* ನಾನ್ ಸ್ಟಿಕ್ ಪಾತ್ರೆಗಳಲ್ಲಿ ಆಹಾರ ಪದಾರ್ಥವನ್ನು ಫ್ರೈ ಮಾಡುವಾಗ, ಅಥವಾ ಇನ್ಯಾವುದೇ ಸಂದರ್ಭದಲ್ಲಿ ಒಳಗೆ ಕೈಯಾಡಿಸಲು ಸ್ಟೀಲ್ ಅಥವಾ ಇನ್ಯಾವುದೇ ಲೋಹದ ಸೌಟುಗಳನ್ನು ಬಳಸುವುದು ಸರಿಯಲ್ಲ. ಅದರ ಚೂಪಾದ ಭಾಗದಿಂದ, ಪಾತ್ರೆಗೆ ಹಾನಿಯುಂಟಾಗುತ್ತದೆ. ಹೀಗಾಗಿ ಮರ, ಪ್ಲಾಸ್ಟಿಕ್, ಸಿಲಿಕೋನ್- ಈ ಯಾವುದೇ ಬಗೆಯ ಸೌಟುಗಳನ್ನು ಬಳಸುವುದು ಉತ್ತಮ.
* ಕೆಲ ಸಂಸ್ಥೆಗಳು, ತಮ್ಮ ನಾನ್ ಸ್ಟಿಕ್ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ಎಣ್ಣೆ ಹಾಕುವ ಅಗತ್ಯ ಇಲ್ಲ ಎಂದು ಹೇಳುತ್ತವೆ. ಹಾಗಿದ್ದರೂ, ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕುವುದು ಪಾತ್ರೆಯ ಬಾಳಿಕೆಯ ದೃಷ್ಟಿಯಿಂದ ಒಳ್ಳೆಯದು. ಇದರಿಂದ ನಾನ್ ಸ್ಟಿಕ್ ಪದರ ಉಳಿಯುತ್ತದೆ. ಕೆಲವೊಮ್ಮೆ, ಪಾನ್ ಕೂಡಾ ಅಳಿದುಳಿದ ಆಹಾರ ಪದಾರ್ಥಕ್ಕೆ ಅಂಟಿಕೊಂಡು, ನಾನ್‌ಸ್ಟಿಕ್ ಕೋಟಿಂಗ್ ಪದರವನ್ನು ಹಾಳುಗೆಡವಿದ ಉದಾಹರಣೆಗಳಿವೆ.
* ನಾನ್‌ಸ್ಟಿಕ್ ಪಾನ್‌ಗಳು ಅತೀ ಬಿಸಿಯನ್ನು ತಡೆದುಕೊಳ್ಳಲಾರವು. ಹೀಗಾಗಿ, ಕಡಿಮೆ ಉರಿಯಲ್ಲಿ ಆಹಾರ ಪದಾರ್ಥವನ್ನು ಬೇಯಿಸಬೇಕು. * ಆಹಾರ ಪದಾರ್ಥಗಳನ್ನು ಈ ಪಾತ್ರೆಗಳಲ್ಲಿ ಹಾಕಿ ಇಡಬಾರದು. ನಾನ್‌ಸ್ಟಿಕ್ ಪಾತ್ರೆಗಳನ್ನು ಅಡುಗೆ ಮಾಡಲಷ್ಟೇ ಬಳಸಬೇಕು. ಆಹಾರ ತಯಾರಾದ ನಂತರ, ಬೇರೊಂದು ಪಾತ್ರೆಗೆ ವರ್ಗಾಯಿ ಸಬೇಕು.
* ಅಡುಗೆ ತಯಾರಾಗಿ, ಆಹಾರ ಪದಾರ್ಥವನ್ನು ಬೇರೊಂದು ಪಾತ್ರೆಗೆ ವರ್ಗಾಯಿಸಿದ ನಂತರ, ಒಡನೆಯೇ ತೊಳೆಯುವ ಸಲುವಾಗಿ ಪಾತ್ರೆಯನ್ನು ನೀರಿನಲ್ಲಿ ಮುಳುಗಿಸಬಾರದು. ಬಿಸಿಯಾಗಿರುವ ಪಾತ್ರೆ ತಣ್ಣಗಾಗಲು ಬಿಡಬೇಕು. ನಂತರವೇ ನೀರಿನಲ್ಲಿ ತೊಳೆಯಲು ಇಡಬೇಕು. ಸಡನ್ ತಾಪಮಾನ ಬದಲಾವಣೆಯಿಂದಲೂ ನಾನ್ ಸ್ಟಿಕ್ ಕೋಟಿಂಗ್‌ಗೆ ಧಕ್ಕೆ ತಗುಲಬಹುದು.
* ಬಟ್ಟೆ ತೊಳೆಯುವ ಸಾಬೂನು ಸ್ಟ್ರಾಂಗ್ ರಾಸಾಯನಿಕವನ್ನು ಹೊಂದಿರುತ್ತದೆ. ಹೀಗಾಗಿ, ಅದನ್ನು ನಾನ್‌ಸ್ಟಿಕ್ ಪಾತ್ರೆ ತೊಳೆಯಲು ಬಳಸಬಾರದು. ಅದಕ್ಕೆ ಬದಲಾಗಿ, ಸೋಪ್ ನೀರನ್ನು ಹಾಕಿ ಕೈಯಿಂದಲೇ ಉಜ್ಜಿ, ತೊಳೆದು ಒಣಗಿಸಿದರೆ ಉತ್ತಮ.
* ಈ ಪಾತ್ರೆಗಳನ್ನು ಕೈ ಯಿಂದಲೇ ತೊಳೆಯುವುದು ಸೂಕ್ತ. ಲೋಹದ ಸ್ಕ್ರಬ್, ಬ್ರಶ್ ಬಳಸಬಾರದು. ಪ್ಲಾಸ್ಟಿಕ್ ಬ್ರಶ್ ಅಥವಾ ಸ್ಪಾಂಜಿನಿಂದ ಶುಚಿಗೊಳಿಸುವುದು ಇನ್ನೂ ಒಳ್ಳೆಯದು.