Advertisement
ಬಲೂನು ಎಂದರೆ, ಭಾವನಾತ್ಮಕ ಬೆಸುಗೆ. ನಮ್ಮ ಉಸಿರನ್ನು ಊದಿ ಕಟ್ಟಿಕೊಡುವ ಬಲೂನೆಂದರೆ ಪ್ರೀತಿ ಪಾತ್ರರಿಗೆ ಅದೇನೋ ಪುಳಕ. ಬೆಲೆಕಟ್ಟಲಾಗದ ಉಡುಗೊರೆ.
Related Articles
Advertisement
ರಾತ್ರಿ ಬರವಣಿಗೆ, ಓದು ಎಲ್ಲ ಮುಗಿದ ಮೇಲೆ ಪೆನ್ನಿನ ಕಡ್ಡಿಯನ್ನು ಚಿಮಣಿ ದೀಪಕ್ಕೆ ತಾಗಿಸಿ ಬಲೂನು ಮಾಡಲು ಹೋದಾಗ ಕಡ್ಡಿ ಕರಗಿ ಹೋಗಿದ್ದೆ ಜಾಸ್ತಿ. ಆದರೆ ನಮ್ಮ ಉತ್ಸಾಹ ಕರಗಿ ಹೋಗ್ತಾ ಇರಲಿಲ್ಲ..ಮರಳಿ ಯತ್ನವ ಮಾಡು ಎಂಬಂತೆ ಮತ್ತೂಂದು ಕಡ್ಡಿ..ಊಹ್ಮೂ..ಇಲ್ಲೂ ಯಶಸ್ಸಾಗಲಿಲ್ಲ. ಕಡ್ಡಿ ಕರಗಿತು. ಊದಿ ನೋಡುವ ಅಂತ ಇರುವ ಉಸಿರನ್ನೆಲ್ಲ ಸೇರಿಸಿ ಜೋರಾಗಿ ಊದಿದಾಗ ಕರಗಿದ ಪ್ಲಾಸ್ಟಿಕ್ ನನ್ನ ಎದುರು ದೊಡ್ಡ ಸಂಶೋಧನೆ ನೋಡುವ ಹಾಗೆ ಪಿಳಿ ಪಿಳಿ ಕಣ್ಣು ಬಿಡುತ್ತಾ ಕುಳಿತ ತಂಗಿಯ ಹಣೆ ಮೇಲೆ ಹೋಗಿ ತಾಗಿತು.. ಅಂಟಿಕೊಂಡಿತು. ಚುರ್ ಅಂತು,ಅಲ್ಲೆ ಮಾಸದ ಕಲೆಯಾಗಿ ಇಂದಿಗೂ ನೆನಪಿನ ಕಚಗುಳಿ ನೀಡುತ್ತದೆ. ಎಷ್ಟೊಂದು ಮಧುರ ಆ ಬಾಲ್ಯದ ನೆನಪುಗಳು.
ಟುಸ್ ಆದ ಕತೆಗಳ ಜೊತೆಗೆ ಯಶಸ್ಸಿನ ಕತೆಗಳೂ ಇದೆ.ಈ ಪೆನ್ನಿನ ಕಡ್ಡಿಯನ್ನು ಬೆಂಕಿಗೆ ತಾಗಿಸುವಾಗ ಎಷ್ಟು ಏಕಾಗ್ರತೆ ಎಂದರೆ,ಕಣ್ಣಿಗೆ ಹಕ್ಕಿಯ ಕಣ್ಣು-ಬಾಣದ ಮೊನೆ- ಅರ್ಜುನ.. ನೆನಪಾಯ್ತಲ್ಲ ಹಾಗೆ..ಹೀಗೆ ಏಕಾಗ್ರತೆಯಲ್ಲಿ ಸುಡುವಾಗ ಮುಂದೆಲೆಯ ಕೂದಲು ಚಿಮಣಿ ಗೆ ತಾಕಿ ಕರಟಿದರೂ ಅರಿವಾಗ್ತಾ ಇರಲಿಲ್ಲ. ಅದರ ಕರಟಿದ ವಾಸನೆ ಒಳಗಿದ್ದ ಅಮ್ಮನ ಮೂಗಿಗೆ ಬಡಿದು,” ಯಾರದ್ದ… ಮಕ್ಕಳೇ ಮಂಡಿ ಕೂದ್ಲ… ಸುಟ್ಟ… ಹೋದ್ ಜಂಬ್(ವಾಸನೆ) ಬತ್ತಲೆ” ಅಂತ ಕೂಗಿದ ಮೇಲೆ ಮಂಡಿ ಮುಟ್ಟಿ ಕಾಂತ ಇತ್ತಲ್ಲ. ಎಂತ ಏಕಾಗ್ರತೆ ಅಲ್ವಾ..?
ಸಕ್ಸಸ್ ಆದ ಕಡ್ಡಿ ಬಲೂನನ್ನು ಭದ್ರವಾಗಿ ಕಂಪಾಸು ಪೆಟ್ಟಿಗೆಯಲ್ಲಿಟ್ಟು ಮಲಗಿ ಅದರದ್ದೇ ಕನಸಲ್ಲಿ ತೇಲಾಡುತ್ತಾ ಶಾಲೆಗೆ ಹೋಗಿ ಗೆಳೆಯರೆದುರು ಊದಿ ತೋರಿಸಿ ಒಂಥರಾ, “ಹೀರೋಯಿಸಂ” ಅನುಭೂತಿ ಪಡೆಯುತ್ತೀವಲ್ಲ ಅದು ಎಷ್ಟು “ದುಬಾರಿ” ಅಲ್ವಾ? ಈಗಿನ ಮಕ್ಕಳಿಗೆ ಬಲೂನುಗಳ ಪ್ಯಾಕ್ ನ್ನೆ ಕೊಡಿಸುವ ನಾವುಗಳು ಇಂತಹದೊಂದು ಬಲೂನು ಮಾಡಿ ಖುಷಿ ಪಡುತ್ತಿದ್ದೆವು ಎಂಬ ಕ್ಷಣವನ್ನು ಹಂಚಿಕೊಳ್ಳೋಣವೇ..ಸಾಧ್ಯವಾದರೆ ನಾವೇ ಮಾಡಿ ತೋರಿಸಿ ಅವರ ಪ್ರಪಂಚವನ್ನು ನಮ್ಮ “ದುಬಾರಿ” ಬಲೂನಿನೊಂದಿಗೆ ಶ್ರೀಮಂತಗೊಳಿಸೋಣ..ಸಣ್ಣ ಸಣ್ಣ ಖುಷಿಯನ್ನು ಸಂಭ್ರಮಿಸುವುದನ್ನು ಕಲಿಸೋಣ..
ರೇಖಾ ಪ್ರಭಾಕರ್ ಶಿವಮೊಗ್ಗ