Advertisement

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

04:04 PM Nov 21, 2024 | Team Udayavani |

ಪ್ರತ್ಯೇಕತಾವಾದಿ ಮುಖಂಡ ಯಾಸಿನ್‌ ಮಲಿಕ್‌ (Yasin Malik) ಖುದ್ದು ವಿಚಾರಣೆಗೆ ಹಾಜರಾಗಬೇಕೆಂಬ ಜಮ್ಮು (Jammu) ಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಿಬಿಐ (CBI) ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ‌ ಗುರುವಾರ(ನ.21) ನಡೆಸಿದ ಸುಪ್ರೀಂಕೋರ್ಟ್, ಈ ದೇಶದಲ್ಲಿ 26/11ರ ಭಯೋತ್ಪಾದಕ ಅಜ್ಮಲ್‌ ಕಸಬ್‌ ನಂತವರಿಗೂ ನಿಷ್ಪಕ್ಷಪಾತ ವಿಚಾರಣೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಅಭಿಪ್ರಾಯವ್ಯಕ್ತಪಡಿಸಿದೆ.

Advertisement

1990ರಲ್ಲಿ ಶ್ರೀನಗರದ ಹೊರವಲಯದಲ್ಲಿ ನಾಲ್ವರು ವಾಯುಪಡೆ ಯೋಧರನ್ನು ಹ*ತ್ಯೆಗೈದ ಮತ್ತು 1989ರಲ್ಲಿ ಅಂದಿನ ಗೃಹ ಸಚಿವೆ ಮುಫ್ತಿ ಮೊಹಮ್ಮದ್‌ ಸಯೀದ್‌ ಪುತ್ರಿ ರುಬಿಯಾ ಸಯೀದ್‌ ಅಪಹರಣ ಪ್ರಕರಣ ನಡೆದಿದ್ದು, ಎರಡೂ ಕೇಸ್‌ ನಲ್ಲೂ ಯಾಸಿನ್‌ ಮಲಿಕ್‌ ಪ್ರಮುಖ ಆರೋಪಿ.

ಭಯೋ*ತ್ಪಾದಕರಿಗೆ ಆರ್ಥಿಕ ನೆರವು ಪ್ರಕರಣದಲ್ಲಿ ಮಲಿಕ್‌ ದೆಹಲಿಯ ತಿಹಾರ್‌ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದು, 2022ರಲ್ಲಿ ಭಯೋ*ತ್ಪಾದನೆ ಮತ್ತು ಕಲ್ಲುತೂರಾಟ ಚಟುವಟಿಕೆ ನಿಗ್ರಹ ಕಾಯ್ದೆ ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ಕೋರ್ಟ್‌, ಖುದ್ದು ಹಾಜರಾಗುವಂತೆ ಸೂಚಿಸಿತ್ತು. ಮಲಿಕ್‌ ಕೂಡಾ ತಾನು ಖುದ್ದು ಹಾಜರಾಗಲು ಬಯಸುವುದಾಗಿ ತಿಳಿಸಿದ್ದ.

ಆದರೆ ಜಮ್ಮು ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ಯಾಸಿನ್‌ ಮಲಿಕ್‌ ಖುದ್ದು ಹಾಜರಾಗುವುದರಿಂದ ಜಮ್ಮು-ಕಾಶ್ಮೀರದಲ್ಲಿ ಅಶಾಂತಿ ತಲೆದೋರುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಮಲಿಕ್‌ ವಿರುದ್ಧ ಸಾಕ್ಷಿಗಳಿಗೂ ಅಪಾಯ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

Advertisement

ಸಿಬಿಐ ಪರ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ಸುಪ್ರೀಂ ಪೀಠದ ಜಸ್ಟೀಸ್‌ ಎ.ಎಸ್.ಓಕಾ ಮತ್ತು ಜಸ್ಟೀಸ್‌ ಎ.ಜಿ.ಮಸಿಹ್‌ ಅವರಲ್ಲಿ, ಮಲಿಕ್‌ ನನ್ನು ನಾವು ಜಮ್ಮು-ಕಾಶ್ಮೀರಕ್ಕೆ ಕರೆದೊಯ್ಯಲು ಬಯಸುತ್ತಿಲ್ಲ ಎಂದು ಹೇಳಿದಾಗ, ಜಸ್ಟೀಸ್‌ ಓಕಾ, ಹಾಗಾದರೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಆರೋಪಿಯ ಕ್ರಾಸ್‌ ಎಕ್ಸಾಮಿನೇಷನ್‌ ಹೇಗೆ ನಡೆಸುತ್ತೀರಿ ಎಂದು ಪ್ರಶ್ನಿಸಿದ್ದರು. ಅಷ್ಟೇ ಅಲ್ಲ ಜಮ್ಮುವಿನಲ್ಲಿರುವ ಕಳಪೆ ಇಂಟರ್ನೆಟ್‌ ಸಂಪರ್ಕದ ಕುರಿತು ಗಮನ ಹರಿಸಿರುವುದಾಗಿ ಕೋರ್ಟ್‌ ಅಭಿಪ್ರಾಯವ್ಯಕ್ತಪಡಿಸಿದೆ.

ಒಂದು ವೇಳೆ ಯಾಸಿನ್‌ ಮಲಿಕ್‌ ವೈಯಕ್ತಿಕವಾಗಿ ಹಾಜರಾಗುವ ನಿರ್ಧಾರದಲ್ಲಿ ಅಚಲವಾಗಿದ್ದರೆ, ವಿಚಾರಣೆಯನ್ನು ದೆಹಲಿಗೆ ವರ್ಗಾಯಿಸುವುದು ಸೂಕ್ತ ಎಂದು ಮೆಹ್ತಾ ಹೇಳಿದರು. ಪ್ರತ್ಯೇಕತಾವಾದಿ ನಾಯಕ ಖುದ್ದು ಹಾಜರಾಗಬೇಕೆಂಬ ಇಚ್ಛೆಯ ಹಿಂದೆ ತಂತ್ರಗಾರಿಕೆ ಅಡಗಿದೆ ಎಂದು ಮೆಹ್ತಾ ಕೋರ್ಟ್‌ ಗಮನಕ್ಕೆ ತಂದರು.

ಮಲಿಕ್‌ ಕೇವಲ ಮತ್ತೊಬ್ಬ ಭಯೋ*ತ್ಪಾದಕನಲ್ಲ ಎಂದು ಸಾಲಿಸಿಟರ್‌ ಜನರಲ್‌ ಮೆಹ್ತಾ ಹೇಳಿದಾಗ, ಜಸ್ಟೀಸ್‌ ಓಕಾ ಅವರು, ವಿಚಾರಣೆಯಲ್ಲಿ ಎಷ್ಟು ಮಂದಿ ಸಾಕ್ಷಿಗಳಿದ್ದಾರೆ ಎಂಬ ವಿವರ ಪಡೆದುಕೊಳ್ಳಿ. ನಮ್ಮ ದೇಶದಲ್ಲಿ ಅಜ್ಮಲ್‌ ಕಸಬ್‌ ಗೂ ನ್ಯಾಯಯುತ ವಿಚಾರಣೆ ಅವಕಾಶ ಕಲ್ಪಿಸಲಾಗಿತ್ತು ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಅದಕ್ಕೆ ಮೆಹ್ತಾ ಅವರು, ಸರ್ಕಾರ ಇಂತಹ ಪ್ರಕರಣಗಳಲ್ಲಿ ಪುಸ್ತಕ(ಕಾನೂನು) ಆಧಾರದ ಮೇಲೆ ಹೋಗಲು ಆಗಲ್ಲ. ಈತ (ಮಲಿಕ್)‌ ಪಾಕಿಸ್ತಾನಕ್ಕೆ ತೆರಳಿದ್ದ ವೇಳೆ ಹಫೀಜ್‌ ಸಯೀದ್‌ ನಂತಹ ಉ*ಗ್ರನ ಜತೆ ವೇದಿಕೆ ಹಂಚಿಕೊಂಡಿರುವುದಾಗಿ ಮೆಹ್ತಾ ಕೋರ್ಟ್‌ ಗಮನ ಸೆಳೆದರು.

ಜೈಲಿನಲ್ಲಿ ವಿಚಾರಣೆ ನಡೆಸಲು ನ್ಯಾಯಾಲಯ ಸ್ಥಾಪಿಸುವ ಪ್ರಸ್ತಾಪಕ್ಕೆ ಸುಪ್ರೀಂಕೋರ್ಟ್‌ ಸಮ್ಮತಿ ಸೂಚಿಸಿದ್ದು, ಎಷ್ಟು ಮಂದಿ ಸಾಕ್ಷಿಗಳು ಹಾಜರಾಗುತ್ತಾರೆ ಎಂಬುದನ್ನು ಕೇಂದ್ರ ಸರ್ಕಾರ ಗಮನಿಸಿ, ಅದಕ್ಕೆ ಬೇಕಾದ ಭದ್ರತಾ ವ್ಯವಸ್ಥೆಯನ್ನು ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿ, ಮುಂದಿನ ಗುರುವಾರ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next