ಧಾರವಾಡ: ವಿಜ್ಞಾನ ತಂತ್ರಜ್ಞಾನ, ಕೃಷಿ ಕ್ಷೇತ್ರದಲ್ಲಿ ಜಗತ್ತಿಗೆ ಸವಾಲೊಡ್ಡುವ ಸ್ಥಿತಿಯಲ್ಲಿ ಮುಂದುವರಿದರೂ ಅಲೆಮಾರಿ- ಅರೆ ಅಲೆಮಾರಿ ಸಮುದಾಯಗಳು ಮಾತ್ರ ಇಂದಿಗೂ ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲದೆ ವಂಚಿತರಾಗಿದ್ದು, ಇದು ಭಾರತ ದೇಶದ ದುರಂತವಾಗಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ| ಗಣೇಶ ಎನ್ .ದೇವಿ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಅಲೆಮಾರಿ ಅರೆ ಅಲೆಮಾರಿ ಬುಡಕಟ್ಟು ಜಾತಿ ಸಮುದಾಯಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. ಗೊಂದಳಿ, ಜೋಗಿ ಬುಡಬುಡಕಿ, ವಾಸುದೇವ, ಗೊಲ್ಲ, ಅಣಬರು, ಅಹಿರಗೌಳಿ, ಸಿಕ್ಕಲಗಾರ, ಖಂಜರಬಾಟ್, ಘಂಟಿಚೋರ, ಕೊರಮ, ಚಪ್ಪರಬಂದ, ಜಾತಿ ಸಮುದಾಯಗಳ ಸ್ಥಿತಿಗತಿ ತೀರಾ ಶೋಚನೀಯವಾಗಿದೆ.
ಕಣ್ಣಿಗೆ ರಾಚುವಂತೆ ಎಲ್ಲರ ಕಣ್ಣಿಗೂ ಕಾಣ ಸಿಗುವಂತಹ ಈ ಅಲೆಮಾರಿ ಜಾತಿಗಳು ಇನ್ನೂವರೆಗೂ ಭಿಕ್ಷೆ ಬೇಡುವುದು, ತಿಪ್ಪೆಗುಂಡಿಯಲ್ಲಿ ಕಸ, ಕೂದಲು ಆಯುವುದು, ರದ್ದಿ ಪೇಪರ್ ಮೊಡಕಾ ಸಾಮಾನುಗಳನ್ನು ಮಾರಿ ತಮ್ಮಉಪ ಜೀವನ ಸಾಗಿಸುತ್ತಿರುವುದು ತಪ್ಪಿಲ್ಲ. ಈ ಹಿನ್ನೆಲೆಯಲ್ಲಿ ಅಲೆಮಾರಿ ಸಮಾಜದ ಜಾಗೃತಿಗಾಗಿ ಸಂಘಟನೆ, ಹೋರಾಟ ಇಂದಿನ ಪರಿಸ್ಥಿತಿಯಲ್ಲಿ ಅತ್ಯಂತ ಅವಶ್ಯವಾಗಿದೆ ಎಂದರು.
ಇದನ್ನೂ ಓದಿ:ಉತ್ತರಾಧಿಕಾರಕ್ಕಾಗಿ ಅಲ್ಲ, ಆಸ್ತಿ ಉಳಿವಿಗೆ ಹೋರಾಟ
ಮಹಾರಾಷ್ಟ್ರದ ಮಾಜಿ ಶಾಸಕ ಲಕ್ಷ್ಮಣ ಮಾನೆ ಮಾತನಾಡಿ, ಅಲೆಮಾರಿ-ಅರೆ ಅಲೆಮಾರಿ, ಆದಿವಾಸಿ ಸಮಾಜದವರಸಮಗ್ರ ಏಳ್ಗೆಗೆ 2021 ಅ.31ರಂದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ರಾಷ್ಟ್ರಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶ ಪ್ರಯುಕ್ತದೇಶದ ಪ್ರತಿ ರಾಜ್ಯಗಳಲ್ಲಿ ಸಂಚರಿಸಿ ಪ್ರಸ್ತುತ ಅಲೆಮಾರಿ-ಅರೆ ಅಲೆಮಾರಿ ಸಮಾಜದ ಸ್ಥಿತಿಗತಿಯನ್ನು ಖುದ್ದಾಗಿ ಅಧ್ಯಯನ ನಡೆಸುತ್ತಿದ್ದೇವೆ ಎಂದರು. ಸಮಾಜದ ಹಿರಿಯರಾದ ದೀಲಿಪ ಗೋತ್ರಾಳೆ, ಅಶ್ರಫ ಅಲಿ, ಮಂಜುನಾಥಬಾಗಡೆ, ಪುಂಡಲೀಕ ಕಡಬಿ, ಮನೋಹರ ಗೋಕರಾಳ, ಬುರಾನ್ ಗೌಳಿ ಸೇರಿದಂತೆ ಅಲೆಮಾರಿ ಸಮಾಜದ ಮುಖಂಡರು ಸಭೆಯಲ್ಲಿ ಇದ್ದರು. ಡಾ| ವಿಶ್ವನಾಥ ಚಿಂತಾಮಣಿ ಸ್ವಾಗತಿಸಿ, ನಿರೂಪಿಸಿದರು.