Advertisement

ಚಾರ ಗ್ರಾಮ ಪಂಚಾಯತ್‌ಗೆ ಇನ್ನೂ ಸ್ವಂತ ಕಟ್ಟಡ ಭಾಗ್ಯವಿಲ್ಲ

01:35 AM Sep 01, 2018 | Karthik A |

ಹೆಬ್ರಿ: ಈಗಾಗಲೇ ಹೆಬ್ರಿಯಿಂದ ಬೇರ್ಪಡೆಗೊಂಡ ಹೆಬ್ರಿ ತಾಲೂಕಿನ ಚಾರ ಗ್ರಾಮ ಪಂಚಾಯತ್‌ಗೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಗ್ರಾಮಸ್ಥರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಅಂಗಡಿ ಕೋಣೆಯಷ್ಟು ದೊಡ್ಡದಾದ ಪಂಚಾಯತ್‌ ಕಚೇರಿಯಲ್ಲಿ ಪಂಚಾಯತ್‌ ಸಿಬಂದಿಗಳಿಗೆ ಕುಳಿತುಕೊಳ್ಳಲು ಕಷ್ಟವಾಗಿದೆ. ಇಲ್ಲಿಗೆ ಸದಸ್ಯರು ಬಂದರೂ ಹೊರಗಡೆ ನಿಲ್ಲಬೇಕಾಗುತ್ತದೆ. ಚಾರ ಪಂಚಾಯತ್‌, ಹೊಸದಾಗಿ ಆಗಲಿರುವ ಹೆಬ್ರಿ ಪಟ್ಟಣ ಪಂಚಾಯತ್‌ಗೆ ಸೇರಬೇಕು ಎಂದು ಇಲ್ಲಿ ನಿರ್ಣಯವನ್ನೂ ಕೈಗೊಳ್ಳಲಾಗಿದ್ದು, ಇದು ಕಟ್ಟಡ ಕಾಮಗಾರಿ ವಿಳಂಬವಾಗಲೂ ಒಂದು ಕಾರಣವಾಗಿದೆ.

Advertisement

ಗ್ರಾಮಸ್ಥರು ಬಂದರೆ ಪರದಾಟ 
ಗ್ರಾಮಸ್ಥರಿಗೆ ಯಾವುದೇ ಸೇವೆ ಸೌಲಭ್ಯ ನೀಡಲು ಕಚೇರಿಯ ಒಳಗೆ ಸ್ಥಳಾವಕಾಶವಿಲ್ಲದೆ ಪರದಾಡುವಂತಾಗಿದೆ. ಈ ತಿಂಗಳಿನಿಂದ ಗ್ರಾ.ಪಂ. ನಲ್ಲೆ ಪಹಣಿಪತ್ರ ನೀಡಬೇಕು ಎಂಬ ಸರಕಾರ ಸುತ್ತೋಲೆ ಇದ್ದು ಯಾವ ರೀತಿ ಸೇವೆ ನೀಡುವುದು ಎಂಬ ಗೊಂದಲ ಪಂಚಾಯತ್‌ ಸಿಬಂದಿ ಅವರದ್ದಾಗಿದೆ. 40 ಲಕ್ಷ ರೂ. ವೆಚ್ಚದಲ್ಲಿ ಚಾರ ಗ್ರಾಮ ಪಂಚಾಯತ್‌ ಕಟ್ಟಡಕ್ಕೆ ಅಕ್ಟೋಬರ್‌ನಲ್ಲಿ ಶಿಲಾನ್ಯಾಸಗೊಂಡು 10 ತಿಂಗಳು ಕಳೆದರೂ ಇದುವರೆಗೆ ಯಾವುದೇ ಕಾಮಗಾರಿ ಶುರುವಾಗಿಲ್ಲ.

ಕಟ್ಟಡ ಕಾಮಗಾರಿಗೆ ಹಿನ್ನಡೆ  
ಈಗಾಗಲೇ ಘೋಷಣೆಯಾದ ಹೆಬ್ರಿ ತಾಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ ಸರಿಯಾದ ಜಾಗ ಪರಿಶೀಲನೆ ನಡೆಯುತ್ತಿದ್ದು ಚಾರ ಗ್ರಾಮ ಪಂಚಾಯತ್‌ ಬಾಡಿಗೆ ಕಟ್ಟಡದ ಸಮೀಪ ಸರ್ವೇ ನಂಬರ್‌ 159ರಲ್ಲಿ 11ಎಕ್ರೆ ಜಾಗ ಕೂಡ ತಾಲೂಕು ಕಚೇರಿ ಮಾಡಬೇಕೆಂದು ಸ್ಥಳೀಯರ ಒತ್ತಾಯವಿದೆ. ಇದರಿಂದ ಚಾರ ಪಂಚಾಯತ್‌ ಕಟ್ಟಡ ಕಾಮಗಾರಿಗೆ ಹಿನ್ನಡೆಯಾಗಿದೆ. 40 ಲಕ್ಷ ರೂ.ಗಳಲ್ಲಿ 10 ಲಕ್ಷ ರೂ. ಬಿಡುಗಡೆಯಾಗಿದ್ದು, ಜಾಗದ ಸಮಸ್ಯೆ ಬಗೆಹರಿದಾಗ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಪಂಚಾಯತ್‌ ಅಧಿಕಾರಿ ತಿಳಿಸಿದ್ದಾರೆ.

ಕಾಮಗಾರಿ ನಿಧಾನ
ಚಾರ ಗ್ರಾಮ ಪಂಚಾಯತ್‌ ಅನ್ನು ಪಟ್ಟಣ ಪಂಚಾಯತ್‌ ಆಗುವ ಹೆಬ್ರಿಯೊಂದಿಗೆ ವಿಲೀನ ಮಾಡುವ ಬಗ್ಗೆ ಪಂಚಾಯತ್‌ ನಿರ್ಣಯ ಕೈಗೊಂಡಿದೆ. ಈ ಕಾರಣ ಚಾರ ಗ್ರಾಮ ಪಂಚಾಯತ್‌ನ ಸ್ವಂತ ಕಟ್ಟಡ ಕಾಮಗಾರಿ ನಿಧಾನವಾಗಿದೆ. ತಾಲೂಕು ಕಚೇರಿ ಯಾವ ಸ್ಥಳದಲ್ಲಿ ಆಗುತ್ತದೆ ಎಂಬುದರ ಮೇಲೆ ಮುಂದಿನ ಪ್ರಗತಿ ಆಗಲಿದೆ.  
– ಜ್ಯೋತಿ ಹರೀಶ್‌, ಜಿ.ಪಂ. ಸದಸ್ಯರು, ಹೆಬ್ರಿ ಕ್ಷೇತ್ರ

ಪಟ್ಟಣ ಪಂ.ಆದರೆ ನಷ್ಟ
ಚಾರ ಭಾಗದಲ್ಲಿ 1 ಸಾವಿರ ಜನಸಂಖ್ಯೆ ಪಟ್ಟಣಕ್ಕೆ ತಾಗಿಕೊಂಡಿದ್ದರೆ, ಉಳಿದ 5 ಸಾವಿರ ಮಂದಿ ಗ್ರಾಮೀಣರು. ಇಲ್ಲಿ ಪಟ್ಟಣ ಪಂಚಾಯತ್‌ ಘೋಷಣೆ ಆದರೆ,  ಹೊಸ ಅಕ್ರಮ ಸಕ್ರಮ, ಗ್ರಾಮೀಣ ಕೃಪಾಂಕ, ತೆರಿಗೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ನಬಾರ್ಡ್‌ ಕೃಷಿ ಹೊಸ ಅಕ್ರಮ ಸಕ್ರಮ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.ಆದ್ದರಿಂದ ಪಟ್ಟಣ ಪಂಚಾಯತ್‌ ನಿರ್ಣಯ ಬೇಡ. 
– ನೀರೆ ಕೃಷ್ಣ ಶೆಟ್ಟಿ ,ಹೆಬ್ರಿ ಗ್ರಾ.ಪಂ. ಮಾಜಿ ಅಧ್ಯಕ್ಷ 

Advertisement
Advertisement

Udayavani is now on Telegram. Click here to join our channel and stay updated with the latest news.

Next