Advertisement

ಬಾಧ್ಯಸ ಕಾಂಪೌಂಡ್‌ಗೆ ಒಂದು ತಿಂಗಳಿನಿಂದ ನೀರಿಲ್ಲ

12:12 PM Apr 01, 2022 | Team Udayavani |

ಉಡುಪಿ: ನಗರದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ನಗರ ಸಭೆ ಆಡಳಿತ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

Advertisement

ನಗರದ ಹೃದಯ ಭಾಗದಲ್ಲಿರುವ ಪಿಪಿಸಿ ಬಳಿಯ ಓಣಿ ರಸ್ತೆ ಭಾಧ್ಯಸ ಕಾಂಪೌಂಡ್‌ನ‌ಲ್ಲಿ ಕಳೆದ ಫೆ. 23 ರಿಂದ ನೀರು ಪೂರೈಕೆಯಾಗುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ. ಈ ಭಾಗದಲ್ಲಿ 15 ಮನೆಗಳಿದ್ದು, ಬಹುತೇಕ ಹೆಚ್ಚಾಗಿ ಹಿರಿಯ ನಾಗರಿಕರೆ ವಾಸವಿದ್ದಾರೆ. ನೀರಿನ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳಿಂದ ಹಿಡಿದು ಪೌರಾಯುಕ್ತರವರೆಗೆ ದೂರು ನೀಡಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ದೂರು ನೀಡಿದಾಗಲೆಲ್ಲ ನಗರಸಭೆ ಸಿಬಂದಿ ಪರಿಶೀಲಿಸಿ ಹೋಗುತ್ತಾರೆ. ಆದರೆ ನೀರು ಮಾತ್ರ ಬರುತ್ತಿಲ್ಲ. ದಿನಕ್ಕೆ ಒಂದು ಗಂಟೆಯಾದರೂ ನಮಗೆ ನೀರು ಕೊಡಿ ಎನ್ನುತ್ತಿದ್ದಾರೆ ಇಲ್ಲಿನ ವೃದ್ಧ ನಾಗರಿಕರು.

ಬಾವಿ ಇದ್ದರೂ ಸಂಕಷ್ಟ ತಪ್ಪಿಲ್ಲ

ಈ ಕಾಂಪೌಂಡ್‌ನ‌ಲ್ಲಿ ಸಾರ್ವಜನಿಕ ಬಾವಿ ನಿರ್ಮಿಸಲಾಗಿದ್ದು, ಇದಕ್ಕೆ ಕೆಲವರು 4 ಪಂಪ್‌ಸೆಟ್‌ಗಳನ್ನು ಖಾಸಗಿಯಾಗಿಯೂ ಅಳವಡಿಸಿಕೊಂಡಿದ್ದಾರೆ. ಇದೇ ರೀತಿ ಎಲ್ಲರೂ ಅಳವಡಿಸಿಕೊಂಡಲ್ಲಿ ನೀರು ಸಂಪೂರ್ಣ ಬತ್ತಿ ಹೋಗುತ್ತದೆ. ಸಾಕಷ್ಟು ಅಡಿ ಆಳದಲ್ಲಿ ನೀರಿದ್ದು, ವೃದ್ಧ ಮಹಿಳೆ ಯರು ಬಾವಿಯಿಂದ ನೀರನ್ನು ಸೇದುವುದು ತೀರ ಕಷ್ಟಕರವಾಗಿದೆ. “ನಮ್ಮಿಂದ ಸಾಧ್ಯವಾಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಸ್ಥಳೀಯರು. ನೀರಿನ ಟ್ಯಾಂಕರ್‌ ಮೂಲಕ ಇಲ್ಲಿಗೆ ನೀರು ಪೂರೈಕೆ ಮಾಡಲೂ ಸಾಧ್ಯವಿಲ್ಲ. ಈ ಕಾಂಪೌಂಡ್‌ಗೆ ಟ್ಯಾಂಕರ್‌ ನೀರು ಬರಲು ದಾರಿ ಇಲ್ಲ.

ಸಂಕಷ್ಟಕ್ಕೆ ಸಿಲುಕಿದ್ದೇವೆ

Advertisement

ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರಿಗೂ ದೂರು ನೀಡಿದ್ದೇವೆ. ಆದರೆ ಇಲ್ಲಿವರೆಗೂ ಸಮಸ್ಯೆಯ ಮೂಲ ಹುಡುಕಿ ಸರಿಪಡಿಸುವ ಕೆಲಸವಾಗಿಲ್ಲ. ಒಂದು ತಿಂಗಳು ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. -ಮುಂಡಾಶಿ ಶ್ವೇತಾ ಪೈ

ಆಳದಲ್ಲಿ ನೀರು

ಇಲ್ಲಿ ಹಳೆಯ ಕಾಲದ ಬಾವಿ ಇದ್ದು, ಸಾಕಷ್ಟು ಅಡಿ ಆಳದಲ್ಲಿ ನೀರು ಇದೆ. ಸಾಕಷ್ಟು ಮನೆಗಳಲ್ಲಿ ಹಿರಿಯರೆ ಹೆಚ್ಚು ವಾಸ ಇರುವುದು. ಬಾವಿ ನೀರು ಸೇದಲು ಕಷ್ಟ ಪಡುತ್ತಿದ್ದೇವೆ. ದಿನಕ್ಕೆ ಒಂದು ಗಂಟೆಯಾದರೂ ನೀರು ಸಿಕ್ಕರೆ ಸಾಕು. – ಶೋಭಾ ಕಾಮತ್‌

ಪರಿಹಾರ ಸಿಕ್ಕಿಲ್ಲ

ನಗರಸಭೆಗೆ ಇಲ್ಲಿವರೆಗೆ ಸಾಕಷ್ಟು ದೂರು ನೀಡಿದ್ದೇವೆ. ಆದರೂ ಪರಿಹಾರ ಸಿಕ್ಕಿಲ್ಲ. ಕಳೆದ 30 ದಿನಗಳಿಂದ ನೀರಿಲ್ಲದೆ ಇಲ್ಲಿನ ನಿವಾಸಿಗಳು ತುಂಬಾನೆ ಕಷ್ಟ ಪಡುವಂತಾಗಿದೆ. ಇಲ್ಲಿಗೆ ಟ್ಯಾಂಕರ್‌ ನೀರನ್ನು ತರಿಸಲು ಸಾಧ್ಯವಿಲ್ಲ. -ಉಮೇಶ್‌

ಪರಿಶೀಲನೆ

ಪಿಪಿಸಿ ಬಳಿ ಬೇರೆಲ್ಲಿಯೂ ಸಮಸ್ಯೆ ಕಂಡು ಬಂದಿಲ್ಲ. ಬಾಧ್ಯಸ ಕಂಪೌಂಡ್‌ನ‌ ಕೆಲವು ಮನೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಪೈಪ್‌ಲೈನ್‌ ಬ್ಲಾಕ್‌ ಹಾಗಿರುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು. – ಯಶವಂತ್‌, ಎಇಇ, ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next