ದಾವಣಗೆರೆ:ಕಾಂಗ್ರೆಸ್‌ಗೆ ಹೋಗಿ ಬಂದಿರುವ ಬಗ್ಗೆ ಯಾವುದೇ ಪಾಪ ಪ್ರಜ್ಞೆಯಾಗಲಿ, ಪಶ್ಚಾತ್ತಾಪವಾಗಲಿ ಇಲ್ಲ. ಬಿಜೆಪಿ ನನ್ನ ಮನೆ. ನಾವೇ ಕಟ್ಟಿದ ಮನೆಗೆ ವಾಪಸ್ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗ ಮಧ್ಯೆ ನಗರದ ಬಿಜೆಪಿ ಜಿಲ್ಲಾ ಕಚೇರಿಗೆ ಭೇಟಿ ನೀಡಿದ್ದ ವೇಳೆ ಪಕ್ಷದ ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರಿಂದ ಭವ್ಯ ಸ್ವಾಗತ ಸ್ವೀಕರಿಸಿ ಮಾತನಾಡಿದ ಅವರು, ಕೆಲವೊಂದು ಕಹಿ ಘಟನೆಗಳ ಕಾರಣಕ್ಕೆ ನನ್ನ ಮನೆ ತೊರೆದು ಹೋಗಿದ್ದೆ. ಈಗ ಮರಳಿ ಮನೆಗೆ ಬಂದಿದ್ದು ಖುಷಿಯಾಗಿದೆ. ಪಕ್ಷಕ್ಕೆ ಮರಳಲು ಯಾವುದೇ ಷರತ್ತು ವಿಧಿಸಿಲ್ಲ. ಬೇಷರತ್ತಾಗಿ ಪಕ್ಷಕ್ಕೆ ವಾಪಸಾಗಿದ್ದೇನೆ. ಮುಂದೆ ಪಕ್ಷದ ವರಿಷ್ಠರು ಯಾವ ಜವಾಬ್ದಾರಿ ನಿಭಾಯಿಸಲು ಹೇಳುತ್ತಾರೋ ಅದನ್ನು ನಿಭಾಯಿಸಲು ನಾನು ಸಿದ್ಧನಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಿಂದ ಟಿಕೆಟ್ ಬೇಕು ಎಂದು ನಾನು ಕೇಳಿಲ್ಲ ಎಂದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪಕ್ಷದ ರಾಜ್ಯ ಹಾಗೂ ರಾಷ್ಟ್ರ ನಾಯಕರ ಆಹ್ವಾನದ ಮೇರೆಗೆ ಪಕ್ಷಕ್ಕೆ ಮರಳಿದ್ದೇನೆ. ಕಳೆದ ಹಲವಾರು ತಿಂಗಳಿಂದ ರಾಜ್ಯದ ಯಾವುದೇ ಭಾಗಕ್ಕೆ ಪ್ರವಾಸ ಮಾಡಿದರೂ ನೀವು ಪಕ್ಷಕ್ಕೆ ವಾಪಸ್ ಬನ್ನಿ ಎಂದು ಬಿಜೆಪಿ ಕಾರ್ಯಕರ್ತರು, ಮುಖಂಡರು ಒತ್ತಾಯಿಸುತ್ತಿದ್ದರು. ಬಿಜೆಪಿ ಕಾರ್ಯಕರ್ತರ ಪ್ರೀತಿಗೆ ಸೋತು, ಪಕ್ಷದ ಹಿರಿಯರ ಆಹ್ವಾನ ಗೌರವಿಸಿ ನನ್ನ ಮನೆಗೆ ಮರಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆ ಇದ್ದು, ನಾಯಕರ ಜತೆಗೂಡಿ ಪಕ್ಷವನ್ನು ಸಂಘಟಿಸಲಾಗುವುದು. ಆ ಮೂಲಕ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ದೇಶದ ಪ್ರಧಾನಿಯಾಗಿಸುವುದು ನಮ್ಮ ಗುರಿ. ಆ ನಿಟ್ಟಿನಲ್ಲಿ ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡುತ್ತೇನೆ.
ನಾನು ಬಿಜೆಪಿಗೆ ಮರಳಿ ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಮಾಡಿದ್ದೇನೆ ಎಂಬ ಮೋಹನ ಲಿಂಬಿಕಾಯಿ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಸಮುದಾಯದ ಅಭಿಪ್ರಾಯವಲ್ಲ ಎಂದರು.