ಮಂಗಳೂರು: ಸರಕಾರದ ನೇತೃತ್ವದಲ್ಲಿ ನ.17 ಹಾಗೂ ನ.18ರಂದು ನಡೆಯುವ ಬಹು ನಿರೀಕ್ಷಿತ ಪಿಲಿಕುಳ ಕಂಬಳ ಹಿನ್ನೆಲೆಯಲ್ಲಿ ಸೋಮವಾರ ಕಂಬಳ ಕರೆಯ ಮಹತ್ವದ ಪರಿಶೀಲನೆ ಸಭೆ ಹಾಗೂ ಪೂರ್ವಸಿದ್ಧತೆಯ ಅವ ಲೋಕನ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಪ್ರಮುಖರು ಪಿಲಿಕುಳ ಕಂಬಳ ಕರೆಗೆ ಭೇಟಿ ನೀಡಿ ಕೈಗೊಳ್ಳಬೇಕಾದ ಸೌಲಭ್ಯಗಳು ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದರು.
ಕಂಬಳದ ಕರೆ ಪುನರ್ ನವೀಕರಣ ಬಹುತೇಕ ಅಂತಿಮಗೊಂಡಿದೆ. ಕೋಣಗಳಿಗೆ ಬೇಕಾದ ಸೌಲಭ್ಯಗಳು, ಕಂಬಳ ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ಬೇಕಾದ ಅಗತ್ಯ ಮೂಲ ಸೌಲಭ್ಯಗಳನ್ನು ನಿರ್ಮಿಸುವ ಬಗ್ಗೆ ಪರಿಶೀಲಿಸಲಾಯಿತು.
ಜಿಲ್ಲಾಧಿಕಾರಿ ಮಾತನಾಡಿ, ಪಿಲಿಕುಲ ನಿಸರ್ಗಧಾಮ ಪ್ರಾಧಿಕಾರದ ಆಯುಕ್ತರು ಕಂಬಳ ಸಿದ್ಧತೆ ಗಳ ಮೇಲ್ವಿಚಾರಣೆ ವಹಿಸಬೇಕು. ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಯನ್ನು ಮಂಗಳೂರು ಮಹಾನಗರ ಪಾಲಿಕೆಯಿಂದ ಕಲ್ಪಿಸಬೇಕು. ವಿದ್ಯುತ್, ಶೌಚಾಲಯ ಮತ್ತಿತರ ವ್ಯವಸ್ಥೆಗಳನ್ನು ಪಿಲಿಕುಳ ಪ್ರಾಧಿಕಾರವು ಒದಗಿಸಬೇಕು ಎಂದು ಸೂಚಿಸಿದರು.
ಮಂಗಳೂರು ಪಾಲಿಕೆ ಆಯುಕ್ತ ಸಿ.ಎಲ್ ಆನಂದ್, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ರಶ್ಮಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿ’ ಸೋಜಾ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಪ್ರಮುಖರಾದ ನವೀನ್‌ಚಂದ್ರ ಆಳ್ವ, ಪ್ರಶಾಂತ್ ಕಾಜವ ಮುಂತಾದವರು ಉಪಸ್ಥಿತರಿದ್ದರು.
ಪಿಲಿಕುಳ ಕಂಬಳ ಕೂಟದಲ್ಲಿ ಸುಮಾರು 150ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸಲಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಂಬಳದ ಹಿನ್ನೆಲೆಯಲ್ಲಿ ಪ್ರವೇಶ ದ್ವಾರ ನಿರ್ಮಾಣ, ಗುತ್ತು ಮನೆಯ ವಿದ್ಯುತ್ ಅಲಂಕಾರ ಮತ್ತಿತರ ವ್ಯವಸ್ಥೆಗಳನ್ನು ಮಾಡಬೇಕು. ಜನಸಂದಣಿಯನ್ನು ನಿರ್ವಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.