Advertisement
ಮೂರು ವರ್ಷಗಳ ಹಿಂದೆ ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣದಲ್ಲಿ 205 ಮಳಿಗೆಗಳಿವೆ. ಹಂಚಿಕೆ ಪ್ರಕ್ರಿಯೆ ವಿಳಂಬದಿಂದಾಗಿ ಪಾಲಿಕೆ, ಬಿಡಿಎಗೆ ಬಿಡಿಗಾಸು ವರಮಾನ ಬರದಂತಾಗಿದೆ. ಇನ್ನೊಂದೆಡೆ ಮಳಿಗೆ ಹಂಚಿಕೆಯಾದರೂ ಮಳಿಗೆದಾರರು ಸ್ಥಳಾಂತರಗೊಳ್ಳದೆ ಬೀದಿ ಬದಿ ವ್ಯಾಪಾರ ಮುಂದುವರಿಸಿದ್ದಾರೆ. ಲೋಕಾಯುಕ್ತರ ಸೂಚನೆ ಹೊರತಾಗಿಯೂ ಪಾಲಿಕೆ ಕಾರ್ಯೋನ್ಮುಖವಾಗದಿರುವುದು ಚರ್ಚೆಗೆ ಕಾರಣವಾಗಿದೆ.
Related Articles
Advertisement
ಸಂಕೀರ್ಣದ ವೆಚ್ಚ ಪಾವತಿಸಿ: ಜಯನಗರದಲ್ಲಿ ಒಟ್ಟು 4 ಬ್ಲಾಕ್ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಬಿಬಿಎಂಪಿ, ಬಿಡಿಎ ನಡುವೆ ಒಪ್ಪಂದವಾಗಿತ್ತು. ಅದರಂತೆ ಕಟ್ಟಡ ನಿರ್ಮಾಣದ ವೆಚ್ಚವನ್ನು ಬಿಡಿಎ ಭರಿಸಿ, ಕಟ್ಟಡಗಳಿಂದ ಬರುವ ಬಾಡಿಗೆಯಿಂದ ಪಡೆಯುವುದು ಒಪ್ಪಂದದ ಸಾರವಾಗಿತ್ತು.
ಆದರೆ, ಸದ್ಯ ಪೂರ್ಣಗೊಂಡಿರುವ ವಾಣಿಜ್ಯ ಸಂಕೀರ್ಣದ ಮಳಿಗೆಗಳು ಹಂಚಿಕೆಯಾಗದ ಕಾರಣ ಮೂರು ವರ್ಷಗಳಿಂದ ಆದಾಯ ಬಾರದ ಹಿನ್ನೆಲೆಯಲ್ಲಿ ಬಿಡಿಎ ಆಯುಕ್ತರು ಕಟ್ಟಡ ನಿರ್ಮಾಣಕ್ಕೆ ತಗಲಿರುವ 56.63 ಕೋಟಿ ರೂ. ವೆಚ್ಚವನ್ನು ಪಾವತಿಸುವಂತೆ ಮತ್ತು ಉಳಿದ ಕಟ್ಟಡಗಳ ಕಾಮಗಾರಿಯನ್ನು ಪಾಲಿಕೆ ವತಿಯಿಂದಲೇ ಕೈಗೊಳ್ಳುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
ಮೂರು ಸಂಕೀರ್ಣ ನಿರ್ಮಾಣ: ಬಿಡಿಎ ಮತ್ತು ಬಿಬಿಎಂಪಿ ನಾಲ್ಕು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಿದ್ದವು. ಅದರಂತೆ ಇದೀಗ ಬ್ಲಾಕ್-1 ವಾಣಿಜ್ಯ ಸಂಕೀರ್ಣದ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಬ್ಲಾಕ್‌ಗಳಲ್ಲಿರುವ ವ್ಯಾಪಾರಿಗಳು ಬ್ಲಾಕ್ -1ರ ಮಳಿಗೆಗಳಿಗೆ ಸ್ಥಳಾಂತರಗೊಂಡರೆ, ಉಳಿದ ಮೂರು ಬ್ಲಾಕ್‌ಗಳಲ್ಲಿನ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ, ಸಂಕೀರ್ಣ ನಿರ್ಮಿಸಲು ಪಾಲಿಕೆಯ ಅಧಿಕಾರಿಗಳು ಚಿಂತಿಸಿದ್ದಾರೆ.
ಜಯನಗರ 4ನೇ ಬ್ಲಾಕ್ ವಾಣಿಜ್ಯ ಸಂಕೀರ್ಣ ವಶಕ್ಕೆ ಪಡೆದು ಮಳಿಗೆಗಳ ಹಂಚಿಕೆ ಮಾಡುವಂತೆ ಲೋಕಾಯುಕ್ತರು ನೀಡಿರುವ ಸೂಚನೆಯಲ್ಲಿನ ಅಂಶಗಳನ್ನು ಪಾಲಿಸಲು ಒಪ್ಪಿಗೆ ಪಡೆಯುವ ಸಂಬಂಧ ಪ್ರಸ್ತಾವನೆಯನ್ನು ಕೌನ್ಸಿಲ್ ಮುಂದಿಡಲಾಗಿದೆ. ಮೂರು ಬಾರಿ ಪ್ರಸ್ತಾವನೆಯನ್ನು ಸಭೆಯ ಮುಂದಿಡಲಾಗಿದ್ದು, ಈ ವಿಷಯದ ಕುರಿತು ಚರ್ಚೆಯಾಗಿಲ್ಲ.-ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ * ವೆಂ. ಸುನೀಲ್ ಕುಮಾರ್