ಬೆಳಗಾವಿ: ಆನ್‌ಲೈನ್ ತರಗತಿಗಳ ಆಧಾರದ ಮೇಲೆ ಪರೀಕ್ಷೆಗಳನ್ನು ನಡೆಸಬಾರದು. ಪರೀಕ್ಷೆಗಳ ಮೊದಲು ಅಗತ್ಯವಿರುವ ಕನಿಷ್ಟ ಥಿಯರಿ ಮತ್ತು ಪ್ರಾಯೋಗಿಕ ತರಗತಿಗಳನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಪರೀಕ್ಷಾ ವೇಳಾಪಟ್ಟಿಯನ್ನು ಯೋಜಿಸುವಲ್ಲಿ ಶಿಕ್ಷಣ ತಜ್ಞರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪ್ರಜಾಸತ್ತಾತ್ಮಕವಾಗಿ ಒಳಗೊಂಡಿರಬೇಕು ಎಂದು ಒತ್ತಾಯಿಸಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿ ಸಲ್ಲಿಸಿ ಎಲ್ಲಾ ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿರುವುದಲ್ಲದೆ ವೈದ್ಯಕೀಯ ಆರ್‌ಎಸ್ 4ನೇ ಬ್ಯಾಚ್‌ನ (ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ) ತಾತ್ಕಲಿಕ ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವ ಬಗ್ಗೆಯೂ ಪ್ರಸ್ತಾಪಿಸಿದೆ. ಇದರಿಂದ ದಂತ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
ಪ್ರಜಾತಾಂತ್ರಿಕ ಮತ್ತು ವೈಜ್ಞಾನಿಕ ಪರಿಹಾರ ಕ್ರಮಕ್ಕಾಗಿ ಪೂರ್ವಾಪೇಕ್ಷಿತವಾಗಿ ಪ್ರಾಯೋಗಿಕತೆಯ ಸಹಾಯದಿಂದ ಸೈದ್ಧಾಂತಿಕ ಪರಿಕಲ್ಪನೆಗಳನ್ನು ಕಲಿಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಆನ್‌ಲೈನ್ ತರಗತಿಗಳು ಸಮಗ್ರ ಜ್ಞಾನವನ್ನು ನೀಡಲು ಸಾಧ್ಯವಿಲ್ಲ. ಇದು ನಮ್ಮ ಭವಿಷ್ಯದ ವೈದ್ಯರನ್ನು ಸಿದ್ಧಪಡಿಸಲು ಖಂಡಿತವಾಗಿಯೂ ಸಾಧನವಾಗುವುದಿಲ್ಲ ಎಂದು ಮನವಿಯಲ್ಲಿ ಹೇಳಿದ್ದಾರೆ.
ಈ ಅವಧಿಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ವೈಜ್ಞಾನಿಕ ಕಲಿಕೆಯ ವಿಧಾನ, ಪ್ರಯೋಗಾಲಯಗಳು, ಗ್ರಂಥಾಲಯಗಳ ಪ್ರವೇಶದಿಂದ ವಂಚಿತರಾಗುತ್ತಿದ್ದಾರೆ. ಇದಲ್ಲದೇ ಅನೇಕ ಶಿಕ್ಷಣ ತಜ್ಞರ ಅಭಿಪ್ರಾಯದಂತೆ ಆನ್ ಲೈನ್ ತರಗತಿಗಳ ಆಧಾರದ ಮೇಲೆ ಪರೀಕ್ಷೆಗಳನ್ನು ನಡೆಸುವ ವಿಶ್ವವಿದ್ಯಾನಿಲಯದ ಈ ನಿರ್ಧಾರವು ತಾರತಮ್ಯದ ಕ್ರಮವಾಗಿದೆ. ಆನ್‌ಲೈನ್ ತರಗತಿಗಳ ಪರಿಚಯದೊಂದಿಗೆ ಹೆಚ್ಚಿನ ಬಡ ವಿದ್ಯಾರ್ಥಿಗಳನ್ನು ಈ ಕಲಿಕೆಯ ಪ್ರಕ್ರಿಯೆಯಿಂದ ಹೊರಹಾಕಲಾಗುತ್ತಿದೆ ಎಂದು ಎಐಡಿಎಸ್‌ಓ ಆರೋಪಿಸಿದೆ. ಈ ಕಾರಣಗಳಿಂದಾಗಿ ಅನೇಕ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯವು ಅಪಾಯದಲ್ಲಿದೆ. ಅದ್ದರಿಂದ ಇಂತಹ ತರಾತುರಿ ಕ್ರಮವನ್ನು ಕೈಗೊಳ್ಳದಂತೆ ಎಐಡಿಎಸ್‌ಓ ಸಂಘಟನೆ ಹಾಗೂ ದಂತ ವೈದ್ಯಕೀಯ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಈ ವರ್ಷದ ಪರೀಕ್ಷಾ ವೇಳಾಪಟ್ಟಿ ಮತ್ತು ಶೈಕಣಿಕ ವೇಳಾ ಪಟ್ಟಿಯನ್ನು ಯೋಜಿಸುವಲ್ಲಿ, ಶಿಕ್ಷಣ ತಜ್ಞರು, ಉಪನ್ಯಾಸಕರು, ವಿದ್ಯಾರ್ಥಿಗಳೂ ಪ್ರಜಾತಾಂತ್ರಿಕವಾಗಿ ಒಳಗೊಳ್ಳುವಂತೆ ವಿಶ್ವವಿದ್ಯಾನಿಲಯವು ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.