ಬದುಕಿನ ಹಾದಿಯಲ್ಲಿ ನಮ್ಮ ಕುರಿತಾಗಿ ನಮಗೆ ಇರುವ ನಂಬಿಕೆಗಳು ಅತ್ಯಂತ ಪ್ರಮುಖ ಪಾತ್ರವನ್ನು ನಿಭಾಯಿಸುತ್ತವೆ. ನಮ್ಮ ಬದುಕಿಗೆ ನಾವಿಕನಂತೆ ನಂಬಿಕೆಗೆಳು ದಾರಿ ತೋರಬಲ್ಲವು. ಕೈ ಹಿಡಿದು ನಡೆಸಬಲ್ಲವು. ನಂಬಿಕೆಯ ತಳಹದಿಯ ಮೇಲೆಯೇ ಬದುಕು ನಿರ್ಮಿತವಾಗಿದೆ ಎಂಬುದು ಬಹುತೇಕರ ಅಭಿಪ್ರಾಯ. ಅದು ಸತ್ಯವೂ ಕೂಡ. ನಂಬಿಕೆಗಳಿಲ್ಲದ ಜೀವನ ನಿಜಕ್ಕೂ ದುಸ್ತರ. ನಂಬಿಕೆ ಇಲ್ಲದ ಬದುಕನ್ನು ಊಹಿಸಿಕೊಳ್ಳುವುದು ಕೂಡ ಅಸಾಧ್ಯ. ಆದರೆ ನಮ್ಮ ನಂಬಿಕೆಯೇ ಅಂತಿಮ ಎಂಬ ನಮ್ಮ ಅಹಂ ಮತ್ತು ನವೀಕರಣಗೊಳ್ಳದ ನಂಬಿಕೆಗಳು ಬದುಕಿನಲ್ಲಿ ಕೆಲವು ಬಾರಿ ನಮಗೆ ಅಪಾಯಕಾರಿಯಾಗಬಲ್ಲದು. ಕೆಲವು ಬಾರಿ ನಮ್ಮನ್ನು ಬಲಿಪಶುಗಳನ್ನಾಗಿಸುವ ಸಾಧ್ಯತೆಯನ್ನು ಕೂಡ ಅಲ್ಲಗಳೆಯಲಾಗುವುದಿಲ್ಲ.
ಹುಟ್ಟು ಕುರುಡನೊಬ್ಬ ತನ್ನ ಕಷ್ಟ ಕಾರ್ಪಣ್ಯಗಳ ಕುರಿತು ಚಿಂತಿತನಾಗಿದ್ದ. ಅವನ ಸ್ನೇಹಿತರೊಬ್ಬರ ಪಕ್ಕದ ಊರಲ್ಲಿಯೇ ಇರುವ ಸಂತರೊಬ್ಬರನ್ನು ಭೇಟಿಯಾಗಲು ತಿಳಿಸಿದರು. ಒಂದು ದಿನ ಕುರುಡ ಸಂತರ ಹತ್ತಿರ ಹೋಗಿ ತನ್ನೆಲ್ಲ ನೋವುಗಳನ್ನು ತೋಡಿಕೊಂಡ. ಸಂತರು ಒಂದಷ್ಟು ಸಮಾಲೋಚಿಸಿ ಪರಿಹಾರ ಸೂಚಿಸಿದರು. ತನ್ನ ಊರಿಗೆ ಮರಳಬೇಕನ್ನುವಷ್ಟರಲ್ಲಿ ಸಂಜೆಯಾಯಿತು. ನೀನು ನಿನ್ನ ಊರು ಮುಟ್ಟಲು ಕತ್ತಲಾಗುತ್ತದೆ, ಇಲ್ಲಿಯೇ ಇದ್ದು ಬೆಳಿಗ್ಗೆ ಹೋಗಲು ಸಂತರು ತಿಳಿಸಿದರೂ ಇವರು ಊರಿಗೆ ಹೊರಡಲು ಸಿದ್ಧನಾದ. ಸಂತರ ಹತ್ತಿರ ನಮಸ್ಕರಿಸಿ ಅಪ್ಪಣೆ ಕೇಳಿದ.
ಸಂತರು ಅವನ ಕೈಗೊಂದು ಲಾಟೀನು ನೀಡಿ ಇದನ್ನು ನಿನ್ನ ಜೊತೆ ತೆಗೆದುಕೊಂಡು ಹೋಗು ದಾರಿಯಲ್ಲಿ ನಿನಗೆ ಸಹಾಯಕವಾಗಬಲ್ಲದು ಎಂದರು. ಕುರುಡ ನಕ್ಕು ಇದೇನು ಗುರುಗಳೇ ನನಗೆ ಅಪಹಾಸ್ಯ ಮಾಡುತ್ತಿದ್ದೀರಾ? ನಾನು ಹುಟ್ಟು ಕುರುಡ, ನನಗೆ ಕಣ್ಣು ಕಾಣಿಸದು ಎಂಬುದು ತಮಗೂ ತಿಳಿದ ವಿಷಯ. ಇದರಿಂದ ನನಗೆ ಯಾವ ಉಪಯೋಗವಾಗದು ಎಂದ. ನನಗೂ ಗೊತ್ತು, ಇದರಿಂದ ನಿನಗೆ ಯಾವುದೇ ಉಪಯೋಗವಾಗದೇ ಹೋದರೂ ಕತ್ತಲಿನಲ್ಲಿ ನಿನ್ನ ಎದುರಿಗೆ ಬರುವ ವ್ಯಕ್ತಿಗಾದರೂ ನೀನು ಕಾಣಿಸುವದರಿಂದ ಅವರು ಪಕ್ಕಕ್ಕೆ ಸರಿದು ಹೋಗಬಲ್ಲರು. ಇದರಿಂದ ನಿನಗೆ ಆಗುವ ಅಪಾಯ ತಪ್ಪುತ್ತದೆ ಎಂದರು.
ಕುರುಡನಿಗೂ ಅವರು ಹೇಳಿದ್ದು ಸರಿ ಎನಿಸಿತು. ತನ್ನೊಂದಿಗೆ ಲಾಟೀನು ಹಿಡಿದು ತನ್ನ ಊರಿಗೆ ಹೊರಟ. ಸ್ವಲ್ಪ ದೂರ ಸಾಗಿರಬೇಕು. ಅಷ್ಟರಲ್ಲಿಯೇ ಒಬ್ಬ ವ್ಯಕ್ತಿ ಕುರುಡನಿಗೆ ಡಿಕ್ಕಿ ಹೊಡೆದ. ಕುರುಡನಿಗೆ ಕೋಪ ಬಂದಿತು. ಅವನು ಸಿಟ್ಟಿನಿಂದ ಇದೇನು, ನಿನಗೆ ನಾಚಿಕೆಯಾಗುವುದಿಲ್ಲವೇ? ನಿನಗೆ ಕಣ್ಣು ಕಾಣಿಸುವುದಿಲ್ಲವೇ? ನೀನು ಕುರುಡನೇ? ನಾನಂತೂ ಕುರುಡ. ನನಗೆ ಕಣ್ಣು ಕಾಣಿಸದಿದ್ದರೂ ನಾನು ಮತ್ತೂಬ್ಬರಿಗೆ ನಾನು ಕಾಣಿಸುವಂತಾಗಲಿ ಎಂದು ಲಾಟೀನು ಹಿಡಿದು ಹೋಗುತ್ತಿರುವೆ ಎಂದ. ದಯವಿಟ್ಟು ಕ್ಷಮಿಸಿ. ನಾನು ಕುರುಡನಲ್ಲ. ನೀವು ಲಾಟೀನು ಹಿಡಿದಿರುವುದು ನನಗೆ ಗೊತ್ತಾಗಲಿಲ್ಲ. ಅದು ಆರಿ ಹೋಗಿದೆ. ಕತ್ತಲಿನಲ್ಲಿ ನೀವು ಕಾಣಲಿಲ್ಲ. ನನ್ನಿಂದಾದ ಪ್ರಮಾದಕ್ಕೆ ಮತ್ತೂಮ್ಮೆ ಕ್ಷಮೆ ಕೇಳುತ್ತೇನೆ ಎಂದ ದಾರಿಹೋಕ. ಕುರಡುನಿಗೆ ತನ್ನ ತಪ್ಪಿನ ಅರಿವಾಗಿತ್ತು.
ತನ್ನ ಕೈಯಲ್ಲಿ ಲಾಟೀನು ಇದೆ ಎಂಬ ನಂಬಿಕೆ ಅವನು ಪ್ರತಿದಿನ ಬಹು ಎಚ್ಚರಿಕೆಯಿಂದ ನಡೆಯುವದನ್ನು ಮರೆಮಾಚಿತ್ತು. ಲಾಟೀನು ಇಲ್ಲದೆಯೇ ತುಂಬ ಎಚ್ಚರಿಕೆಯಿಂದ ನಡೆಯುತ್ತ ಎಂದೂ ಡಿಕ್ಕಿ ಹೊಡೆಸಿಕೊಳ್ಳದ ಕುರುಡನನ್ನು ಅಪಾಯಕ್ಕೆ ಸಿಲುಕಿಯಾಗಿತ್ತು. ಹೀಗೆ ಬದುಕಿನಲ್ಲಿ ಕೆಲವು ಬಾರಿ ನಮ್ಮ ಕುರಿತಾಗಿ ಇರುವ ಅತಿಯಾದ ನಂಬಿಕೆಗಳು ನಮಗೆ ನಮ್ಮನ್ನು ನಿಯಂತ್ರಿಸುವುದರಿಂದ ನಾವು ದಾರಿ ತಪ್ಪುತ್ತೇವೆ. ಭ್ರಾಮಕತೆಗೆ ಒಳಗಾಗಿ ನಾನು ಮಾಡುತ್ತಿರುವುದೆಲ್ಲವೂ ಸರಿ ಎಂದು ಭಾವಿಸುತ್ತೇವೆ. ಇದರಿಂದ ತೊಂದರೆಗೆ ಒಳಗಾಗುತ್ತೇವೆ. ನಂಬಿಕೆಗಳಿಗೆ ಅದರದೇ ಆದ ನಿಯಮವಿದೆ. ನಂಬಿಕೆಗಳು ಕೂಡ ಚಿರಾಯುವಲ್ಲ. ಅವುಗಳಿಗೂ ಸಾವಿದೆ ಎಂಬುದನ್ನು ನಾವು ಗಮನಿಸಬೇಕು. ನಂಬಿಕೆಗಳು ಆಗಾಗ ನವೀಕರಣಗೊಳ್ಳಬೇಕು. ಚಲನಶೀಲತೆಯನ್ನು ರೂಢಿಸಿಕೊಳ್ಳಬೇಕು. ಅವು ಸಾಂದರ್ಭಿಕತೆಗೆ ತಕ್ಕಂತೆ ಪುನರ್ ವ್ಯಾಖ್ಯಾನಗೊಳ್ಳಬೇಕು. ನಂಬಿಕೆಗಳನ್ನು ಸಂರಕ್ಷಿಸಲು ನಿತ್ಯವೂ ನಾವು ಹೊಸತನಗಳತ್ತ ತುಡಿಯಬೇಕು ಇದು ಬದುಕನ್ನು ಇನ್ನಷ್ಟು ಸುಂದರಗೊಳಿಸಬಲ್ಲದು.
ಮಹಾದೇವ ಬಸರಕೋಡ
ಅಮೀನಗಡ