಂದಲೂ ಆಗಮಿಸುತ್ತಾರೆ . ಜಾತ್ರೆ ಆರಂಭಗೊಳ್ಳುವ ಒಂದು ತಿಂಗಳ ಮೊದಲೇ ಜಾತ್ರೆಯ ಸಿದ್ಧತೆ ನಡೆಯುತ್ತದೆ. ರೈತರಿಗಂತೂ ಈ ಜಾತ್ರೆಯ ಸಂಭ್ರಮ ಹೇಳತೀರದು. ರೈತರುತಮ್ಮ ಎತ್ತುಗಳನ್ನು ಮೇಯಿಸುವುದು, ಸವಾರಿ ಬಂಡಿಗಾಗಿ ಹೊಸ ವಸ್ತುಗಳನ್ನು ಮುಂಗಡವಾಗಿ ಖರೀದಿಸಿ ಇಟ್ಟುಕೊಳುವುದು ಮುಂತಾದವುಗಳನ್ನು ಮಾಡುತ್ತಾರೆ.
Related Articles
Advertisement
ಲಕ್ಷೋಪ ಲಕ್ಷ ಭಕ್ತರಿದ್ದ ಪ್ರದೇಶದಲ್ಲಿ ಒಂದು ಸೂಜಿ ಮೊನೆ ಬಿದ್ದರೂ ಕೇಳಿಸುವಷ್ಟು ಮೌನ ಆವರಿಸುತ್ತದೆ. ನಂತರ ಗೊರವಪ್ಪ ಶ್ರೀ ಮೈಲಾರಲಿಂಗನ ಆಶೀರ್ವಾದದಂತೆ ಕಾರ್ಣಿಕದ ಭವಿಷ್ಯವಾಣಿ ನುಡಿದು ಭೂಮಿಗೆ ಧುಮುಕುತ್ತಾನೆ. ಇದು ನಿಜಕ್ಕೂ ಕ್ಷಣ ಕಾಲ ನೆರೆದಿದ್ದ ಭಕ್ತರನ್ನು ಮಂತ್ರಮುಗ್ಧರನ್ನಾಗಿರಿಸುತ್ತದೆ. ಈ ಕಾರ್ಣಿಕದ ನುಡಿಯಿಂದ ದೇಶದ ಒಳಿತು -ಕೆಡಕುಗಳ ವಿಶ್ಲೇಷಣೆ ಮಾಡಲಾಗುತ್ತದೆ. ನಾಡಿನ ಗಣ್ಯರ ಜೀವನ, ರೈತಾಪಿ ವರ್ಗಕ್ಕೆ ಶುಭ-ಅಶುಭ, ಮಕ್ಕಳು, ಹಿರಿಯ ಜೀವನ, ನಾಡಿನ ಒಳಿತು ಕೆಡುಕುಗಳ ಮುನ್ನೆಚ್ಚರಿಕೆ ಕೈಗನ್ನಡಿ ಆಗಿರುತ್ತದೆ ಎಂದರೆ ತಪ್ಪಾಗಲಾರದು. ಹೀಗೆ ಎಲ್ಲಾ ರೀತಿಯಿಂದಲೂ ಶ್ರೀ ಮೈಲಾರ ಕಾರ್ಣಿಕೋತ್ಸವವನ್ನು ಭಕ್ತರು ತಮ್ಮದೇ ಲೆಕ್ಕಾಚಾರದಲ್ಲಿ ವಿಶ್ಲೇಷಿಸುತ್ತಾರೆ.ಕಾರ್ಣಿಕ ನುಡಿ ಭವಿಷ್ಯದ ಸತ್ಯವಾಣಿ ಎಂದು ನಂಬುತ್ತಾರೆ.
ಕಾರ್ಣಿಕೋತ್ಸವ ರಾಕ್ಷಸ ಸಂಹಾರದ ವಿಜಯೋತ್ಸವದ ಸಂಕೇತ
ಹಿಂದೆ ಭೂ ಲೋಕದಲ್ಲಿ ಮಲ್ಲಾಸುರ-ಮಣಿಕಾಸುರ ಎಂಬ ರಾಕ್ಷಸ ಸಹೋದರರು ಮಾನವರೊಳಗೊಂಡಂತೆ ಮುನಿಗಳನ್ನು, ತಪಸ್ವಿಗಳನ್ನು ಹಿಂಸಿಸುತ್ತಿರುತ್ತಾರೆ. ಇವರ ಉಪಟಳ ತಾಳಲಾರದೆ ಕೊನೆಗೆ ದೇವತೆಗಳು ಶಿವನಲ್ಲಿಗೆ ತಮ್ಮ ಕಷ್ಟಗಳನ್ನು ಬಗೆಹರಿಸಲು ಮೊರೆ ಹೋಗುತ್ತಾರೆ. ಆಗ ಶಿವ ಪರಮಾತ್ಮನು ಏಳು ಕೋಟಿ ದೇವಾನು ದೇವತೆಗಳ ಸೈನ್ಯ ಕಟ್ಟಿಕೊಂಡು ಶ್ರೀ ಕ್ಷೇತ್ರದ ಮೂಡಣ ದಿಕ್ಕಿನ ಮಣಿಚುರ ಪರ್ವತಕ್ಕೆ ಸಾಗುತ್ತಾನೆ.
ಈ ಸಂದರ್ಭದಲ್ಲಿ ಈಶ್ವರನು ಮಾರ್ತಾಂಡ ಭೈರವನಾಗಿ, ಕಂಬಳಿ ನಿಲುವಂಗಿ, ಮುಂಡಾಸ, ಕೈಯಲ್ಲಿ ಢಮರುಗ, ತ್ರಿಶೂಲ,ದೋಣಿ ಭಂಡಾರ ಬಟ್ಟಲು ಕೈಯಲ್ಲಿ ಹಿಡಿದುಕೊಂಡು ಶ್ರೀ ವಿಷ್ಣುವನ್ನು ಮುಖ್ಯ ಸೇನಾಧಿಪತಿಯನ್ನಾಗಿ, ನಂದೀಶ್ವರ ಕುದುರೆಯಾಗಿ, ರಾಕ್ಷಸರ ಸಂಹಾರಕ್ಕೂ ಗುಪ್ತ ಮೌನ ಸವಾರಿ ಮೂಲಕವಾಗಿ ರಾಕ್ಷಸರು ಅವಿತು ಕುಳಿತಿದ್ದ ಡೆಂಕನ ಮರಡಿಗೆ ತೆರಳುತ್ತಾರೆ.
ರಥಸಪ್ತಮಿ ದಿನದಿಂದ ಸುಮಾರು 11 ದಿನಗಳ ಕಾಲ ರಾಕ್ಷಸರಿಗೂ ಹಾಗೂ ದೇವತೆಗಳಿಗೂ ಘೋರ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ ರಾಕ್ಷಸರನ್ನು ಸಂಹಾರ ಮಾಡಲಾಗುತ್ತದೆ ಎಂಬುದು ಪುರಾಣ ಪ್ರಸಿದ್ಧವಾಗಿದೆ. ಮಲ್ಲಾಸುರ ದೈತ್ಯನನ್ನು ಸಂಹರಿಸಿದ್ದಕ್ಕಾಗಿ ಮಲ್ಲಾರಿ ಎಂದು ಹಾಗೆ ಮಲ್ಲಾರಿ ನೆಲೆಸಿದ್ದ ಸ್ಥಳವನ್ನು ಮೈಲಾರವೆಂದು ಪ್ರಸಿದ್ಧಿ ಪಡೆಯಿತೆಂಬ ಪ್ರತೀತಿ ಇದೆ.ರಾಕ್ಷಸರ ಸಂಹಾರದ ನಂತರ ಭೂಲೋಕದಲ್ಲಿ ಮಳೆ ಬೆಳೆ ಸುಭಿಕ್ಷೆಯಿಂದ ಆಗಲು ಮತ್ತು ಪ್ರಜೆಗಳು ಸಂತೋಷವಾಗಿರಲು ನಾಡಿನ ಭಕ್ತರಿಗೆ ಒಳಿತು ಮಾಡುವ ದೇವರ ವಾಣಿ ನಡೆದು ಅದು ಇಂದಿಗೂ ಕಾರ್ಣಿಕದ ನುಡಿಯಾಗಿ ಪ್ರಸಿದ್ಧಿಯಾಗಿದೆ.
-ವಿಶ್ವನಾಥ ಹಳ್ಳಿಗುಡಿ