Advertisement

Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು

03:19 PM Nov 08, 2024 | Team Udayavani |

ಮಹಾನಗರ: ನಗರದ ವಿವಿಧ ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಸ್ಥಳ ಸೂಚನ ಫಲಕಗಳು ನಿಷ್ಪ್ರಯೋಜಕವಾಗಿದೆ. ಕೆಲವು ಹುಲ್ಲು ಪೊದೆಯಿಂದ ಆವೃತವಾಗಿದ್ದರೆ, ಬಹುತೇಕ ಬೋರ್ಡ್‌ಗಳಿಗೆ ಪಾಚಿ ಹಿಡಿದಿದ್ದು, ಏನು ಬರೆದಿದೆ ಎಂದು ಕಾಣಿಸುತ್ತಿಲ್ಲ. ಇದರಿಂದಾಗಿ ವಾಹನಗಳಲ್ಲಿ ಸಾಗುವವರು ಫಲಕಗಳ ಬದಲು ಸ್ಥಳೀಯರ ಸಹಕಾರ ಪಡೆಯುವ ಪರಿಸ್ಥಿತಿ ಇದೆ.

Advertisement

ಪಾಲಿಕೆ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶಕ್ಕೆ ನಗರದ ವಿವಿಧ ಜಂಕ್ಷನ್‌ಗಳಲ್ಲಿ ನಾಲ್ಕು ವರ್ಷಗಳ ಹಿಂದೆ ಇಂತಹ ದಾರಿ ಸೂಚನ ಫಲಕಗಳನ್ನು ಅಳವಡಿಸಲಾಗಿದೆ.

ಬೋರ್ಡ್‌ಗಳು ಯಾವ ಸ್ಥಿತಿಯಲ್ಲಿವೆ?
ಪ್ರಸ್ತುತ ಕೆಲವು ಬೋರ್ಡ್‌ಗಳು ಮಳೆಗೆ ಪಾಚಿ ಕಟ್ಟಿದ್ದು, ಬಿಸಿಲಿನ ಹೊಡೆತಕ್ಕೆ ಸಿಲುಕಿ ಬಣ್ಣವೂ ಮಾಸಿದೆ. ನಗರ ಭಾಗಕ್ಕಿಂತ ಹೊರಗಿರುವ ಪ್ರದೇಶದಲ್ಲಿ ಬೊರ್ಡ್‌ಗಳು ಹುಲ್ಲು ಪೊದೆಗಳಿಂದ ಆವೃತವಾಗಿದ್ದು, ಬೋರ್ಡ್‌ನಲ್ಲಿ ಏನು ಬರೆದಿದೆ ಎಂದು ಯಾರಿಗೂ ಕಾಣಿಸುವುದಿಲ್ಲ. ಕೆಲವು ಕಡೆಗಳಲ್ಲಿ ಬೋರ್ಡ್‌ ಅಳವಡಿಸಲಾಗಿರುವ ಕಂಬಗಳೂ ತುಕ್ಕು ಹಿಡಿದಿದ್ದು, ಮುಂದಿನ ದಿನಗಳಲ್ಲಿ ಮುರಿದು ಬೀಳುವ ಪರಿಸ್ಥಿತಿಯಲ್ಲಿದೆ.

ಶೀಘ್ರ ಸರಿಪಡಿಸಲಾಗುವುದು
ನಗರದಲ್ಲಿ ವಿವಿಧೆಡೆ ಸ್ಥಳ ಸೂಚಕ ಫಲಕಗಳು ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿರುವ ಕುರಿತಂತೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಎಲ್ಲೆಲ್ಲ ಹಾಳಾಗಿದೆ ಅವುಗಳನ್ನು ಶೀಘ್ರ ಇವುಗಳನ್ನು ಸರಿಪಡಿಸಿ ಮತ್ತೆ ಅಳವಡಿಸಲಾಗುವುದು.
– ಮನೋಜ್‌ ಕುಮಾರ್‌ ಮೇಯರ್‌

ನೀಲಿ ಫಲಕದಲ್ಲಿ ಬಳಿ ಬಣ್ಣದ ದಪ್ಪ ಅಕ್ಷರಗಳಲ್ಲಿ ಸ್ಥಳ ಹಾಗೂ ಬಾಣದ ಗುರುತುಗಳನ್ನು ಹಾಕಿ ದಾರಿ ಸೂಚನೆ, ಲೋಗೋ ಸಹಿತ ಮಂಗಳೂರು ಮಹಾನಗರ ಪಾಲಿಕೆ ಎನ್ನುವುದನ್ನೂ ಬರೆಯಾಗಿತ್ತು. ಆರಂಭದಲ್ಲಿ ಉತ್ಸಾಹದಿಂದ ಅಳವಡಿಸ ಲಾಗಿತ್ತಾದರೂ, ಅನಂತರದ ದಿನಗಳಲ್ಲಿ ಈ ಬೋರ್ಡ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಕಡೆಗಣಿಸಲಾಗಿದೆ. ಸದ್ಯ ಕೆಲವು ಜಂಕ್ಷನ್‌ಗಳಲ್ಲಿ ಮಾತ್ರ ಬೋರ್ಡ್‌ ಗಳು ಸರಿಯಾಗಿದ್ದು, ಉಳಿದಡೆಗಳಲ್ಲಿ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ನಗರದ ವಿವಿಧ ಜಂಕ್ಷನ್‌ಗಳಲ್ಲಿ ರಸ್ತೆ ಅಭಿವೃದ್ಧಿ ಕಾರಣಕ್ಕೆ ಅಳವಡಿಸಿದ್ದ ಬೋರ್ಡ್ ಗಳನ್ನು ತೆರವುಗೊಳಿಸಿ ಫುಟ್‌ಪಾತ್‌ ಗಳಲ್ಲಿ ಇರಿಸಲಾಗಿತ್ತು. ಬಳಿಕ ಅವುಗಳನ್ನು ಯಥಾಸ್ಥಿತಿಯಲ್ಲಿ ಇರಿಸದೆ ಕೆಲವನ್ನು ಅಲ್ಲೇ ಫುಟ್‌ಪಾತ್‌ನಲ್ಲಿ ಇಟ್ಟು ಹಾಳಾಗಿವೆ. ತುಕ್ಕು ಹಿಡಿದು ಮತ್ತೆ ಬಳಕೆ ಮಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

Advertisement

ಲಕ್ಷಾಂತರ ರೂ.ವೆಚ್ಚ ಮಾಡಿ ಅಳವಡಿ ಸಿರುವ ಇಂತಹ ಫಲಕಗಳು ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಉಪಯೋಗ ವಾಗುವ ಬದಲು ನಿಷ್ಪ್ರಯೋಜಕವಾಗಿರುವುದು ಖೇದಕರ. ಈ ಕುರಿತು, ಮಹಾನಗರ ಪಾಲಿಕೆ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next