ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೊಳಿಸುವ ತಮ್ಮ ಸರ್ಕಾರದ ನಿಲುವನ್ನು ಪುನರುಚ್ಚರಿಸಿದ್ದಾರೆ. ಯಾವುದೇ ಪ್ರಜಾಪ್ರಭುತ್ವ ದೇಶವು ವೈಯಕ್ತಿಕ ಕಾನೂನುಗಳನ್ನು ಹೊಂದಿಲ್ಲ ಎಂದು ಶಾ ಹೇಳಿದ್ದಾರೆ.
ಇಂಡಿಯಾ ಟುಡೇ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ? ವೈಯಕ್ತಿಕ ಕಾನೂನು ಬೇಕೆ? ಯಾವುದೇ ದೇಶ ಎಂದಿಗೂ ಹಾಗೆ ನಡೆದಿಲ್ಲ. ಜಗತ್ತಿನ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವೈಯಕ್ತಿಕ ಕಾನೂನುಗಳಿಲ್ಲ. ಅದು ಭಾರತದಲ್ಲಿ ಯಾಕೆ ಇದೆ?” ಎಂದರು.
ಕೆಲವು ಮುಸ್ಲಿಂ ದೇಶಗಳೇ ಶರಿಯಾ ಕಾನೂನನ್ನು ಅನುಸರಿಸುವುದಿಲ್ಲ. ಕಾಲ ಮುಂದೆ ಹೋಗಿದೆ ಈಗ ಭಾರತವೂ ಮುನ್ನಡೆಯಬೇಕಾಗಿದೆ ಎಂದರು.
2024ರ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆಯು ಪ್ರಧಾನ ಅಂಶವಾಗಿದೆ. ಸತತ ಮೂರನೇ ಬಾರಿಗೆ ತಾವು ಅಧಿಕಾರಕ್ಕೆ ಬಂದರೆ ಯುಸಿಸಿಯನ್ನು ಜಾರಿಗೆ ತರುತ್ತೇವೆ ಎಂದು ಬಿಜೆಪಿ ಹೇಳಿಕೊಂಡಿದೆ.
ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಏಕರೂಪ ನಾಗರಿಕ ಸಂಹಿತೆಯನ್ನು ಹೊಂದಿದ್ದು, ಭಾರತವೂ ಅದೇ ರೀತಿ ಮಾಡುವ ಸಮಯ ಬಂದಿದೆ ಎಂದು ಅಮಿತ್ ಶಾ ಹೇಳಿದರು. ಯುಸಿಸಿಯು ಸಂವಿಧಾನವನ್ನು ರಚಿಸುವಾಗ ಸಂವಿಧಾನ ಸಭೆಯು ದೇಶಕ್ಕೆ ನೀಡಿದ ಭರವಸೆಯಾಗಿದೆ ಎಂದು ಅವರು ಹೇಳಿದರು.