Advertisement
ಪ್ರಜ್ವಲ್‌ಗೆ ಟಿಕೆಟ್ ನೀಡಬಾರ ದೆಂದು ಸ್ಥಳೀಯ ಬಿಜೆಪಿ ನಾಯಕರು ಹಲವು ಬಾರಿ ಅಪಸ್ವರ ಎತ್ತಿದ್ದಾರೆ. ಈ ಪೈಕಿ ಕೆಲವರು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೂ ಮೂಗರ್ಜಿ ಬರೆದಿದ್ದಾರೆ. ಪ್ರಕರಣದ ಗಂಭೀರತೆ ಹಾಗೂ ತೀವ್ರತೆ ಬಗ್ಗೆ ತಮ್ಮನ್ನು ಭೇಟಿ ಮಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಅಮಿತ್ ಶಾ ಮನದಟ್ಟು ಮಾಡಿದ್ದು, ಅಭ್ಯರ್ಥಿ ಬದಲಾವಣೆ ಬಗ್ಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಈ ಸುದ್ದಿ ಲಭಿಸುತ್ತಿದ್ದಂತೆ ಪುತ್ರ ಸಮೇತರಾಗಿ ಯಡಿಯೂರಪ್ಪ ನಿವಾಸಕ್ಕೆ ಭೇಟಿ ಕೊಟ್ಟಿರುವ ರೇವಣ್ಣ ಸಮಸ್ಯೆ ಬಗೆಹರಿಸುವಂತೆ ಮೊರೆ ಇಟ್ಟಿದ್ದಾರೆ.
ಪ್ರಜ್ವಲ್ ವಿರುದ್ಧ ಹಾಸನ ಬಿಜೆಪಿಯ ಇಬ್ಬರು ಪರಾಜಿತ ಅಭ್ಯರ್ಥಿಗಳು ಹಾಗೂ ಜೆಡಿಎಸ್‌ನ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಾದೇಶಿಕ ಪಕ್ಷದ ಜತೆಗೆ ರಾಷ್ಟ್ರಮಟ್ಟದ ಮೈತ್ರಿಯಾದರೂ ಹಾಸನದಲ್ಲಿ ಮಾತ್ರ ಅದು ಜಾರಿಯಾಗುವುದಿಲ್ಲ. ಜೆಡಿಎಸ್ ಪರ ಕೆಲಸ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಸ್ಥಳೀಯ ನಾಯಕರು ಸಂದೇಶ ರವಾನಿಸಿದ್ದಾರೆ. ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಶ್ರೇಯಸ್ ಪಟೇಲ್ ಬಗ್ಗೆ ಜಿಲ್ಲೆಯಲ್ಲಿ ಸದಭಿಪ್ರಾಯವಿದೆ. ಕಳೆದ ಚುನಾವಣೆಯಲ್ಲಿ ರೇವಣ್ಣಗೆ ಶ್ರೇಯಸ್ ತೀವ್ರ ಸ್ಪರ್ಧೆ ನೀಡಿದ್ದರು. ಇನ್ನು ಪಕ್ಷದ ಚಿಹ್ನೆಯಡಿ ಸ್ಪರ್ಧಿಸದ ಅಭ್ಯರ್ಥಿಗೆ ಬೆಂಬಲಿಸಬೇಡಿ ಎಂದು ಸ್ಥಳೀಯ ನಾಯಕರು ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ. ಜೆಡಿಎಸ್‌ಗೆ ಬೇಕಾದರೆ ಸಹಕರಿಸೋಣ, ಆದರೆ ರೇವಣ್ಣ ಕುಟುಂಬ ಸದಸ್ಯರಿಗೆ ಬೆಂಬಲವಿಲ್ಲ ಎಂದೂ ತಿಳಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ಯಡಿಯೂರಪ್ಪ ಜತೆಗೆ ರೇವಣ್ಣ ಚರ್ಚಿಸಿದ್ದಾರೆ.
Related Articles
Advertisement
ಹಾಸನದ ಅಭ್ಯರ್ಥಿ ನಾನೇ ಎಂದು ದೇವೇಗೌಡರು ಹೇಳಿದ್ದಾರೆ. ಯಡಿಯೂರಪ್ಪನವರ ಅಶೀರ್ವಾದ ಪಡೆಯಲು ಬಂದಿದ್ದೆ . ಖುದ್ದು ನನ್ನ ಚುನಾವಣೆ ಎಂದು ಭಾವಿಸಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಪ್ರೀತಂ ಗೌಡರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿಲ್ಲ. ಅವರನ್ನೂ ಸಮಾಧಾನ ಮಾಡುತ್ತೇವೆ.-ಪ್ರಜ್ವಲ್ ರೇವಣ್ಣ ಯಡಿಯೂರಪ್ಪರಿಗೆ ರಾಜ್ಯದಲ್ಲಿ ಅವರದೇ ಆದ ಶಕ್ತಿ ಇದೆ. ಅವರ ಆಶೀರ್ವಾದ ಪಡೆದಿದ್ದೇವೆ. ಒಟ್ಟಾಗಿ ಕೆಲಸ ಮಾಡಿ ಗೆಲ್ಲುವ ಭರವಸೆ ನೀಡಿದ್ದಾರೆ. ಸಣ್ಣಪುಟ್ಟ ವ್ಯತ್ಯಾಸವಿದ್ದರೆ ಪರಿಹರಿಸಿಕೊಳ್ಳುತ್ತೇವೆ. ಪ್ರೀತಮ್ ಗೌಡ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.
-ಎಚ್.ಡಿ.ರೇವಣ್ಣ