Advertisement
ಪ್ರತೀ ಅಭ್ಯರ್ಥಿ ಗೆಲ್ಲಲು ವಿಧಾನಸಭೆಯ ಕನಿಷ್ಠ 19 ಶಾಸಕರ ಮತ ಬೇಕಾಗುತ್ತದೆ. ಅದರಂತೆ ಕಾಂಗ್ರೆಸ್‌ನ 7, ಬಿಜೆಪಿಯ 3 ಹಾಗೂ ಜೆಡಿಎಸ್ ಓರ್ವ ಅಭ್ಯರ್ಥಿ ಗೆಲ್ಲುವ ಅವಕಾಶಗಳಿರುವುದರಿಂದ ಹೆಚ್ಚುವರಿ ಅಭ್ಯರ್ಥಿಯನ್ನು ಹಾಕಿಲ್ಲ. ಆದರೆ ಕಾಂಗ್ರೆಸ್‌ನ ಆಸಿಫ್ ಪಾಶಾ ಎನ್ನುವವರು ನಾಮಪತ್ರ ಸಲ್ಲಿಸಿದ್ದಾರೆ. ಸೂಚಕರು, ಅನುಮೋದಕರ ಹೆಸರು ಹಾಗೂ ಸಹಿ ಇಲ್ಲದಿರುವುದರಿಂದ ಜೂ. 4ರಂದು ನಾಮಪತ್ರ ಪರಿಶೀಲನೆ ವೇಳೆ ಅದು ತಿರಸ್ಕೃತಗೊಳ್ಳುವ ಸಾಧ್ಯತೆಗಳಿವೆ. ನಾಮಪತ್ರ ವಾಪಾಸ್‌ಗೆ ಜೂ. 6 ಕೊನೆಯ ದಿನ.
ಪರಿಷತ್ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ರವಿವಾರಷ್ಟೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಿತ್ತು. ಆದರೆ ಜೆಡಿಎಸ್ ತನ್ನ ಅಭ್ಯರ್ಥಿ ಯಾರೆಂಬುದನ್ನು ಸ್ಪಷ್ಟಪಡಿಸಿರಲಿಲ್ಲ. ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ಸೋಮವಾರ ವಿಧಾನಸೌಧದಲ್ಲಿ ಶಾಸಕಾಂಗ ಸಭೆ ನಡೆಸಿ ಜವರಾಯಿಗೌಡ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ ಕುಮಾರಸ್ವಾಮಿ ಅವರು ಎಲ್ಲರಿಗಿಂತ ಮೊದಲು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನೂ ಮುಗಿಸಿದರು.
Related Articles
ಸಿಎಂ, ಡಿಸಿಎಂ ಸಾಥ್
ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ಬಳಿಕ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಆಗಮಿಸಿದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಇತರ ನಾಯಕರ ಜತೆಗೆ ಅಭ್ಯರ್ಥಿಗಳು ಆಗಮಿಸಿದ್ದರು. ಅಷ್ಟೂ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೂ ಸಿಎಂ, ಡಿಸಿಎಂ ಖುದ್ದು ಹಾಜರಿದ್ದು, ಹರಸಿದರು. ಬೋಸರಾಜ್, ಐವನ್ ಡಿ’ಸೋಜಾ, ವಸಂತಕುಮಾರ್ ಮೂರು ನಾಮಪತ್ರ ಸಲ್ಲಿಸಿದರೆ ಯತೀಂದ್ರ, ಬಿಲ್ಕಿಸ್ ಬಾನೋ, ಗೋವಿಂದರಾಜು ಎರಡೆರಡು ನಾಮಪತ್ರ ಸಲ್ಲಿಸಿದರು. ಜಗದೇವ್ ಗುತ್ತೇದಾರ್ ಒಂದು ಸೆಟ್ ಮಾತ್ರ ಸಲ್ಲಿಸಿದರು.
Advertisement
ರಾಜ್ಯಾಧ್ಯಕ್ಷರಿಗೆ ಕಾದ ಕಲಿಗಳುಬಿಜೆಪಿಯ ಸಿ.ಟಿ. ರವಿ, ಎನ್. ರವಿಕುಮಾರ್ ಹಾಗೂ ಡಾಣ ಎಂ.ಜಿ. ಮುಳೆ ತಲಾ ಒಂದೊಂದು ಸೆಟ್ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಎಂ.ಡಿ. ಲಕ್ಷ್ಮೀನಾರಾಯಣ ಹಾಜರಿದ್ದರು. ಬಳಿಕ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಆಗಮಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬರುವುದು ತಡವಾದ್ದರಿಂದ ಬಿಜೆಪಿ ಅಭ್ಯರ್ಥಿಗಳು ಮತ್ತೂಂದು ಸೆಟ್ ನಾಮಪತ್ರ ಸಲ್ಲಿಸಲು ಕಾಯುವಂತಾಗಿತ್ತು. ವಿಜಯೇಂದ್ರ ಆಗಮನದ ಬಳಿಕ ಬಿಜೆಪಿ ನಾಯಕರೆಲ್ಲರೂ ಒಟ್ಟಾಗಿ ತೆರಳಿ ಉಮೇದುವಾರಿಕೆ ಸಲ್ಲಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಪರಸ್ಪರ ಶುಭ ಹಾರೈಸಿಕೊಂಡ ಬಿಜೆಪಿ ಜೆಡಿಎಸ್
ಬಿಜೆಪಿಯ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ವಿಧಾನಸೌಧದಲ್ಲಿರುವ ಚುನಾವಣಾ ಧಿಕಾರಿ ಕಚೇರಿಯಿಂದ ವಿಪಕ್ಷದ ನಾಯಕರ ಕೊಠಡಿಯತ್ತ ಹೊರಟಿದ್ದರು. ಇದೇ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಮಿತ್ರಪಕ್ಷದ ನಾಯಕರು ಇರುವುದನ್ನು ಮನಗಂಡು ಕೊಠಡಿಯೊಳಗೆ ತೆರಳಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಬಳಿಕ ಬಿಜೆಪಿ ಜೆಡಿಎಸ್ ನಾಯಕರು ಪರಸ್ಪರ ಶುಭ ಹಾರೈಸಿಕೊಂಡರು.