Advertisement

ಗೃಹಮಂಡಳಿ ನಿವೇಶನ ನಿರ್ಮಾಣಕ್ಕೆ ಜಾಗ ಸಿಗ್ತಿಲ್ಲ: ಸೋಮಣ್ಣ

10:46 AM Jun 16, 2020 | Team Udayavani |

ಹರಿಹರ: ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ನಿವೇಶನಕ್ಕೆ ರಾಜ್ಯಾದ್ಯಂತ ಬೆಟ್ಟದಷ್ಟು ಅರ್ಜಿಗಳು ಬಂದಿದ್ದು, ಅದಕ್ಕೆ ತಕ್ಕಂತೆ ನಿವೇಶನ ನಿರ್ಮಿಸಲು
ಜಮೀನು ಸಿಗುತ್ತಿಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು. ನಗರದ ಶೇರಾಪುರದಲ್ಲಿ ಕೆಎಚ್‌ಬಿಯಿಂದ ಅಭಿವೃದ್ಧಿಪಡಿಸಲು ನಿಗದಿಪಡಿಸಿರುವ ಜಮೀನಿಗೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ದುಬಾರಿ ಬೆಲೆಗಾದರೂ ಸರ್ಕಾರ ಜಮೀನು ಖರೀದಿಸಿ ರಾಜ್ಯದಲ್ಲಿನ ಬಡವರಿಗಾಗಿ 10 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿ ಮುಂದಿನ ಒಂದೂವರೆ ವರ್ಷದಲ್ಲಿ ವಿತರಿಸುವ ಗುರಿ ಹೊಂದಲಾಗಿದೆ ಎಂದರು.

Advertisement

ನಗರದ ಹೊಸ ಕೆಎಚ್‌ಬಿಯಲ್ಲಿ ನಿವೇಶನ ಪಡೆಯಲು ಸುಮಾರು 35, 000 ಸಾವಿರ ಅರ್ಜಿಗಳು ಬಂದಿದ್ದು, ಉದ್ದೇಶಿತ 54 ಎಕರೆಜಮೀನಿನಲ್ಲಿ ಕೇವಲ
800 ರಿಂದ 900 ನಿವೇಶನಗಳನ್ನು ಮಾತ್ರ ಮಾಡಲು ಸಾಧ್ಯ. ಇನ್ನೂ 100 ಎಕರೆ ಜಮೀನು ಖರೀದಿಸಲು ಸರ್ಕಾರ ಸಿದ್ಧವಿದ್ದು, ಅಕ್ಕ ಪಕ್ಕದ ಜಮೀನಿನ ಮಾಲೀಕರ ಮನವೊಲಿಸುವಂತೆ ಶಾಸಕ ಎಸ್‌. ರಾಮಪ್ಪ ಹಾಗೂ ಮಾಜಿ ಶಾಸಕ ಬಿ.ಪಿ. ಹರೀಶ್‌ ಅವರಿಗೆ ಸೂಚಿಸಿದರು. ರಾಜ್ಯದಲ್ಲಿ ಒಟ್ಟು 4535 ಎಕರೆ ಜಮೀನನ್ನು ನಿವೇಶನಕ್ಕಾಗಿ ರಾಜೀವ್‌ ಗಾಂಧಿ  ವಸತಿ ನಿಗಮಕ್ಕೆ ಹಸ್ತಾಂತರ ಮಾಡಿಸಿಕೊಂಡಿದ್ದು ಈ ಜಮೀನುಗಳಲ್ಲಿ 1.25 ಲಕ್ಷ ನಿವೇಶನಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ನೀಡುವ ಯೋಜನೆ ಹಾಕಿಕೊಂಡಿದ್ದೇವೆ. 19 ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಹೇಳಿದ್ದ ಹಿಂದಿನ ಸರ್ಕಾರ ಇದಕ್ಕೆ ಬೇಕಾದ 28 ಸಾವಿರ ಕೋಟಿ ರೂ. ನೀಡಲಿಲ್ಲ. ನಮ್ಮ ಸರಕಾರ ಬಂದ ಕೇವಲ 9 ತಿಂಗಳಲ್ಲಿ 5.40 ಲಕ್ಷ ಮನೆ ನಿರ್ಮಾಣಕ್ಕೆ 8000 ಕೋಟಿ ರೂ. ಮೀಸಲಿಟ್ಟಿದ್ದು, ಮೊದಲ ಕಂತಾಗಿ 1300 ಕೋಟಿ ರೂ. ಬಿಡುಗಡೆ ಮಾಡಿದೆ. ಆವಾಸ್‌ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ 5.40 ಲಕ್ಷ ಮನೆ, ನಗರ ಪ್ರದೇಶದಲ್ಲಿ 4.60 ಲಕ್ಷಮನೆಗಳಿಗೆ ಹಣ ಬಿಡುಗಡೆ ಮಾಡಲು ಸರಕಾರ ಬದ್ಧವಾಗಿದೆ ಎಂದರು.

ಶಾಸಕ ಎಸ್‌. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್‌, ಎಸ್‌.ಎಂ. ವೀರೇಶ್‌, ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್‌. ಲಕ್ಷ್ಮೀ, ಎಇಇ
ಬಿರಾದಾರ್‌ ಇತರರು ಇದ್ದರು.

ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ
ಹರಿಹರ: ಬಡವರ ಹೆಸರಲ್ಲಿ ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ ಎಂದು ಜಿಲ್ಲಾ ಕೊಳಚೆ ನಿರ್ಮೂಲನಾ ಮಂಡಳಿ ಸಿಬ್ಬಂದಿಗೆ ವಸತಿ ಸಚಿವ ವಿ. ಸೋಮಣ್ಣ ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು. ಇಲ್ಲಿನ ಕಾಳಿದಾಸ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕೊಳಚೆ ನಿರ್ಮೂಲನಾ ಮಂಡಳಿಯ ಕಾಮಗಾರಿಗಳನ್ನು ವಿಕ್ಷೀಸುವ ಸಂದರ್ಭದಲ್ಲಿ ಫಲಾನುಭವಿಗಳ ದೂರಿಗೆ ಸ್ಪಂದಿಸಿದ ಸಚಿವರು, ನಿವೃತ್ತಿ ನಂತರವೂ ಕಛೇರಿಯಲ್ಲಿ ಕಾರ್ಯ ನಿರ್ವಹಿಸುವ ಸಹಾಯಕ ಇಂಜಿನಿಯರ್‌ ಒಬ್ಬರಿಗೆ 10 ರೂ. ಬಿಲ್‌ಗೆ 100 ರೂ. ಬರೆಯುವುದು ನನಗೆ ತಿಳಿದಿದೆ. ಇನ್ನೊಮ್ಮೆ ಕಚೇರಿಯಲ್ಲಿ ಕಂಡರೆ ಎಫ್‌ಐಆರ್‌ ದಾಖಲಿಸಿ ಎಂದು ಸೂಚಿಸಿದರು.

ಬಡವರ ಹಣ ತಿಂದವರಿಗೆ ಬರಬಾರದ್ದು ಬರುತ್ತದೆ ಎಂದು ಎಚ್ಚರಿಸಿದ ಸಚಿವ ಸೋಮಣ್ಣ, ಕಾಮಗಾರಿ ನಿರ್ವಹಿಸುತ್ತಿರುವ ಅಧಿಕಾರಿಯನ್ನು ಬದಲಿಸುವಂತೆ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದರು. ಮಂಡಳಿಯಿಂದ
ನಿರ್ಮಿಸುತ್ತಿರುವ ಮನೆಗಳಿಗೆ ಭೇಟಿ ನೀಡಿ ಗುಣಮಟ್ಟ ಪರೀಶಿಲಿಸಿದ ಅವರು, ಕಳಪೆ ಕಾಮಗಾರಿ ನಡೆದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ
ಮಾಡಲಾಗುವುದು ಎಂದು ಎಚ್ಚರಿಸಿದರು.

Advertisement

ಬೆಂಗಳೂರು ಬಿಬಿಎಂಪಿ ಮಾದರಿಯಲ್ಲಿ ಸ್ಥಳಿಯ ಸಂಸ್ಥೆಯ ಪರಮಾಧಿಕಾರ ಬಳಸಿಕೊಂಡು ನಗರಸಭೆ ವ್ಯಾಪ್ತಿಯ ಬಿ ಖಾತೆಯ ನಿವೇಶನ, ಮನೆಗಳನ್ನು ಸಕ್ರಮಗೊಳಿಸುವ ಮೂಲಕ ನಗರಸಭೆ ಆದಾಯ ಹೆಚ್ಚಿಸಿಕೊಳ್ಳಿ ಎಂದು ಪೌರಾಯುಕ್ತೆ ಎಸ್‌. ಲಕ್ಷ್ಮೀಅವರಿಗೆ ವಸತಿ ಸಚಿವರು ಸಲಹೆ
ನೀಡಿದರು. ನಗರದ ಆಸ್ತಿಗಳಿಗೆ ವಿಧಿಸುತ್ತಿರುವ ಸ್ಟಾಂಪ್‌ ಡ್ನೂಟಿ ದಾವಣಗೆರೆ ನಗರಕ್ಕಿಂತ ಹೆಚ್ಚಾಗಿದೆ ಎಂಬ ದೂರಿದೆ. ಕೂಡಲೇ ಸಭೆ ನಡೆಸಿ ಮುದ್ರಾಂಕ ಶುಲ್ಕ ಪರಿಷ್ಕರಿಸಿ ವರದಿ ಸಲ್ಲಿಸಿ. ಗುತ್ತೂರು ಸಮೀಪದ ಹೆಲಿಪ್ಯಾಡ್‌ ಬಳಿಯ 8.31 ಎಕರೆ ಜಮೀನಿನಲ್ಲಿ ಜಿ+2 ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next