Advertisement

“ಕ್ರಿಕೆಟ್‌ ದೇವರಿ’ಗೂ ಗದ್ದಲದ ಅಡ್ಡಿ

07:00 AM Dec 22, 2017 | Harsha Rao |

ಹೊಸದಿಲ್ಲಿ: ರಾಜ್ಯಸಭೆಯ ನಾಮ ನಿರ್ದೇಶನಗೊಂಡ ಸದಸ್ಯ, ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರು ಸದನದಲ್ಲಿ ಮಾಡುವ ಭಾಷಣ ಕೇಳಲು ಉತ್ಸುಕರಾಗಿದ್ದವರಿಗೆ ಗುರುವಾರ ನಿರಾಶೆಯಾಗಿದೆ. ತೆಂಡೂಲ್ಕರ್‌ ಅವರು ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮಾತನಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲೇ ಇಲ್ಲ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಅವರ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್‌ ಸದಸ್ಯರು ಪಟ್ಟು ಹಿಡಿದು, ಗದ್ದಲ ಮುಂದುವರಿಸಿದ್ದರಿಂದ ಕ್ರಿಕೆಟ್‌ ದೇವರಿಗೆ ಮಾತನಾಡುವ ಅವಕಾಶ ತಪ್ಪಿ ಹೋಗಿದೆ. ಬುಧವಾರವೇ ನಿಗದಿಯಾಗಿದ್ದಂತೆ ಕ್ರಿಕೆಟ್‌ ದೇವರಿಗೆ ಮಾತನಾಡಲು ಗುರುವಾರ ಅವಕಾಶ ನೀಡಲಾಗಿತ್ತು.  ಅಪರಾಹ್ನ 2 ಗಂಟೆ ವೇಳೆಗೆ ಸದನ ಸಮಾವೇಶಗೊಂಡಿತ್ತು. ಇನ್ನೇನು ತೆಂಡೂಲ್ಕರ್‌ ಮಾತನಾಡಬೇಕು ಎನ್ನುವಷ್ಟರಲ್ಲಿ ಕಾಂಗ್ರೆಸ್‌ ಸಂಸದರು ಗದ್ದಲ ಎಬ್ಬಿಸಲಾರಂಭಿಸಿದರು.

ಈ ವೇಳೆ ಮಾತನಾಡಿದ ಸಭಾಪತಿ ವೆಂಕಯ್ಯ ನಾಯ್ಡು “ಭಾರತರತ್ನ, ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಮಾತನಾಡ ಲಿದ್ದಾರೆ. ಎಲ್ಲರೂ ಶಾಂತವಾಗಿರಬೇಕು’ ಎಂದು ಕಾಂಗ್ರೆಸ್‌ ಸದಸ್ಯರಲ್ಲಿ ಮನವಿ ಮಾಡಿಕೊಂಡರೂ ಫ‌ಲ ನೀಡ‌ಲಿಲ್ಲ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಸದಸ್ಯರು “ದೇಶ್‌ ಕೋ ಗುರ್ಮಾಹ್‌ ಕರ್ನಾ ಬಂದ್‌ ಕರೋ’ (ದೇಶಕ್ಕೆ ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಿ) ಎಂದು ಘೋಷಣೆ ಕೂಗಲಾರಂಭಿಸಿದರು. “ಇದರಿಂದ ನಿಮ್ಮ ಗಂಟಲಿಗೆ ನೋವು, ಕೆಟ್ಟ ಹೆಸರು ಬಂದೀತು’ ಎಂದು ನಾಯ್ಡು ಛೇಡಿಸಿದರೂ ಫ‌ಲ ನೀಡಲಿಲ್ಲ.

ಗದ್ದಲ ಮುಂದುವರಿಯುತ್ತಿದ್ದರೂ ಸಭಾಪತಿ ತೆಂಡೂಲ್ಕರ್‌ಗೆ ಮಾತನಾಡಲು ಸೂಚಿಸಿದರು. ಆದರೆ ತಮ್ಮ ಸ್ಥಾನದಿಂದ ಎದ್ದುನಿಂತು ಮಾತನಾಡಲು ಮುಂದಾದರೂ ಗದ್ದಲ ಅವರಿಗೆ ಅವಕಾಶ ನೀಡಲಿಲ್ಲ. ಅಂತಿಮವಾಗಿ ಅವರು ಕುಳಿತುಕೊಳ್ಳಬೇಕಾಯಿತು. ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಲೋಕಸಭೆಯಲ್ಲಿಯೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗದ್ದಲ ಉಂಟಾಗಿದೆ. ಇದರ ನಡುವೆಯೇ ನ್ಯಾಯಮೂರ್ತಿಗಳ ವೇತನ ಮತ್ತು ಭತ್ತೆ ಏರಿಕೆ ಮಸೂದೆ ಮಂಡಿಸಲಾಯಿತು. ಇದೇ ವೇಳೆ ಸ್ವತ್ಛತಾ ಸಹಾಯ ನಿಧಿಗಾಗಿ ಕಾರ್ಪೊರೇಟ್‌ ಸಂಸ್ಥೆ ಗಳಿಂದ 666 ಕೋಟಿ ರೂ. ಸಂಗ್ರಹವಾಗಿದೆ ಎಂದು ಸರಕಾರ ಮಾಹಿತಿ ನೀಡಿತು.

ಇಂದು ತ್ರಿವಳಿ ತಲಾಖ್‌ ನಿಷೇಧ ಮಸೂದೆ ಮಂಡನೆ
ತ್ರಿವಳಿ ತಲಾಖ್‌ ನಿಷೇಧ ಮಸೂದೆಯನ್ನು ಲೋಕಸಭೆಯಲ್ಲಿ ಶುಕ್ರವಾರ ಮಂಡಿ ಸಲಾಗುತ್ತದೆ. ಡಿ.15ರಂದು ನಡೆದಿದ್ದ ಕೇಂದ್ರ ಸಂಪುಟ ಸಭೆಯಲ್ಲಿ ಮುಸ್ಲಿಂ ಮಹಿಳೆಯರ (ಮದುವೆ ಹಕ್ಕಿನ ರಕ್ಷಣೆ) ಮಸೂದೆ 2017ಕ್ಕೆ ಅನು ಮೋದನೆ ನೀಡಲಾಗಿತ್ತು. ತ್ರಿವಳಿ ತಲಾಖ್‌ ನಿಷೇಧಿಸಿ ಸುಪ್ರೀಂ ಕೋರ್ಟ್‌ ಆಗಸ್ಟ್‌ನಲ್ಲಿ  ತೀರ್ಪು ನೀಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next