Advertisement

ಸರಕಾರಿ ಭೂಮಿಯಲ್ಲಿ ವಾಸವಿದ್ದರೂ ಹಕ್ಕುಪತ್ರವಿಲ್ಲ!

08:34 PM Aug 02, 2017 | Karthik A |

ಸ್ಯಾಟ್‌ಲೈಟ್‌ ಸರ್ವೆಯ ಗೊಂದಲ 

Advertisement

ಸಿದ್ದಾಪುರ: ಉಡುಪಿ ತಾಲೂಕಿನ ಆವರ್ಸೆ ಗ್ರಾಮ ಪಂಚಾಯತ್‌ ಹಿಲಿಯಾಣ ಗ್ರಾಮ ವ್ಯಾಪ್ತಿಯ ಹೊಗೆಬೆಳಾರ್‌ ಸರಕಾರಿ ಭೂಮಿಯಲ್ಲಿ ಹಲವಾರು ವರ್ಷಗಳಿಂದ ವಾಸವಿದ್ದರೂ, ಸ್ಯಾಟ್‌ಲೈಟ್‌ ಸರ್ವೆಯ ಗೊಂದಲದಿಂದಾಗಿ ವಿಶ್ವಕರ್ಮ ಸಮುದಾಯದ ಐದಾರು ಕುಟುಂಬಗಳಿಗೆ ಇನ್ನೂ ಹಕ್ಕುಪತ್ರವಿಲ್ಲದೆ ಪರಿತಪಿಸುವಂತಾಗಿದೆ.

ಹಕ್ಕುಪತ್ರ ದೊರಕದ ಸ್ಥಿತಿ ನಿರ್ಮಾಣ
ಹಿಲಿಯಾಣ ಗ್ರಾಮ ವ್ಯಾಪ್ತಿಯ ಹೊಗೆಬೆಳಾರ್‌ನ ಸರಕಾರಿ ಭೂಮಿಯಲ್ಲಿ ಹಲವಾರು ವರ್ಷಗಳಿಂದ ವಿಶ್ವಕರ್ಮ ಸಮುದಾಯದ ಐದಾರು ಕುಟುಂಬಗಳು ವಾಸವಾಗಿವೆ. 1963ರಿಂದ ತಮ್ಮಯ್ಯ ಆಚಾರ್‌ ಅವರು ಸರಕಾರಿ ಭೂಮಿಯಲ್ಲಿ ವಾಸವಾಗಿದ್ದು, ಮನೆ ತೆರಿಗೆ ಕಟ್ಟಿಕೊಂಡಿದ್ದಾರೆ. ಅವರಲ್ಲಿ ದಾಖಲೆಯೂ ಕೂಡ ಭದ್ರವಾಗಿವೆ. ಸರಕಾರಿ ಭೂಮಿಯಲ್ಲಿ ಜನವಸತಿಯಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ಸರಕಾರಿ ಯೋಜನೆ ಮಂಜೂರಾಗಿದೆ. ಆವರ್ಸೆ ಗ್ರಾ.ಪಂ.ನಿಂದ ರಸ್ತೆ, 1994ರಲ್ಲಿ ಮನೆ ಮನೆಗೆ ಕುಡಿಯುವ ನೀರಿಗಾಗಿ ಪೈಪ್‌ಲೈನ್‌ ವ್ಯವಸ್ಥೆ, ಮನೆಗಳಿಗೆ 2000-01ರಲ್ಲಿ ಕಲ್ಪಿಸಿದ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಈ ಕುಟುಂಬಗಳಿಗೆ ಹಕ್ಕುಪತ್ರ ದೊರಕದ ಸ್ಥಿತಿ ನಿರ್ಮಾಣವಾಗಿಸಿದ್ದಾರೆ.

ಸ್ಯಾಟ್‌ಲೈಟ್‌ ಸರ್ವೆ: ಗೊಂದಲ!
ಸರಕಾರಿ ಅರಣ್ಯಭೂಮಿಯಾಗಿರುವ ಹಿಲಿಯಾಣ ಹೊಗೆಬೆಳಾರ್‌ ಪರಿಸರವನ್ನು, ಅರಣ್ಯ ಇಲಾಖೆ ವತಿಯಿಂದ 1990ರಲ್ಲಿ ಸ್ಯಾಟ್‌ಲೈಟ್‌ ಸರ್ವೆ ನಡೆಸಲಾಗಿತ್ತು. ಸ್ಯಾಟ್‌ಲೈಟ್‌ ಸರ್ವೆಯಲ್ಲಿ ಹೊಗೆಬೆಳಾರ್‌ ಪರಿಸರ ಎಲ್ಲವು ಕೂಡ ಹಸಿರಾಗಿ ಕಂಡಿದ್ದರಿಂದ ಅರಣ್ಯ ಪ್ರದೇಶ ಎಂದು ಘೋಷಿಸಿತ್ತು. ಇದರ ಪರಿಣಾಮ ಕುಟುಂಬಗಳು ವಾಸವಾಗಿರುವ ಪ್ರದೇಶಗಳನ್ನು ಅರಣ್ಯ ಇಲಾಖೆಗೆ ಸಂಬಂಧಿಸಿದೆ ಎನ್ನುವ ಕಾರಣ ನೀಡಿ, ಗೇರುತೋಪು ನಿರ್ಮಿಸಲು ಇಲಾಖೆ ಆದೇಶಿಸಿತ್ತು. ಇದರ ಪರಿಣಾಮ ವಿಶ್ವಕರ್ಮ ಸಮುದಾಯದ ಐದಾರು ಕುಟುಂಬಗಳಿಗೆ ಇನ್ನೂ ಹಕ್ಕುಪತ್ರಸಿಗದಂತಾಗಿದೆ.

ದ್ವೇಷ‌ ಸಾಧಿಸುತ್ತಿದ್ದಾರ?
ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ತಿಮ್ಮ ದೇವಾಡಿಗ ಸೇರಿದಂತೆ ಚಂದ್ರ ಆಚಾರ್‌, ಪರಮೇಶ್ವರ ಆಚಾರ್‌, ಮಹಾಬಲ ಆಚಾರ್‌, ಅನಂತಯ್ಯ ಆಚಾರ್‌, ನರಸಿಂಹ ಆಚಾರ್‌ ಅವರ ಕುಟುಂಬಗಳ ಮೇಲೆ ಇಲಾಖೆ ಅರಣ್ಯ ದೌರ್ಜನ್ಯ ಕೇಸು ದಾಖಲಿಸಿಕೊಂಡಿದೆ. 1995ರಲ್ಲಿ ಅರಣ್ಯ ದೌರ್ಜನ್ಯ ಕೇಸು ದಾಖಲಿಸಿಕೊಂಡಿದ್ದರೂ ಇದುವರೆಗೆ ನ್ಯಾಯಾಲಯಕ್ಕೆ ಕಳುಹಿಸದಿರುವುದರಿಂದ ಪ್ರಕರಣ ಇತ್ಯರ್ಥಗೊಳ್ಳದೆ ತೊಂದರೆಯಾಗಿದೆ. ಅರಣ್ಯ ಅಧಿಕಾರಿಗಳು ನಮ್ಮ ಮೇಲೆ ಅರಣ್ಯ ದೌರ್ಜನ್ಯ ಕೇಸು ದಾಖಲಿಸಿದ ಪರಿಣಾಮ ಪ್ರಸ್ತುತ 94ಸಿ ಕಡತ ಪರಿಶೀಲನೆಯನ್ನು ಸಹ ತಡೆಹಿಡಿದಿದ್ದಾರೆ. ಇದರಿಂದಾಗಿ ಶಾಶ್ವತವಾಗಿ ಹಕ್ಕುಪತ್ರ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೊಗೆಬೆಳಾರ್‌ ನಿವಾಸಿ ಚಂದ್ರ ಆಚಾರ್‌ ಅವರು ಅಳಲು ತೋಡಿಕೊಂಡಿದ್ದಾರೆ.

Advertisement

ನ್ಯಾಯಾಲಯದಿಂದ ತಡೆಯಾಜ್ಞೆ
ಹೊಗೆಬೆಳಾರ್‌ ಪರಿಸರ ಅರಣ್ಯ ಇಲಾಖೆಗೆ ಸಂಬಂಧಿಸಿದೆ ಎನ್ನುವ ಕಾರಣ ನೀಡಿ, ತಿಮ್ಮ ದೇವಾಡಿಗ ಅವರ ಸ್ವಾಧೀನ ಇರುವ ಸುಮಾರು 30 ಸೆಂಟ್ಸ್‌ ಸ್ಥಳ ತೆರವಿಗೆ ಅಧಿಕಾರಿಗಳು ಮುಂದಾದರು. ಇದನ್ನು ಪ್ರಶ್ನಿಸಿ ತಿಮ್ಮದೇವಾಡಿಗ ಅವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ತಡೆಯಾಜ್ಞೆ ತಂದರು. ತದನಂತರ ಅರಣ್ಯ ಇಲಾಖೆಯ ಗಡಿಗುರುತು ಪ್ರತ್ಯೇಕಿಸಿ ಪ್ರಸ್ತುತ ಹೆಂಗವಳ್ಳಿ ಮೀಸಲು ಅರಣ್ಯ ಪ್ರದೇಶವೆಂದು ಗುರುತಿಸಿದ್ದಾರೆ.

ಮೀಸಲು ಅರಣ್ಯದಲ್ಲಿ ವಾಸವಾಗಿರುವುದರಿಂದ ಅವರಿಗೆ ಹಕ್ಕುಪತ್ರ ಸಿಗುವುದು ಕಷ್ಟ. ಈಗಾಗಲೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಎಸಿಎಫ್‌ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಒಬ್ಬ ವ್ಯಕ್ತಿ 3ಎಕರೆ ಒಳಗೆ ಭೂಮಿ ಅತಿಕ್ರಮಣ ಮಾಡಿಕೊಂಡಿದ್ದರೆ, ಒಕ್ಕಲೆಬ್ಬಿಸಬಾರದು ಎಂದು ಸರಕಾರದ ಆದೇಶ ಇರುವುದರಿಂದ ಸದ್ಯಕ್ಕೆ ವಾಸಿಸಲು ಅವಕಾಶ ನೀಡಲಾಗಿದೆ. ಅವರು ಕೋರ್ಟಿಗೆ ಅಪೀಲ್‌ ಹೋಗಬಹುದಾಗಿದೆ.
– ಎ. ಎ. ಗೋಪಾಲ್‌, ಶಂಕರನಾರಾಯಣ ವಲಯ ಅರಣ್ಯಾಧಿಕಾರಿ

– ಸತೀಶ್‌ ಆಚಾರ್‌ ಉಳ್ಳೂರ್‌

Advertisement

Udayavani is now on Telegram. Click here to join our channel and stay updated with the latest news.

Next