ಹೊಸದಿಲ್ಲಿ : ಲಿಂಗಾಂತರಿ ವರ್ಗದಡಿ ಪ್ಯಾನ್ ಕಾರ್ಡ್ ಬಯಸಿ ಅರ್ಜಿ ಹಾಕುವವರು ಅಥವಾ ಈಗಿರುವ ಪ್ಯಾನ್ ಕಾರ್ಡನ್ನು ಆ ವರ್ಗಕ್ಕೆ ಬದಲಾಯಿಸ ಬಯಸುವವರು ‘ಪುರುಷ ಅಥವಾ ಮಹಿಳೆ ಎರಡೂ ಅಲ್ಲದ’ ತಮ್ಮ ಲಿಂಗಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಪತ್ರಗಳನ್ನು ಸಲ್ಲಿಸಬೇಕಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಇಂದು ಬುಧವಾರ ತಿಳಿಸಿದೆ.
ತಮ್ಮ ತೆರಿಗೆ ಸಂಬಂಧಿತ ವ್ಯವಹಾರಗಳಿಗೆ ಸಂಬಂಧಿಸಿ ಪ್ಯಾನ್ ಕಾರ್ಡ್ ಪಡೆಯಬಯಸುವ ಲಿಂಗಾಂತರಿಗಳನ್ನು ಸ್ವತಂತ್ರ ವರ್ಗದವರನ್ನಾಗಿ ಪರಿಗಣಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆ ಕಳೆದ ಎಪ್ರಿಲ್ 10ರಂದು ಸಂಬಂಧಿಸಿದ ಐಟಿ ನಿಯಮಗಳಿಗೆ ತಿದ್ದುಪಡಿ ಮಾಡಿದೆ.
ಈ ವರೆಗೆ ಪುರುಷರು ಮತ್ತು ಮಹಿಳೆಯರಿಗೆ ಮಾತ್ರವೇ ತಮ್ಮ ಲಿಂಗ ವರ್ಗದ ಅರ್ಜಿಯನ್ನು ಪಡೆಯುವುದಕ್ಕೆ ಅವಕಾಶವಿತ್ತು.
ಲಿಂಗಾಂತರಿಗಳು ತಾವು ಪ್ಯಾನ್ ಕಾರ್ಡ್ ಪಡೆಯುವಲ್ಲಿ ಎದುರಿಸುವ ಸಮಸ್ಯೆಗಳನ್ನು ಅಥವಾ ತಮ್ಮ ಬಳಿ ಇರುವ ಹಳೆಯ ಪ್ಯಾನ್ ಕಾರ್ಡ್‌ಗಳನ್ನು ವ್ಯವಹಾರಕ್ಕೆ ಬಳಸುವಲ್ಲಿ ತಮಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಆದಾಯ ತೆರಿಗೆ ಇಲಾಖೆಯಲ್ಲಿ ಮನವಿ ಮೂಲಕ ನಿವೇದಿಸಿಕೊಂಡಿರುವುದನ್ನು ಪರಿಗಣಿಸಿ ಅವರಿಗಾಗಿ ಸ್ವತಂತ್ರ ವರ್ಗವನ್ನು ರೂಪಿಸಲು ಐಟಿ ನಿಯಮಗಳಿಗೆ ಸಿಬಿಡಿಟಿ ತಿದ್ದುಪಡಿಯನ್ನು ತಂದಿತು.
ಹತ್ತು ಅಂಕಗಳ ಪ್ಯಾನ್ ಕಾರ್ಡ್ ಎನ್ನುವುದು ಐಟಿ ಇಲಾಖೆಯು ವ್ಯಕ್ತಿಗಳಿಗೆ ನೀಡುವ ಆಲ್ಫಾನ್ಯೂಮರಿಕ್ ಕಾರ್ಡ್ ಆಗಿರುತ್ತದೆ. ನ್ಯಾಶನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಡೆಡ್ (ಎನ್‌ಎಸ್‌ಡಿಎಲ್) ಮತ್ತು ಯುಟಿಐ ಇನ್‌ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಆ್ಯಂಡ್ ಸರ್ವಿಸಸ್ ಲಿಮಿಟೆಡ್ (ಯುಟಿಐಟಿಎಸ್‌ಎಲ್) ಗೆ ಐಟಿಡಿ ಪರವಾಗಿ ಪ್ಯಾನ್ ಕಾರ್ಡ್ ಸಿದ್ಧಪಡಿಸಿ ನೀಡುವ ಹೊಣೆಗಾರಿಕೆಯನ್ನು ವಹಿಸಿಕೊಡಲಾಗಿದೆ.