Advertisement
ಪುತ್ತೂರು: ಹನ್ನೊಂದು ತಿಂಗಳ ಹಿಂದೆ ಪುತ್ತೂರು ಕೆಎಸ್‌ಆರ್‌ಟಿಸಿ ಡಿಪೋಗೆ ಮಂಜೂರುಗೊಂಡಿದ್ದ ಡಲ್ಟ್ ಪ್ರಾಯೋಜಕತ್ವದ 26 ಬಸ್‌ಗಳು ಇನ್ನೂ ಬಂದಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಗರ ವ್ಯಾಪ್ತಿಯಲ್ಲಿ ಸಾರಿಗೆ ಬಸ್ ಓಡಾಟಕ್ಕೆ 2016ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಬಸ್ ಲೋಕಾರ್ಪಣೆಗೆ ಚಾಲನೆ ನೀಡಿತ್ತು. ಅದೇ ವರ್ಷದ ಡಿಸೆಂಬರ್ ವೇಳೆಗೆ ಪುತ್ತೂರು ಡಿಪೋಗೆ ಬಸ್ ಬರಬೇಕಿತ್ತು. ಆದರೆ 11 ತಿಂಗಳಾದರೂ ಬಸ್‌ಗಳು ಬಂದಿಲ್ಲ.
ಜಿಲ್ಲೆಯಲ್ಲಿ ಮಂಗಳೂರು ಮತ್ತು ಪುತ್ತೂರಿಗೆ ಹೊಸ ಮಾದರಿ ಬಸ್ ನೀಡುವುದಾಗಿ ಘೋಷಿಸಲಾಗಿತ್ತು. ಈಗಾಗಲೇ ಮಂಗಳೂರಿಗೆ ಸಿಟಿ ಬಸ್ ಸೇವೆ ಆರಂಭವಾಗಿದೆ. ಪುತ್ತೂರು ವಿಭಾಗೀಯ ಕೇಂದ್ರದ ಪುತ್ತೂರು ಡಿಪೋ ಮತ್ತು ಮಡಿಕೇರಿ ಡಿಪೋಗಳಿಗೆ 44 ಬಸ್‌ಗಳು ಮಂಜೂರುಗೊಂಡಿತ್ತು. ಅದರಲ್ಲಿ ಪುತ್ತೂರು ಡಿಪೋಗೆ (ಸುಳ್ಯ-ಪುತ್ತೂರು) 26 ಬಸ್‌ಗಳು ಸೇರಿತ್ತು. ಬಸ್ ವಿಳಂಬದ ಬಗ್ಗೆ ಶಾಸಕಿ ಸಂಬಂಧಪಟ್ಟ ಅಧಿಕಾರಿಗಳ, ಸಚಿವರ ಗಮನಕ್ಕೆ ತಂದಿದ್ದರೂ ಈಗ ಬರುತ್ತದೆ, ಮತ್ತೆ ಬರುತ್ತದೆ ಎಂಬ ಭರವಸೆ ಮಾತ್ರ ಸಿಕ್ಕಿದೆ. ಈ ಮಧ್ಯೆ ಕಳೆದ ವರ್ಷ ಸೆ. 27ರಂದು ಪುತ್ತೂರು ಡಿಪೋಗೆ 12 ಕರ್ನಾಟಕ ಸಾರಿಗೆ ಬಸ್ ಸೇರ್ಪಡೆಗೊಂಡಿವೆ. ಅದಕ್ಕೆ ಮೊದಲೇ ಘೋಷಣೆಯಾಗಿದ್ದ ಬಸ್‌ಗಳಿನ್ನೂ ಏಕೆ ಬಂದಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಏನಿದು ಬಸ್
ಡಲ್ಟ್ ಪ್ರಾಯೋಜಕತ್ವದಲ್ಲಿ ನೀಡುವ ಈ ನಗರ ಸಾರಿಗೆ ಬಸ್ ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡಿದೆ ಎಂದಿತ್ತು ಕೆಎಸ್‌ಆರ್‌ಟಿಸಿ. ಪ್ರಯಾಣಿಕರ ಸುರಕ್ಷತೆಗಾಗಿ ಸಿ.ಸಿ. ಕೆಮರಾಗಳು, ವಿದ್ಯುತ್ ಸ್ವಯಂ ಚಾಲಿತ ಬಾಗಿಲು, ತುರ್ತು ಸಂದರ್ಭ ಆಪಾಯದ ಸಂದೇಶವನ್ನು ನಿಯಂತ್ರಣ ಕೇಂದ್ರಕ್ಕೆ ರವಾನಿಸುವ ವ್ಯವಸ್ಥೆ, ಚಾಲನಾ ಸುರಕ್ಷತೆಗಾಗಿ ಹಿಂಬದಿ ನೋಟದ ಕೆಮರಾ, ಧ್ವನಿ ಪ್ರಸರಣ ಮತ್ತು ಎಲ್‌ಇಡಿ ಪ್ರದರ್ಶನ ವ್ಯವಸ್ಥೆ, ಅಂಗವಿಕಲರು ಬಸ್ ಹತ್ತಲು ಮತ್ತು ಇಳಿಯಲು ರ್‍ಯಾಂಪ್ ವ್ಯವಸ್ಥೆ ಮೊದಲಾದ ಸೌಲಭ್ಯಗಳು ಇರಲಿವೆಯಂತೆ. ಸುಳ್ಯ ಮತ್ತು ಪುತ್ತೂರು ತಾಲೂಕು ಒಳಗೊಂಡ ಪುತ್ತೂರು ಡಿಪೋದಲ್ಲಿ 165 ಶೆಡ್ನೂಲ್‌ಗಳಿದ್ದು, ಅಂದಾಜು 168 ಬಸ್‌ಗಳು ಇವೆ. ಇವುಗಳಲ್ಲಿ ಹೆಚ್ಚಿನವು ಹಳೇ ಬಸ್‌ಗಳಾಗಿದ್ದು ಓಡಾಟಕ್ಕೆ ಕಷ್ಟವೆಂದು ಚಾಲಕರು ಈ ಹಿಂದೆಯೇ ಡಿಪೋ ಅಧಿಕಾರಿಗಳಿಗೆ ತಿಳಿಸಿದ್ದರು. ಮಳೆಗಾಲದಲ್ಲಿ ಸೋರುವ ಬಸ್ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರೂ ದೂರಿದ್ದರು.
Related Articles
ಪುತ್ತೂರು ವಿಭಾಗೀಯ ಕೇಂದ್ರದಲ್ಲಿ ವಿದ್ಯಾರ್ಥಿಗಳು ಗರಿಷ್ಠ ಬಸ್ ಹೊಂದಿದ್ದು, ರಾಜ್ಯದಲ್ಲಿಯೇ ದ್ವಿತೀಯ ಸ್ಥಾನದಲ್ಲಿತ್ತು. ಕಳೆದ ಬಾರಿ 44,564 ಬಸ್ ಪಾಸ್ ಹೊಂದಿದ್ದು, ಪುತ್ತೂರು ಡಿಪೋವೊಂದರಲ್ಲಿಯೇ 20,861 ಬಸ್ ಪಾಸ್ ಇತ್ತು. ವಿಭಾಗೀಯ ಕೇಂದ್ರ ವ್ಯಾಪಿಗೆ ಒಳಪಟ್ಟ ಪುತ್ತೂರು, ಬೆಳ್ತಂಗಡಿ, ಬಿ.ಸಿ.ರೋಡ್ ಮತ್ತು ಮಡಿಕೇರಿ ಡಿಪೋಗಳಲ್ಲಿ 1664 ಚಾಲಕ – ನಿರ್ವಾ ಹಕರು, 357 ಮೆಕ್ಯಾನಿಕ್‌ಗಳು ಕರ್ತವ್ಯದಲ್ಲಿದ್ದರು. ವಿಭಾಗ ವ್ಯಾಪ್ತಿಯಲ್ಲಿ 538 ಬಸ್ ಇದ್ದು, ಬಿ.ಸಿ.ರೋಡ್-108., ಧರ್ಮಸ್ಥಳ-159, ಮಡಿಕೇರಿ ಡಿಪೋದಲ್ಲಿ 103 ಬಸ್‌ಗಳು ಇವೆ.
Advertisement
ಪ್ರಕಟನೆ ಬದಲಾಗಿತ್ತು!ರಾಜ್ಯ ರಸ್ತೆ ಸಾರಿಗೆ ನಿಗಮ 2016 ಆ. 22ರಂದು ಪತ್ರಿಕಾ ಪ್ರಕಟನೆ ನೀಡಿತ್ತು. ಅದರಲ್ಲಿ ಹಾಸನ, ಶಿವಮೊಗ್ಗ, ಭದ್ರಾವತಿ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಚಾಮರಾಜ ನಗರ, ಚಿಕ್ಕಮಗಳೂರು, ತುಮಕೂರು, ದಾವಣಗೆರೆ, ಮಂಗಳೂರು, ಉಡುಪಿ, ಮಡಿಕೇರಿ ಮೊದಲಾದ ಜಿಲ್ಲೆಗಳಿಗೆ ನಗರ ಸಾರಿಗೆ ಬಸ್ ನೀಡುವುದಾಗಿ ಘೋಷಿಸಿತ್ತು. ಸ್ವಲ್ಪ ಸಮಯದ ಅನಂತರ ಸಿಟಿ ಬಸ್ ಅಲ್ಲ, ಬದಲಿಗೆ ಡಲ್ಟ್ ಪ್ರಾಯೋಜಕತ್ವದ ಬಸ್ ಎಂದು ಇಲಾಖೆ ಹೇಳಿಕೆ ನೀಡಿತ್ತು. – ಕಿರಣ್ ಪ್ರಸಾದ್ ಕುಂಡಡ್ಕ